ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ: ಮಾಜಿ ಸಚಿವ ನಾಗೇಂದ್ರ ಜುಲೈ 18ರವೆರೆಗೆ ಇಡಿ ಕಸ್ಟಡಿಗೆ
ವಾಲ್ಮೀಕಿ ನಿಗಮದಲ್ಲಿನ ಬಹುಕೋಟಿ ರೂಪಾಯಿ ಅಕ್ರಮ ಪ್ರಕರಣ ಸಂಬಂಧ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಲಾಗಿದ್ದು ಜುಲೈ 18ರವರೆಗೆ ಇಡಿ ಕಸ್ಟಡಿಗೆ ನೀಡಿ ನ್ಯಾ.ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು, ಜುಲೈ.13: ವಾಲ್ಮೀಕಿ ನಿಗಮದಲ್ಲಿನ ಬಹುಕೋಟಿ ರೂಪಾಯಿ ಅಕ್ರಮದಲ್ಲಿ (Valmiki Corporation Scam) ಇಡಿ ಅಧಿಕಾರಿಗಳು ಪರಿಶಿಷ್ಟ ಪಂಗಡ ಇಲಾಖೆ ಮಾಜಿ ಸಚಿವರಾಗಿದ್ದ ಬಿ.ನಾಗೇಂದ್ರರನ್ನು (B Nagendra) ಅರೆಸ್ಟ್ ಮಾಡಿದ್ದಾರೆ. ಸದ್ಯ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ನಾಗೇಂದ್ರ ಅವರನ್ನು ಜಡ್ಜ್ ಎದುರು ಹಾಜರುಪಡಿಸಲಾಗಿದ್ದು ಜುಲೈ 18ರವರೆಗೆ ಇಡಿ ಕಸ್ಟಡಿಗೆ ನೀಡಿ ನ್ಯಾ.ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.
ಬುಧವಾರ ಬೆಳಗ್ಗೆಯೇ ನಾಗೇಂದ್ರ, ಬಸನಗೌಡ ದದ್ದಲ್ ಸೇರಿ ಹಲವರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ಇಡಿ ಟೀಂ ರೇಡ್ ಮಾಡಿತ್ತು. ಬುಧುವಾರ ಬೆಳಗ್ಗೆಯಿಂದ ಗುರುವಾರ ರಾತ್ರಿವರೆಗೂ ನಿರಂತರ 48 ಗಂಟೆಗಳ ಕಾಲ ನಾಗೇಂದ್ರರ ಡಾಲರ್ಸ್ ಕಾಲೋನಿಯಲ್ಲಿರುವ ಮನೆಯಲ್ಲಿ ದಾಖಲೆಗಳ ತಲಾಶ್ ನಡೆಸಿತ್ತು. ಮೊನ್ನೆ ಗುರುವಾರ ರಾತ್ರಿ ದಾಳಿ ಮುಗಿಸಿ ತೆರಳಿದ್ದ ಇಡಿ ಟೀ ಮತ್ತೆ ನಿನ್ನೆ ಬೆಳಗ್ಗೆ ನಾಗೇಂದ್ರ ನಿವಾಸಕ್ಕೆ ಎಂಟ್ರಿ ಕೊಟ್ಟು ನಾಗೇಂದ್ರ ಅವರನ್ನು ವಶಕ್ಕೆ ಪಡೆದು ಬಳಿಕ ಬಂಧಿಸಿತ್ತು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಯಿತು. ಬಿ.ನಾಗೇಂದ್ರರನ್ನು ಇಡಿ ಕಚೇರಿಯಿಂದ ಕರೆದೊಯ್ದು ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ಇರುವ ನ್ಯಾಯಾಧೀಶರ ನಿವಾಸದಲ್ಲಿ ಜಡ್ಜ್ ಎದುರು ಹಾಜರುಪಡಿಸಲಾಗಿದ್ದು ಜುಲೈ 18ರವರೆಗೆ ಇಡಿ ಕಸ್ಟಡಿಗೆ ನೀಡಿ ನ್ಯಾ.ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.
