ಉತ್ತರ ಕನ್ನಡ: ಕಳೆದ ವರ್ಷವಷ್ಟೇ ಪದ್ಮಶ್ರೀ (Padma Shri) ಪ್ರಶಸ್ತಿಯಿಂದ ಪುರಸ್ಕೃತರಾದ ಪರಿಸರವಾದಿ ತುಳಸಿ ಗೌಡ (Tulsi Gowda) ಅವರಿಗೆ ಮನೆಯಿಂದ ಹೊರಬಂದು ಓಡಾಡಲು ಪುಟ್ಟದಾದ ಒಂದು ಸೇತುವೆ ಬಹಳ ತುರ್ತಾಗಿ ಬೇಕಾಗಿದೆ. ಈ ವಿಡಿಯೋನಲ್ಲಿ ಅವರು ಅದಕ್ಕಾಗೇ ಮನವಿ ಸಲ್ಲಿಸುತ್ತಿದ್ದು ವಿಡಿಯೋ ವೈರಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿ (Honnalli) ಗ್ರಾಮದಲ್ಲಿರುವ ಅವರ ಮನೆ ಜಲಾವೃತಗೊಂಡಿದ್ದು ಓಡಾಡುವುದು ದುಸ್ಸಾಧ್ಯವಾಗಿದೆ. ಪ್ರತಿ ಮಳೆಗಾಲದಲ್ಲಿ ಅವರು ಮನೆ ಮುಂದಿನ ಹಳ್ಳ ತುಂಬಿ ಹರಿಯುವುದರಿಂದ ಅವರಿಗೆ ಓಡಾಟ ಬಹಳ ಕಷ್ಟವಾಗುತ್ತಿದೆ.
ನಿಮಗೆ ನೆನಪಿರಬಹುದು. ತಾವೇ ಖುದ್ದಾಗಿ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಕಾಡನ್ನೇ ನಿರ್ಮಿಸಿರುವ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರು ತಮ್ಮ ಬಾಲ್ಯದ ದಿನಗಳಿಂದ ಪರಿಸರ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಮತ್ತು ಅದರ ಬಗ್ಗೆ ಜನರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಪರಿಸರದ ಬಗ್ಗೆ ಅವರಿಗಿರುವ ಕಾಳಜಿ ಮತ್ತು ಅದನ್ನು ಉಳಿಸಲು ನಡೆಸುತ್ತಿರುವ ಪರಿಶ್ರಮವನ್ನು ಗುರುತಿಸಿ ಭಾರತ ಸರ್ಕಾರ 2020ರ ಸಾಲಿಗೆ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿತು. ಆದರೆ ಕೋವಿಡ್ ಪಿಡುಗುನಿಂದಾಗಿ 2021 ರಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.