ಮಕ್ಕಳು-ಪೋಷಕರು ಗೊಂದಲಕ್ಕೊಳಗಾಗಬೇಡಿ, ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಸುರೇಶ್ ಕುಮಾರ್

ಡಿಸೆಂಬರ್ - ಫೆಬ್ರುವರಿ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಬರಬಹುದು ಎಂದು ಹೇಳಲಾಗುತ್ತಿದೆ. ನಾವು ಎಚ್ಚರದಲ್ಲಿರಬೇಕು. ಈಗ ರೂಪಾಂತರಿ ವೈರಸ್ ಇದೆ. ಅದು ಬೇಗನೆ ಹರಡುತ್ತದೆ ಆದರೆ ಮಾರಕ ಅಲ್ಲ ಎಂದು ವೆಬಿನಾರ್​ನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಮಕ್ಕಳು-ಪೋಷಕರು ಗೊಂದಲಕ್ಕೊಳಗಾಗಬೇಡಿ, ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಸುರೇಶ್ ಕುಮಾರ್
ಸಚಿವ ಎಸ್. ಸುರೇಶ್ ಕುಮಾರ್

Updated on: Jan 07, 2021 | 5:27 PM

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ನಾನು ಇತ್ತೀಚೆಗೆ ಸೋನು ಸೂದ್ ಅವರ I Am No Messiah ಪುಸ್ತಕ ಓದಿದೆ. ಅವರ ಕಾರ್ಯಗಳಿಂದ ನಮಗೆ ಸ್ಫೂರ್ತಿ ಸಿಕ್ಕಿದೆ. ಮುಂಬರುವ ಸವಾಲುಗಳನ್ನು ಎದುರಿಸಲು ನಾವು ಸಿದ್ಧವಿದ್ದೇವೆ. ಸಲಹೆಗಳಿದ್ದರೆ ಮುಕ್ತವಾಗಿ ಹೇಳಿ ಎಂದಿದ್ದಾರೆ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್.

ಪ್ರೆಸ್ ಇನ್ಫರ್ಮೇಷನ್ ಬ್ಯೂರೋ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ  ಹಾಗು ಕರ್ನಾಟಕ ಪತ್ರಕರ್ತೆಯರ ಸಂಘ, ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಕೋವಿಡ್ -ವಿಭಿನ್ನ ಆಯಾಮಗಳು ವೆಬಿನಾರ್​ನಲ್ಲಿ ಮಾತನಾಡಿದ ಅವರು ಕೋವಿಡ್ ಬಗ್ಗೆ ಆತಂಕ ಬೇಡ, ಮುಂಜಾಗ್ರತೆ ವಹಿಸಿ ಎಂದರು.

ಕೋವಿಡ್ -ಆನ್‌ಲೈನ್ ತರಗತಿಗಳು, ಶಾಲೆ ಪುನರಾರಂಭ ಮತ್ತು ಪೋಷಕರಿಗೆ ಸಂದೇಶ- ಈ ಬಗ್ಗೆ ವೆಬಿನಾರ್​ನಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ನೀಡಿದ ಉತ್ತರ ಹೀಗಿದೆ.

 ಪ್ರಶ್ನೆ:  ಶಾಲಾ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಇರುವುದು ಸುದ್ದಿಯಾಗುತ್ತಿದೆ. ಆದರೆ ಇದರಲ್ಲಿ ಎಷ್ಟು ಶಿಕ್ಷಕರಿಗೆ ಪಾಸಿಟಿವ್ ಇದೆ, ಚೇತರಿಕೆ ಎಷ್ಟಿದೆ ? ಈ ಬಗ್ಗೆ ಸರ್ಕಾರದ ಮಾಹಿತಿ ಏನೂ ಸಿಗುತ್ತಿಲ್ಲ.

