ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದ ದುರಂತದಿಂದ ಇಡೀ ರಾಜ್ಯದಲ್ಲಿ ಪ್ರಸಾದ ಕೊಡುವ ಮುನ್ನ ಪರೀಕ್ಷೆ ಮಾಡುವ ದುಸ್ಥಿತಿ ಬಂದಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿರುವ ಮಾರಮ್ಮ ದೇವಾಲಯಕ್ಕೆ ಇಂದು ಸಚಿವ ಎಸ್.ಸುರೇಶ್ ಕುಮಾರ್ ಇಂದು ಭೇಟಿ ನೀಡಿದರು. ಸಚಿವರ ಭೇಟಿ ವೇಳೆ ಮುಚ್ಚಿರುವ ದೇವಾಲಯವನ್ನು ತೆರೆಸುವಂತೆ ಭಕ್ತರು ಆಗ್ರಹಿಸಿದರು. ಈ ವೇಳೆ ದೇವಾಲಯ ತೆರೆಯದೇ ಇರುವುದರಿಂದ ಮಾರಮ್ಮಗೆ ಪೂಜೆ ಸಲ್ಲಿಸಲು ಆಗುತ್ತಿಲ್ಲ ಎಂದು ಸಚಿವರಿಗೆ ಕೈ ಮುಗಿದು, ಗ್ರಾಮಸ್ಥರು ಕಣ್ಣೀರು ಹಾಕಿ, ಮನವಿ ಮಾಡಿದರು.
ಯಾರೋ ಮಾಡಿದ ತಪ್ಪಿಗೆ ಅಮಾಯಕರಿಗೆ ಶಿಕ್ಷೆ:
ಭಕ್ತರನ್ನ ಸಮಾಧಾನ ಪಡಿಸಿದ ಸಚಿವರು, ಯಾರೋ ಮಾಡಿದ ತಪ್ಪಿಗೆ ಇವತ್ತು ಅಮಾಯಕ ಭಕ್ತರು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ದುರಂತದಿಂದ ಇಡೀ ರಾಜ್ಯದಲ್ಲಿ ಪ್ರಸಾದ ಕೊಡುವ ಮುನ್ನ ಪರೀಕ್ಷೆ ಮಾಡುವ ದುಸ್ಥಿತಿ ಬಂದಿದೆ. ಶೀಘ್ರದಲ್ಲಿಯೇ ದೇವಾಲಯ ತೆರೆಯಲು ಕ್ರಮ ಜರುಗಿಸುಸುವೆ ಎಂದು ಸಚಿವರು ಭರವಸೆ ನೀಡಿದರು.
ಕಳೆದ ವರ್ಷ ಡಿಸೆಂಬರ್ 14 ರಂದು ದೇವಾಲಯದಲ್ಲಿ ನೀಡುತ್ತಿದ್ದ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದರು. ನೂರಾರು ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಈಗಾಗಲೇ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಜಿಲ್ಲಾಡಳಿತ ಮಾರಮ್ಮ ದೇವಾಲಯಕ್ಕೆ ಬೀಗ ಹಾಕಿದೆ.
Published On - 2:40 pm, Tue, 19 November 19