ನಿಮ್ಮ ವಾಹನದಲ್ಲಿದೆಯಾ ಕಣ್ಣುಕುಕ್ಕುವ ಎಲ್​ಇಡಿ ಲೈಟ್? ಇನ್ನು ಮುಂದೆ ಬೀಳಲಿದೆ ಕೇಸ್, ಸರ್ಕಾರದಿಂದ ಹೊಸ ಆದೇಶ

|

Updated on: Jun 20, 2024 | 12:42 PM

LED lights in Vehicles; ಕಾರು, ಬೈಕ್ ಹಾಗೂ ಇತರ ವಾಹನಗಳಿಗೆ ಕಣ್ಣುಕುಕ್ಕುವಂಥ ಎಲ್​ಇಡಿ ಲೈಟ್ ಹಾಕಿಸಿಕೊಳ್ಳುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇದರಿಂದ ಎದುರುಬದಿಯಲ್ಲಿ ವಾಹನ ಚಲಾಯಿಸುವವರಿಗೆ ವಿಪರೀತ ತೊಂದರೆಯಾಗುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ. ಇದರ ವಿರುದ್ಧ ಕರ್ನಾಟಕ ಸಂಚಾರ ಪೊಲೀಸರು ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಮಾಲೀಕರ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಜುಲೈನಲ್ಲಿ ವಿಶೇಷ ಕಾರ್ಯಾಚರಣೆಯೂ ನಡೆಯಲಿದೆ. ಈ ಕುರಿತು ವಿವರ ಇಲ್ಲಿದೆ.

ನಿಮ್ಮ ವಾಹನದಲ್ಲಿದೆಯಾ ಕಣ್ಣುಕುಕ್ಕುವ ಎಲ್​ಇಡಿ ಲೈಟ್? ಇನ್ನು ಮುಂದೆ ಬೀಳಲಿದೆ ಕೇಸ್, ಸರ್ಕಾರದಿಂದ ಹೊಸ ಆದೇಶ
ನಿಮ್ಮ ವಾಹನದಲ್ಲಿದೆಯಾ ಕಣ್ಣುಕುಕ್ಕುವ ಎಲ್​ಇಡಿ ಲೈಟ್? ಇನ್ನು ಮುಂದೆ ಬೀಳಲಿದೆ ಕೇಸ್
Follow us on

ಬೆಂಗಳೂರು, ಜೂನ್ 20: ಕಾರು, ಬೈಕ್ ಹಾಗೂ ಇತರ ವಾಹನಗಳಲ್ಲಿ ಕಣ್ಣುಕುಕ್ಕುವಂಥ ಎಲ್​ಇಡಿ ಲೈಟ್​ಗಳನ್ನು (LED lights) ಅಳವಡಿಸುವುದರ ವಿರುದ್ಧ ಕಠಿಣ ಕ್ರಮಕ್ಕೆ ಸಂಚಾರ ಪೊಲೀಸರು (Traffic Police) ಮುಂದಾಗಿದ್ದಾರೆ. ಈ ರೀತಿಯ ಲೈಟ್​ಗಳನ್ನು ಅಳವಡಿಸುವುದರಿಂದ ಎದುರಿನಿಂದ ಬರುವ ವಾಹನಗಳ ಚಾಲಕರಿಗೆ ತೊಂದರೆಯಾಗುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ಇಂಥ ಲೈಟ್​ಗಳನ್ನು ಅಳವಡಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಉಲ್ಲಂಘಿಸಿದವರು ದಂಡ ಸೇರಿದಂತೆ ಇತರ ಕಾನೂನು ಕ್ರಮಗಳನ್ನು ಎದುರಿಸಬೇಕಾಗಲಿದೆ. ಈ ಕುರಿತು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ (ADGP Alok Kumar) ಕುಮಾರ್ ಮಾಹಿತಿ ನೀಡಿದ್ದಾರೆ.

ರಸ್ತೆ ಅಪಘಾತಗಳು ಮತ್ತು ಅದರಿಂದಾಗುವ ಸಾವು-ನೋವುಗಳನ್ನು ತಪ್ಪಿಸಲು, ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಲೈಟ್​ಗಳನ್ನು ಮಾತ್ರ ವಾಹನಗಳಲ್ಲಿ ಅಳವಡಿಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ ಎಂದು ಅಲೋಕ್ ಕುಮಾರ್ ‘ಎಎನ್​ಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಎಡಿಜಿಪಿ ಅಶೋಕ್ ಕುಮಾರ್ ಸಂದೇಶ