ಈ ಬಗ್ಗೆ ಪ್ರತಿ ದಿನ ಸಂಜೆ ನಾವು ಪ್ರಕಟಣೆ ನೀಡುತ್ತಿದ್ದೇವೆ. ಎಲ್ಲ ಶಿಕ್ಷಕರಿಗೂ ಕೊರೊನಾ ಪರೀಕ್ಷೆ ಮಾಡಿಸಬೇಕು ಎಂದು ನಾವು ಹೇಳಿದ್ದೆವು. ಆದರೆ ತಾಂತ್ರಿಕ ಸಲಹಾ ಸಮಿತಿಯು ರೋಗ ಲಕ್ಷಣವಿರುವವರಿಗೆ ಮಾತ್ರ ಕೋವಿಡ್ ಪರೀಕ್ಷೆ ಮಾಡಿದರೆ ಸಾಕು ಎಂದು ಹೇಳಿದ್ದರಿಂದ ಎಲ್ಲ ಶಿಕ್ಷಕರಿಗೂ ಪರೀಕ್ಷೆ ಮಾಡಿಸಿಲ್ಲ. ಕೆಲವು ಜನಪ್ರತಿನಿಧಿಗಳು ತಮ್ಮ ಮಕ್ಕಳಿಗೂ ಪರೀಕ್ಷೆ ಮಾಡಿಸಿದ್ದರು.

 ಪ್ರಶ್ನೆ: ನಿಯಮಿತವಾಗಿ ಪರೀಕ್ಷೆ ಮಾಡಿಸುತ್ತೀದ್ದೀರಾ?
ಎಲ್ಲ ಮಕ್ಕಳಿಗೂ ಕೊರೊನಾ ಪರೀಕ್ಷೆ ಮಾಡಿಸಬೇಕು ಎಂಬ ಚರ್ಚೆ ಬಂದಿತ್ತು. ಆದರೆ ಸಲಹಾ ಸಮಿತಿಯು ಅದರ ಅಗತ್ಯ ಇಲ್ಲ ಎಂದು ಹೇಳಿತ್ತು. ರೋಗ ಲಕ್ಷಣ ವಿರುವವರಿಗೆ ಐಸೋಲೇಷನ್ ರೂಮ್ ಸೌಕರ್ಯ ಒದಗಿಸಲಾಗಿದೆ.

 ಪ್ರಶ್ನೆ:  ಮೇ- ಜೂನ್ ತಿಂಗಳಲ್ಲಿ ನೀವು ಪರೀಕ್ಷೆ ನಡೆಸುವುದಾಗಿ ಹೇಳಿದ್ದೀರಿ. ಸಿಲಬಸ್ ನಲ್ಲಿ ಶೇ. 30ರಷ್ಟು ಕಡಿಮೆ ಮಾಡುವುದಾಗಿಯೂ ಹೇಳಿದ್ದೀರಿ. ಇದರಿಂದ ಮಕ್ಕಳ ಜ್ಞಾನ ಸಂಪಾದನೆಗೆ ಅನ್ಯಾಯವಾಗುತ್ತಾ? 

ಮಕ್ಕಳ ಮೇಲೆ ಒತ್ತಡ ಇರಬಾರದು. ಅವರು ನಿರಾತಂಕವಾಗಿರಬೇಕು. ಎಸ್ಸೆಸ್ಸೆಲ್ಸಿ ಮತ್ತು ಎರಡನೇ ಪಿಯುಸಿ ತರಗತಿಗಳಲ್ಲಿ ಅಗತ್ಯವಾಗಿ ಕಲಿಯಲೇಬೇಕಾದ ಸಂಗತಿಗಳನ್ನು ಬಿಡದಂತೆ ಎಚ್ಚರವಹಿಸಬೇಕು. ಮುಂದಿನ ತರಗತಿಗಳಿಗೆ ಹೋಗುವಾಗ ಅತ್ಯಂತ ಅಗತ್ಯವಿರುವ ಪಾಠಗಳ ಕಲಿಕೆ ಆಗಲೇಬೇಕು. ಈ ದೃಷ್ಟಿಯಿಂದ ವಿಷಯ ತಜ್ಞರು ಮತ್ತು ನಮ್ಮ ಇಲಾಖಾ ಅಧಿಕಾರಿಗಳು 5 ಸುತ್ತಿನ ಚರ್ಚೆ ನಡೆಸಿದ್ದಾರೆ . ವಿಷಯ ತಜ್ಞರ ಅಭಿಪ್ರಾಯದಂತೆ ಈ ಬಾರಿಯ ಪರೀಕ್ಷೆಗಳಿಗಾಗಿ ಪಠ್ಯವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಇದರ ಸಾಧಕ -ಬಾಧಕ ಬಗ್ಗೆ ಚರ್ಚಿಸಿದ ನಂತರವೇ ನಾವು ಈ ತೀರ್ಮಾನ ಕೈಗೊಂಡಿದ್ದೇವೆ.

