ಹುಬ್ಬಳ್ಳಿ: ರಾಮ ಮಂದಿರಕ್ಕೆ ದೇಣಿಗೆ ನೀಡುವುದು ಕಡ್ಡಾಯವಲ್ಲ. ಇದು ಜನರ ಭಾವನೆಯ ವಿಷಯ. ದೇಣಿಗೆ ನೀಡದವರು ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ. ನೀವು ದೇಣಿಗೆ ಕೊಡದಿದ್ದರೆ ತಕರಾರಿರಲಿಲ್ಲ. ಆದರೆ ನಾನು ನನ್ನ ಊರಲ್ಲಿ ರಾಮಮಂದಿರ ಕಟ್ಟಿಸುತ್ತೇನೆ, ಅಯೋಧ್ಯೆಯಲ್ಲೇ ಏಕೆ ರಾಮ ಮಂದಿರ ಕಟ್ಟಬೇಕೆಂದು ಪ್ರಶ್ನಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಸದ್ಯ ಪ್ರಚಲಿತದಲ್ಲಿರುವ ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿರೋಧ ಪಕ್ಷಗಳ ನಾಯಕರ ಹೇಳಿಕೆಯನ್ನು ಲೇವಡಿ ಮಾಡಿದರು.
ದಿಶಾರವಿ ಬಂಧನದ ಕುರಿತ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಅಸಂಬದ್ಧ ಎಂದು ವ್ಯಾಖ್ಯಾನಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗ್ರೇಟಾ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್ಕಿಟ್ನಲ್ಲಿ ಖಾಲಿಸ್ತಾನ್ ಚಳವಳಿ ಬಗ್ಗೆ ಚರ್ಚೆ ಆಗಿರುವುದು ಸ್ಪಷ್ಟವಾಗಿ ಅತ್ಯಂತ ಸ್ಪಷ್ಟವಾಗಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಲು ಉಗ್ರ ದಾವೂದ್ ಇಬ್ರಾಹಿಂನನ್ನೂ ಸಹ ಬೆಂಬಲಿಸುವ ಮಾನಸಿಕತೆ ಬೆಳೆಸಿಕೊಂಡಿದ್ದಾರೆ. PFI ಸದಸ್ಯರ ಮೇಲಿನ ಪ್ರಕರಣ ಮರಳಿ ಪಡೆದಿರುವುದು ವಿರೋಧ ಪಕ್ಷದವರು ಹಿಂದೂ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ. ರಾಜಕೀಯ ಲಾಭಕ್ಕಾಗಿ ಎಂತಹ ಹೀನಕೃತ್ಯಕ್ಕೆ ಇಳಿಯಲು ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ದರಾಗಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಅವರು ಹರಿಹಾಯ್ದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಾಲಿಶ ಹೇಳಿಕೆ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಲೆಕ್ಕ ಕೇಳಿದ ವಿಚಾರವನ್ನೂ ಪ್ರಸ್ತಾಪಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದೇಣಿಗೆ ಸಂಗ್ರಹ ವಿಚಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ದುರಾದೃಷ್ಟಕರ. 2 ಬಾರಿ ಸಿಎಂ ಆದವರು ಮಾಹಿತಿ ಪಡೆದು ಹೇಳಿಕೆ ಕೊಡಬೇಕಿತ್ತು. ಸರ್ಕಾರ ರಚಿಸಿದ ಟ್ರಸ್ಟ್ ಆದ ಕಾರಣ ಎಲ್ಲದಕ್ಕೂ ಲೆಕ್ಕ ಇಟ್ಟಿರುತ್ತಾರೆ. ಪ್ರಚಾರ ಸಿಗುತ್ತದೆ ಎಂದು ಬಾಲಿಶತನದ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಂ ಜನಾಂಗವನ್ನು ತುಷ್ಟೀಕರಣ ಮಾಡುವಂತಹ ಇಂತಹ ಹೇಳಿಕೆಯಿಂದ ಬೇಸತ್ತ ಮುಸಲ್ಮಾನರು ಸಹ ಇವರನ್ನು ನಂಬುವುದಿಲ್ಲ. ರಾಜ್ಯದಲ್ಲಿ ಪಿಎಫ್ಐ, ಎಸ್ಡಿಪಿಐಗೆ ಬೆಂಬಲ ಕೊಡುತ್ತಾರೆ. ಶಾಸಕ ಅಖಂಡ ಶ್ರೀನಿವಾಸ ಮನೆ ಮೇಲೆ ದಾಳಿ ಆದಾಗ ಖಂಡಿಸಲಿಲ್ಲ. ಏಕೆಂದರೆ, ಖಂಡಿಸುವ ಧೈರ್ಯ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಇರಲಿಲ್ಲ. ಇವೆಲ್ಲವೂ ಕಾಂಗ್ರೆಸ್ ಪಕ್ಷದವರ ಎಡಬಿಡಂಗಿ ನೀತಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಒಂದು ಎಕರೆ ಜಾಗ ಕೊಡುತ್ತೇನೆ.. ಸ್ವಂತ ಹಣದಿಂದ ಶ್ರೀರಾಮ ಮಂದಿರ ಕಟ್ಟಿಸಿ -ಸಿದ್ದರಾಮಯ್ಯಗೆ ರೈತನ ನೇರ ಸವಾಲ್