ನಾವು ವಾಹನಗಳಲ್ಲಿ ಎಲ್​ಇಡಿ ಲೈಟ್​ಗಳನ್ನು ನಿಷೇಧಿಸುವ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ವಾಹನಗಳಲ್ಲಿ ಕಣ್ಣುಕುಕ್ಕುವಂಥ ಲೈಟ್​​ಗಳನ್ನು ಬಳಸುತ್ತಿದ್ದರೆ ಮತ್ತು ವಾಹನಗಳಲ್ಲಿ ಅಳವಡಿಸಿರುವ ಲೈಟ್​​ಗಳು ಇತರ ಚಾಲಕರಿಗೆ ತೊಂದರೆಯನ್ನು ಉಂಟು ಮಾಡುವಂತೆ ಇದ್ದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲು ನಾವು ಸೂಚಿಸುತ್ತಿದ್ದೇವೆ. ಎಲ್ಇಡಿ ಲೈಟ್​​ಗಳು ಇತರ ಚಾಲಕರಿಗೆ ಸಮಸ್ಯೆ ಉಂಟುಮಾಡುತ್ತವೆ. ಹೀಗಾಗಿ ನಿಯಮ ಉಲ್ಲಂಘಿಸುವವರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.

ಆದೇಶದಲ್ಲೇನಿದೆ?

ವಾಹನಗಳಲ್ಲಿ ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ನಮೂದಿಸಿರುವ ಮಾನದಂಡದಂತೆ ಲೈಟ್​​ಗಳನ್ನು ಅಳವಡಿಸುವ ಕುರಿತು ಸಚಾರಿ ಪೊಲೀಸರಿಗೆ ಆದೇಶ ಹೊರಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತಿದ್ದು ಇದರಿಂದ ಎದುರು ಬದಿಯಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವು ತೊಂದರೆಯುಂಟಾಗುತ್ತಿದೆ. ಇದರಿಂದ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಕಂಡು ಬಂದಿರುತ್ತದೆ. ಈ ಪೈಕಿ ಪ್ರಮುಖವಾಗಿ ಭಾರಿ ಗಾತ್ರ ವಾಹನಗಳಾದ ಲಾರಿ, ಟ್ರಕ್, ಬಸ್ ಮುಂತಾದವುಗಳು ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ (dazzling and glaring) ಎಲ್‌ಇಡಿ ದೀಪಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸುತ್ತಿರುವುದರಿಂದ ಇತರೆ ವಾಹನ ಚಾಲಕರುಗಳಿಗೆ ವಾಹನ ಚಲಾಯಿಸಲು ತೊಂದರೆಯಾಗು ತ್ತಿರುತ್ತದೆ. ಎಲ್ಲಾ ವಾಹನ ಸವಾರರು ತಮ್ಮ ತಮ್ಮ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡಂದಂತೆ ಹೆಡ್‌ಲೈಟ್‌ಗಳನ್ನೇ ಅಳವಡಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಒಂದು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವಾಹನ ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 177 ರಡಿ ಪ್ರಕರಣಗಳನ್ನು ದಾಖಲಿಸಬಹುದಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಪರಿಹಾರಕ್ಕೆ ಸುರಂಗ ಮಾರ್ಗ: ಎಲ್ಲೆಲ್ಲಿ ಹಾದುಗೋಗಲಿದೆ? ಎಂಟ್ರಿ – ಎಕ್ಸಿಟ್ ವಿವರ ಇಲ್ಲಿದೆ ನೋಡಿ

ಘಟಕಾಧಿಕಾರಿಗಳು ತಮ್ಮ ತಮ್ಮ ಘಟಕಗಳಲ್ಲಿ ಸಂಚರಿಸುವ ವಾಹನಗಳಲ್ಲಿ ಈ ರೀತಿಯ ಹೆಚ್ಚು ಪುಟದ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ಲೈಟ್​ಗಳನ್ನು ಅಳವಡಿಸಿರುವುದು ಕಂಡು ಬಂದಲ್ಲಿ ಅಂತಹ ವಾಹನ ಸವಾರದ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 177 ಅಡಿ ಪ್ರಕರಣಗಳನ್ನು ದಾಖಲು ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಜುಲೈನಲ್ಲಿ ವಿಶೇಷ ಕಾರ್ಯಾಚರಣೆ

ವಾಹನಗಳಲ್ಲಿ ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳನ್ನು ಅಳವಡಿಸಿರುವ ವಾಹನ ಚಾಲಕರ ವಿರುದ್ಧ ಜುಲೈ ಮಾಹೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ದಾಖಲಿಸಿ, ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು ಎಂದೂ ಸೂಚನೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:25 am, Thu, 20 June 24