ಮದ್ಯಪಾನ ಮಾಡಿ ಶಾಲಾ ಬಸ್​ ಚಾಲನೆ: 36 ಮಂದಿ ಚಾಲಕರ ವಿರುದ್ಧ ಕೇಸ್​; ಡಿಎಲ್ ರದ್ದಿಗೂ ಶಿಫಾರಸು

ಶಾಲಾ ಬಸ್​ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಬೆಂಗಳೂರಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಶಾಲಾ ವಾಹನ ಚಾಲಕರಿಗೆ ಡ್ರಂಕ್‌ ಆ್ಯಂಡ್​ ಡ್ರೈವ್ ಟೆಸ್ಟ್ ನಡೆಸಿದ್ದಾರೆ. ಈ ವೇಳೆ ಹಲವರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದು ಗೊತ್ತಾಗಿದ್ದು, ಅಂತವರ ವಿರುದ್ಧ ಕೇಸ್​ ದಾಖಲಿಸಲಾಗಿದೆ. ಡಿಎಲ್ ರದ್ದತಿಗೂ ಶಿಫಾರಸು ಮಾಡಲಾಗಿದೆ.

ಮದ್ಯಪಾನ ಮಾಡಿ ಶಾಲಾ ಬಸ್​ ಚಾಲನೆ: 36 ಮಂದಿ ಚಾಲಕರ ವಿರುದ್ಧ ಕೇಸ್​; ಡಿಎಲ್ ರದ್ದಿಗೂ ಶಿಫಾರಸು
ಶಾಲಾ ಬಸ್​ ಚಾಲಕರ ತಪಾಸಣೆ
Updated By: ಪ್ರಸನ್ನ ಹೆಗಡೆ

Updated on: Oct 24, 2025 | 5:23 PM

ಬೆಂಗಳೂರು, ಅಕ್ಟೋಬರ್​ 24: ಮದ್ಯಪಾನ ಮಾಡಿ ಶಾಲಾ ಬಸ್​ಗಳನ್ನು ಚಾಲನೆ ಮಾಡುವ ಚಾಲಕರಿಗೆ ಬೆಂಗಳೂರು (Bengaluru) ಸಂಚಾರ ಪೊಲೀಸರು ಶಾಕ್​ ಕೊಟ್ಟಿದ್ದಾರೆ. ಇಂದು (ಅ.24) ಬೆಳಗ್ಗೆ 7 ಗಂಟೆಯಿಂದ 9.30ರ ವರೆಗೆ ಬೆಂಗಳೂರಿನ ವಿವಿಧೆಡೆ ಶಾಲಾ ಬಸ್ ಚಾಲಕರ ತಪಾಸಣೆ ಮಾಡಲಾಗಿದ್ದು, ಒಟ್ಟು 5,881 ಡ್ರೈವರ್​ಗಳನ್ನು ಪರೀಕ್ಷಿಸಲಾಗಿದೆ. ಆ ಪೈಕಿ 36 ಮಂದಿ ಮದ್ಯ ಸೇವಿಸಿ ಬಸ್​ ಚಾಲನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪಾನಮತ್ತ ಚಾಲಕರ ವಿರುದ್ಧ ಕೇಸ್​ ದಾಕಲಿಸಲಾಗಿದ್ದು, ಡಿಎಲ್ ರದ್ದುಪಡಿಸುವಂತೆ RTOಗೆ ಸಂಚಾರಿ ಪೊಲೀಸರು ಪತ್ರ ಬರೆದಿದ್ದಾರೆ.

ಜಂಟಿ ಪೊಲೀಸ್ ಆಯುಕ್ತರ ಸೂಚನೆಯಂತೆ ಕಾರ್ಯಾಚರಣೆ

ಶಾಲಾ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಸಂಬಂಧ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತರ ಸೂಚನೆಯಂತೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಶಾಲಾ ವಾಹನ ಚಾಲಕರಿಗೆ ಡ್ರಂಕ್‌ ಆ್ಯಂಡ್​ ಡ್ರೈವ್ ಟೆಸ್ಟ್ ಮಾಡಲಾಗಿದ್ದು, ಈ ವೇಳೆ ಹಲವರು ಕುಡಿದು ವಾಹನ ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ಕೆಲ ವರ್ಷಗಳ ಅಂಕಿ ಅಂಶವನ್ನು ಗಮನಿಸಿದರೆ ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2023ರಲ್ಲಿ 8 ಕೇಸ್​, 2024ರಲ್ಲಿ 139 ಪ್ರಕರಣ ದಾಖಲಾಗಿದ್ದರೆ 2025ರ ಮೊದಲಾರ್ಧದಲ್ಲೇ (ಜೂನ್​ 2025ರ ವರೆಗೆ) 67 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಶಾಲಾ ಬಸ್​ಗಳಲ್ಲಿ ತೆರಳುವ ಮಕ್ಕಳು ಎಷ್ಟು ಸೇಫ್​ ಎಂಬ ಪ್ರಶ್ನೆಯೂ ಪಾಲಕರಲ್ಲಿ ಉದ್ಭವಿಸಿದೆ. ಈ ಹಿನ್ನಲೆ ಶಾಲಾ ಬಸ್​ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಸಂಚಾರಿ ಪೊಲೀಸರು  ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:21 pm, Fri, 24 October 25