ಬೆಂಗಳೂರು(ಜು.14): ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಆಕ್ರಮ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪದ ಮೇಲೆಗೆ ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಿದೆ. ಇನ್ನು ಇಡಿ, ನ್ಯಾಯಾಲಯದ ಮಹತ್ವದ ಅಂಶವೊಂದನ್ನು ಬಿಚ್ಚಿಟ್ಟಿದೆ. 20.19 ಕೋಟಿ ರೂ. ಹಣವನ್ನು ತಾವು ಉಸ್ತುವಾರಿ ಹೊತ್ತಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಗೇಂದ್ರ ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ನಿರ್ದೇಶನಾಲಯ (ಇ.ಡಿ.) ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.
ನಾಗೇಂದ್ರ ಅವರನ್ನು ಬಂಧಿಸಿದ ಬಳಿಕ ಹೆಚ್ಚಿನ ತನಿಖೆ ಸಲುವಾಗಿ ವಶಕ್ಕೆ ಪಡೆಯಲು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ಅದರಲ್ಲಿ ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಗರಣದ ಹಣ ವೆಚ್ಚವಾಗಿರುವ ಬಗ್ಗೆ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ: ಮಾಜಿ ಸಚಿವ ನಾಗೇಂದ್ರ ಜುಲೈ 18ರವೆರೆಗೆ ಇಡಿ ಕಸ್ಟಡಿಗೆ
ಇದೇ ವರ್ಷದ ಮಾರ್ಚ್ 4ರಂದು 21ರಂದು 44 ಕೋಟಿ ರೂ, ಮಾ. 22ರಂದು 33 ಕೋಟಿ ರೂ. ಹಾಗೂ ಮೇ 21ರಂದು 50 ಕೋಟಿ ರೂ. ಸೇರಿ ದಂತ ಒಟ್ಟು 187.33 ಕೋಟಿ ರೂ. ಹಣವು ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಗಳಿಗೆ ರಾಜ್ಯ ಖಜಾನೆ-2ರಿಂದ ಜಮೆಯಾಗಿತ್ತು. ಈ ಹಣದ ಪೈಕಿ 94.73 ಕೋಟಿ ರೂ. ಹಣವು ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಖಾತೆಯಿಂದ ಹೈದರಾಬಾದ್ ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ ರವಾನೆಯಾಗಿತ್ತು. ಆದರೆ ಅಕ್ರಮ ಸದ್ದು ಮಾಡಿದ ಕೂಡಲೇ 5 ಕೋಟಿ ರೂ. ಮರಳಿ ನಿಗಮದ ಖಾತೆಗೆ ಬಂದಿತ್ತು. ಇನ್ನುಳಿದ 89.73 ಕೋಟಿ ರೂ. ಹಣವನ್ನು ಹೈದರಾಬಾದ್ ಗ್ಯಾಂಗ್ ದೋಚಿತ್ತು ಎಂಬ ಆರೋಪ ಬಂದಿದೆ.
ಹೌದು… ವಾಲ್ಮೀಕಿ ನಿಗಮದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿಕೊಂಡಿದ್ದಾರೆ ಎನ್ನುವ ಇಡಿ ಆರೋಪಕ್ಕೆ ಹಗರಣದ ಟೈಮ್ಲೈನ್ ಪುಷ್ಟಿ ನೀಡುತ್ತಿವೆ. ಯೂನಿಯನ್ ಬ್ಯಾಂಕ್‌ನ ಹೊಸ ಖಾತೆಗೆ 187 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಬಳಿಕ ಹೈದರಾಬಾದ್ ಫಸ್ಟ್ ಬ್ಯಾಂಕ್ನಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ 18 ನಕಲಿ ಖಾತೆಗಳನ್ನು ಓಪನ್ ಮಾಡಲಾಗಿದ್ದು, ಈ ಖಾತೆಗಳಿಗೆ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಹಂತ ಹಂತವಾಗಿ ಬರೋಬ್ಬರಿ 89 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ.
ಮೇ 7ರಂದು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಆದ್ರೆ, ಚುನಾವಣೆಗೂ ಮುನ್ನ ನಿಗಮದ ಹಣ ಆರೋಪಿಗಳ ಕೈಸೇರಿತ್ತು. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ತಿಂಗಳಲ್ಲಿ ಒಟ್ಟು18 ನಕಲಿ ಖಾತೆಗಳಿಗೆ ಬರೋಬ್ಬರಿ 89 ಕೋಟಿ ರೂ. ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಚುನಾವಣೆಗೂ ಒಂದು ದಿನ ಮುಂಚೆ ಅಂದರೆ ಮೇ 6ರಂದು ಒಂದು ನಕಲಿ ಖಾತೆಗೆ 5 ಕೋಟಿ ರೂ. ವರ್ಗಾವಣೆ ಆಗಿದೆ.
ಒಟ್ಟಾರೆ ಮೇ 7ಕ್ಕಿಂತ ಮುನ್ನ ನಿಗಮದ ಹಣ ಅಕ್ರಮವಾಗಿ ಆರೋಪಿಗಳ ಕೈ ಸೇರಿತ್ತು. ಈ ಹಣದಲ್ಲೇ ನಾಗೇಂದ್ರ 20.19 ಕೋಟಿ ರೂ. ಹಣ ಚುನಾವಣೆಗೆ ಬಳಕೆ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