 ಪ್ರಶ್ನೆ: ವಸತಿ ಶಾಲೆಗಳಲ್ಲಿ ಕೋವಿಡ್ ಪ್ರೊಟೊಕಾಲ್ ಅನ್ವಯ ಆಗುತ್ತಾ? ಅಲ್ಲಿ ಹೇಗೆ ನಿರ್ವಹಣೆ ಮಾಡುತ್ತೀರಿ?
ವಸತಿ ಶಾಲೆಗಳಲ್ಲಿ ಮಕ್ಕಳನ್ನು ಪರೀಕ್ಷೆ ಮಾಡುತ್ತಾರೆ. ಸೋಷಿಯಲ್ ವೆಲ್​ಫೇರ್, ಹಿಂದುಳಿದ ವರ್ಗಗಳ ವಸತಿ ಶಾಲೆ ಇನ್ನಿತರ ವಸತಿ ಶಾಲೆಗಳಲ್ಲಿ ನಿರಂತರವಾಗಿ ಕೋವಿಡ್ ಪರೀಕ್ಷೆಗಳು ನಡೆಯುತ್ತವೆ. ಈ ವಯಸ್ಸಿನ ಮಕ್ಕಳು ಕೊರೊನಾ ಸೋಂಕಿಗೊಳಗಾಗುವುದು ಕನಿಷ್ಠ ಆಗಿರುತ್ತದೆ.

 ಪ್ರಶ್ನೆ: ಪರೀಕ್ಷೆ ಬೇಕು, ಮಕ್ಕಳು ನಿರಾಳ ಆಗಿದ್ದಾರೆ. ಆದರೆ ಪಠ್ಯ ವಿಷಯಗಳ ಜತೆ ಪಠ್ಯೇತರ ವಿಷಯಗಳಾದ ಜೀವನ ಶೈಲಿ ವಿಷಯಗಳು ತೆರೆಮರೆಗೆ ಸರಿದಿವೆ. ಡಿಡಿ -1ನಲ್ಲಿಯೂ ಈ ರೀತಿಯ ವಿಷಯಗಳನ್ನು ಅಳವಡಿಸಿಕೊಳ್ಳಬಹುದು. ಈ ಬಗ್ಗೆ?

ಮಕ್ಕಳಿಗೆ ಕೌನ್ಸಿಲಿಂಗ್​ನ ಅಗತ್ಯವಿದೆ . ಗ್ರಾಮಾಂತರ, ನಗರ ಪ್ರದೇಶದ ಮಕ್ಕಳೂ ಒತ್ತಡದಲ್ಲಿದ್ದಾರೆ. ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಟಿಲ್ಲ. ದೈಹಿಕ ಚಟುವಟಿಕೆ ಇಲ್ಲವೇ ಇಲ್ಲ ಎಂಬಂತಾಗಿದೆ. ಪ್ರತಿ 10 ಮಕ್ಕಳಿಗೆ ಒಬ್ಬ ಮೆಂಟರ್ (ಸಲಹೆಗಾರರನ್ನು) ಇಡಬೇಕು. ಮಕ್ಕಳ ಮನ:ಸ್ಥಿತಿ ಮತ್ತು ಆರೋಗ್ಯವನ್ನು ಅವರು ನೋಡಿಕೊಳ್ಳುತ್ತಾರೆ.