ರಾಜಕೀಯವಾಗಿ ಇದನ್ನ ಉಪಯೋಗಿಸಬಾರದು -ಪರಮೇಶ್ವರ್
ಇನ್ನು ಮತ್ತೊಂದೆಡೆ ಈ ಘಟನೆ ಸಂಬಂಧ ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ನಿಗಮದ ಅಕ್ರಮದ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಇಡಿ ಅಧಿಕಾರಿಗಳು ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತಾರೆ. ಮಾಹಿತಿಗಳ ಆಧಾರದ ಮೇಲೆ ಬಿ.ನಾಗೇಂದ್ರರನ್ನು ಬಂಧಿಸಿದ್ದಾರೆ. ರಾಜಕೀಯವಾಗಿ ಇದನ್ನ ಉಪಯೋಗಿಸಬಾರದು. ಕೇಂದ್ರದ ತನಿಖಾ ಸಂಸ್ಥೆಗಳು ರಾಜಕೀಯ ಅಸ್ತ್ರಗಳಾಗಬಾರದು. ತನಿಖೆಗೆ ನಮ್ಮದೇನು ತಕರಾರು ಇಲ್ಲ ಎಂದರು.
ನಾವೂ ಸಹ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದ್ದೇವೆ. ನಾಗೇಂದ್ರ, ದದ್ದಲ್ರನ್ನು ಕರೆದು ಎಸ್ಐಟಿ ವಿಚಾರಣೆ ನಡೆಸಿದ್ದಾರೆ. ಸಿಬಿಐ, ಇಡಿ ರಾಜಕೀಯ ಪಕ್ಷಗಳ ರೀತಿ ಕೆಲಸ ಮಾಡಬಾರದು. ದದ್ದಲ್ ಎಲ್ಲೂ ಹೋಗಿಲ್ಲ, ಇಲ್ಲೇ ಓಡಾಡಿಕೊಂಡು ಇದ್ದಾರೆ ಎಂದರು.
ನಾಗೇಂದ್ರ ವಿರುದ್ಧ ಹಗರಣಕ್ಕೆ ಇದೆ ಪ್ರಬಲ ಸಾಕ್ಷ್ಯ
ನಾಗೇಂದ್ರ ಅವರ ಸೂಚನೆಯಂತೆಯೇ ಅಕೌಂಟ್ ಓಪನ್ ಮಾಡಲಾಗಿದೆ ಅಂತ ನಿಗಮದ ಮಾಜಿ ಎಂಡಿ ಪದ್ಮನಾಭ್ ಹೇಳಿಕೆ ಕೊಟ್ಟಿದ್ದಾರೆ. ಶಾಂಗ್ರಿಲಾ ಹೋಟೆಲ್ನಲ್ಲಿನ ಸಭೆಯಲ್ಲಿ ನಾಗೇಂದ್ರ ಬಂದಿರೋದು, ಹೋಗಿರೋ ಸಿಸಿಟಿವಿ ದೃಶ್ಯಗಳು ಸೆರೆಯಾಗಿದೆ. ಇದಿಷ್ಟೇ ಅಲ್ಲ, ಶಾಂಗ್ರಿಲಾ ಹೋಟೆಲ್ನಲ್ಲಿ ಮಹಜರು ಪ್ರಕ್ರಿಯೆ ವೇಳೆ ಅನೇಕ ಸಾಕ್ಷಿಗಳು ಸಿಕ್ಕಿವೆ. ನಾಗೇಂದ್ರ, ಪಿಎ ದೇವೇಂದ್ರಪ್ಪ, ನೆಕ್ಕಂಟಿ ನಾಗರಾಜ್, ನಾಗೇಶ್ವರ್ ರಾವ್ ಸಭೆಯಲ್ಲಿ ಭಾಗಿಯಾಗಿರೋದು ಗೊತ್ತಾಗಿದೆ. ನಾಗೇಂದ್ರ ಸೂಚನೆಯಂತೆಯೇ ಹಗರಣದಲ್ಲಿ ಭಾಗಿ ಎಂದು ಆರೋಪಿಗಳು ಹೇಳಿಕೆಕೊಟ್ಟಿದ್ದಾರೆ. ಹಾಗೇ ಮೃತ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್ನಲ್ಲಿ ಸಚಿವ ಎಂಬುದು ಉಲ್ಲೇಖವಾಗಿದೆ. ನಾಗೇಂದ್ರ ಆಪ್ತ ಹರೀಶ್ಗೆ ಪದ್ಮನಾಭ್ 25 ಲಕ್ಷ ರೂ. ನೀಡಿರೋದು ಕೂಡ ಬಯಲಾಗಿದೆ. ಹರೀಶ್ ವಿಚಾರಣೆಯಲ್ಲಿ ನಾಗೇಂದ್ರ ಸೂಚನೆಯಂತೆ ಹಣ ಪಡೆದಿರೋ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಇಡಿ ದಾಳಿಯಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಅನೇಕ ದಾಖಲೆಗಳು ಸಿಕ್ಕಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