ಬೆಂಗಳೂರು: ಮುಂದಿನ ತಿಂಗಳು ಹಾವೇರಿಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ, ಸಾಹಿತಿ ದೊಡ್ಡರಂಗೇಗೌಡರನ್ನು ಸಾಮಾಜಿಕ ಜಾಲತಾಣಿಗರು ವ್ಯಾಪಕವಾಗಿ ಟೀಕಿಸಿದ್ದರು. ಅಣಕವಾಡಿದ್ದರು. ವ್ಯಂಗ್ಯವಾಗಿ ಸಂದೇಶಗಳನ್ನು ಹಂಚಿಕೊಂಡಿದ್ದರು. ಈ ಬಗ್ಗೆ, ದೊಡ್ಡರಂಗೇಗೌಡರು ಬೇಸರಿಸಿಕೊಂಡಂತೆ ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳ ವಿವಾದಗಳಿಂದ ನೊಂದಿರುವಂತೆ ಕಾಣುತ್ತಿದೆ. ಇಷ್ಟಕ್ಕೂ ‘ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಂಡರೆ ತಪ್ಪೇನು?’ ಎಂಬುದು ಅವರ ಅಭಿಪ್ರಾಯವಾಗಿತ್ತು.
ನೆಟ್ಟಿಗರ ಗಲಾಟೆಗೆ ದೊಡ್ಡರಂಗೇಗೌಡರು ತಮ್ಮ ಕೈಬರಹದ ಮುಖಾಂತರವೇ ಪ್ರತಿಕ್ರಿಯೆ ನೀಡಿದ್ದಾರೆ. ನಾನೇನೂ ಯಾವುದೇ ಭಾಷೆಯನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಿಲ್ಲ. ನಾನು ಭಕ್ತಿಪೂರ್ವಕವಾಗಿ ನನ್ನ ಅಂತರಾಳದಿಂದ ಕನ್ನಡವನ್ನು ಆರಾಧಿಸುತ್ತೇನೆ. ಕನ್ನಡವನ್ನೇ ನನ್ನ ತಲೆಯ ಮೇಲೆ ಹೊತ್ತು ಮೆರೆಸುತ್ತೇನೆ. ಕನ್ನಡಿಗರ ಮೇಲೆ ಹಿಂದಿ ಭಾಷೆಯ ಹಾಗೂ ಇಂಗ್ಲಿಷ್ ಹೇರಿಕೆಯ ರೀತಿ-ನೀತಿಯನ್ನು ನಾನು ಸಹಿಸುವುದಿಲ್ಲ. ನನ್ನ ಮಾತುಗಳು ಕನ್ನಡ ಜನರ ಮನಸ್ಸನ್ನು ನೋಯಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅವರದೇ ಸ್ವಹಸ್ತಾಕ್ಷರ ಬರಹದ ಪ್ರತಿ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಗೌಡರು, 2018ರಲ್ಲಿ ಕನ್ನಡ ದಿನ ಪತ್ರಿಕೆಯೊಂದಕ್ಕೆ ನರೇಂದ್ರ ಮೋದಿ ಬಗ್ಗೆ ಕವಿತೆಯೊಂದನ್ನು ಬರೆದಿದ್ದರು. ಅಲ್ಲದೆ, ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಂಡರೆ ತಪ್ಪೇನು ಎಂದು ಮಾತನಾಡಿದ್ದರು. ಈ ಕಾರಣಗಳಿಗೆ ದೊಡ್ಡರಂಗೇಗೌಡರಿಗೆ ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ ಕೊಡಲಾಗಿದೆ. ಹಿಂದಿ ಬಗ್ಗೆ ಒಲವಿರುವ ಸಾಹಿತಿ ಎಂದು ಗೌಡರನ್ನು ನೆಟ್ಟಿಗರು ಬಹುವಾಗಿ ಟೀಕಿಸಿದ್ದರು. ಈ ಬೆಳವಣಿಗೆಗಳಿಂದ ಮನನೊಂದಿರುವ ದೊಡ್ಡರಂಗೇಗೌಡರು ರಾಜ್ಯದ ಜನತೆಯ ಬಳಿ ಇದೀಗ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ಸುದ್ದಿ ವಿಶ್ಲೇಷಣೆ| 86 ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡರ ಟೀಕೆ ಎಷ್ಟು ಸರಿ?
Published On - 1:33 pm, Wed, 27 January 21