ಶಿಕ್ಷಕರು ಕೊರೊನಾ ಪಾಸಿಟಿವ್ ಆಗಿರುವುದು ಪೋಷಕರಲ್ಲಿ ಆತಂಕವನ್ನುಂಟು ಮಾಡಿತ್ತು. ಪಾಸಿಟಿವ್ ಎಂಬುದೇ ನೆಗೆಟೀವ್​ ಆಗಿ ತುಂಬಿತ್ತು. ಹೀಗಿರುವಾಗ ನಾವು ಮಕ್ಕಳು ಮತ್ತು ಪೋಷಕರಲ್ಲಿ ಎಚ್ಚರಿಕೆಯಿಂದ ಇರುವಂತೆ ಹೇಳಬೇಕು. ಆತಂಕ ವನ್ನುಂಟು ಮಾಡಬಾರದು. ನಾವು ಜನರಿಗೆ ಪಾಸಿಟಿವ್ ಮನಸ್ಥಿತಿಯನ್ನು ನೀಡಬೇಕು.

 ಪ್ರಶ್ನೆ: ಶಾಲೆ ಆರಂಭವಾದರೂ ಕೆಲವೆಡೆ ಸಾರಿಗೆ ವ್ಯವಸ್ಥೆ ಇಲ್ಲ. ಈ ಬಗ್ಗೆ ಗಮನ ಹರಿಸಿ
ಮಕ್ಕಳು ಓಡಾಡ್ತಾ ಇದ್ದಾರೆ. ಕ್ರಮೇಣ ಸಾರಿಗೆ ವ್ಯವಸ್ಥೆಯೂ ಸಹಜ ಸ್ಥಿತಿಗೆ ಬರಬಹುದು. ಜಿಲ್ಲೆಗಳ ಸಿಇಒಗಳು ಸಾರಿಗೆ ಸಂಪರ್ಕ ಅಧಿಕಾರಿಗಳ ಜತೆ ಮಾತನಾಡಿ ಬಸ್​ಗ ಳು ಓಡಾಡುವಂತೆ ಮಾಡುತ್ತಾರೆ.

ಪ್ರಶ್ನೆ:  ಕೊರೊನಾ ಎರಡನೇ ಅಲೆ ಬಗ್ಗೆ ಮಕ್ಕಳು ಮತ್ತು ಪೋಷಕರು ಗೊಂದಲದಲ್ಲಿದ್ದಾರೆ. ಗೊಂದಲ ನಿವಾರಣೆ ಹೇಗೆ?

ಡಿಸೆಂಬರ್ – ಫೆಬ್ರವರಿ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಬರಬಹುದು ಎಂದು ಹೇಳಲಾಗುತ್ತಿದೆ. ನಾವು ಎಚ್ಚರದಲ್ಲಿರಬೇಕು. ಈಗ ರೂಪಾಂತರಿ ವೈರಸ್ ಇದೆ. ಅದು ಬೇಗನೆ ಹರಡುತ್ತದೆ, ಆದರೆ ಮಾರಕ ಅಲ್ಲ. ತಜ್ಞರು ಹೇಳುವುದೇನೆಂದರೆ ರೂಪಾಂತರಿ ವೈರಸ್​ಗೆ ಎಚ್ಚರಿಕೆ ಅಗತ್ಯ. ಕೊರೊನಾ ವೈರಸ್​ಗೆ ಇದೇ ಔಷಧಿ, ಇದೇ ಲಸಿಕೆ ಸಾಕು. ನಾವು ಈಗ ಜೀವ ಮತ್ತು ಜೀವನವನ್ನು ಸಮತೋಲನದಲ್ಲಿರಿಸಿಕೊಂಡು ಹೋಗಬೇಕಿದೆ. ಎಲ್ಲೆಡೆ ಎಚ್ಚರಿಕೆಯನ್ನು ಜಾಸ್ತಿ ಮಾಡಬೇಕು.

ವೆಬಿನಾರ್​ನಲ್ಲಿ ‘ರೂಪಾಂತರ ವೈರಾಣು – ಮಿಥ್ಯ ಮತ್ತು ವಾಸ್ತವಗಳು, ಸಂಕ್ರಾಂತಿಯ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು’ ಎಂಬುದರ ಬಗ್ಗೆ ಮಾತನಾಡಿದ ತಾಂತ್ರಿಕ ಸಲಹಾ ಸಮಿತಿ ಸದಸ್ಯರಾದ ಮೊಹಮ್ಮದ್ ಶರೀಫ್ ಸಂಕ್ರಾಂತಿಗೆ ಎಸ್ಒಪಿ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದಿದ್ದಾರೆ.

ಸಂಕ್ರಾಂತಿ ಎಸ್ಒಪಿ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಜತೆ ಸಮಾಲೋಚವೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಎಲ್ಲ ಹಬ್ಬಗಳಿಗೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಇದ್ದಂತೆ ಸಂಕ್ರಾಂತಿಗೂ ಎಸ್ಒಪಿ ಪ್ರಕಟಿಸುತ್ತೇವೆ. ರೂಪಾಂತರಿ ವೈರಾಣು ಬೇಗ ಹರಡುತ್ತದೆ. ಜನರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಅಕ್ಟೋಬರ್ ತಿಂಗಳಾಂತ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಕಡಿಮೆಯಾಯಿತು. ಬ್ರಿಟನ್​ನಲ್ಲಿ ಎರಡನೇ ಅಲೆಯೂ ಕಾಣಿಸಿಕೊಂಡಿದೆ. ಹೀಗಿರುವಾಗ ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಮತ್ತು ಸ್ಯಾನಿಟೈಜರ್ ಬಳಕೆ ಮರೆಯಬಾರದು.

ಗ್ರಾಮೀಣ ಪ್ರದೇಶದಲ್ಲಿ ಹಬ್ಬ ಹರಿದಿನಗಳಲ್ಲಿ ಜನರು ಸೇರುತ್ತಾರೆ. ಇಲ್ಲಿರುವವರು ಅಲ್ಲಿಗೆ ಹೋಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಪ್ರಮಾಣ ಶೇಕಡಾ 25-30 ಇದೆ. ಅಲ್ಲಿ ಪ್ರಕರಣದ ಪ್ರಮಾಣವೂ ಹೆಚ್ಚಾಗಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅಲ್ಲಿ ಜನಸಂಖ್ಯೆ ಕಡಿಮೆ ಮತ್ತು ಜನರಿಗೆ ಪ್ರತಿರೋಧ ಶಕ್ತಿಯೂ ಹೆಚ್ಚಿರುತ್ತದೆ. ಹಾಗಾಗಿ ಇರಬಹುದು ಎಂದಿದ್ದಾರೆ.

ಸಂಕ್ರಾಂತಿಗೆ ಕಿಚ್ಚು ಹಾಯಿಸೋದು ದೊಡ್ಡ ಹಬ್ಬ. ಇಲ್ಲಿ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬ ಪ್ರಶ್ನೆಗೆ ಯಾವುದೇ ಹಬ್ಬ ಮಾಡಬೇಕಾದರೆ ಮುನ್ನೆಚ್ಚರಿಕೆ ಕ್ರಮವಹಿಸಲೇ ಬೇಕು.ಇಂಥಾ ಕಾರ್ಯಕ್ರಮಗಳು ನಡೆಯುವಾಗ ಎಷ್ಟು ಜಾಗದಲ್ಲಿ ಎಷ್ಟು ಜನ ಸೇರುತ್ತಾರೆ ಮೊದಲಾದ ವಿಷಯಗಳನ್ನು ಪರಿಗಣಿಸಲಾಗುತ್ತದೆ. ಶೀಘ್ರದಲ್ಲಿಯೇ ಸರ್ಕಾರ ಎಸ್ಒಪಿ ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ.

ನಮ್ಮದೇನೂ ವೈಯಕ್ತಿಕ ಪ್ರತಿಷ್ಠೆ ಅಲ್ಲ.. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭ ಮಾಡ್ತಿದ್ದೇವೆ -ಸುರೇಶ್​ ಕುಮಾರ್​

 

Published On - 5:14 pm, Thu, 7 January 21