ಬೆಂಗಳೂರು: ನಗರದ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಫಾರ್ ಡ್ರಗ್ ಡೆಲಿವರಿ ಅಂಡ್ ಬಯೋಮೆಡಿಕಲ್ ರಿಸರ್ಚ್ ಸಂಸ್ಥೆಯು ಹಿರಿಯ ಪ್ರಾಥಮಿಕ (5-8ನೇ ತರಗತಿ) ಶಾಲಾ ವಿದ್ಯಾರ್ಥಿಗಳಿಗಾಗಿ ‘ಆರೋಗ್ಯ ವಿಜ್ಞಾನ ಸಂಶೋಧನೆ’ (Research in Health and Medicine) ವಿಷಯ ಕುರಿತು ಸ್ಪರ್ಧೆ ಆಯೋಜಿಸಿದೆ. ಆಸಕ್ತ ವಿದ್ಯಾರ್ಥಿಗಳು ಆರೋಗ್ಯ ವಿಜ್ಞಾನಕ್ಕೆ ಸಂಬಂಧಿಸಿದ ತಮ್ಮ ಆಸಕ್ತಿಯ ಸಂಶೋಧನಾ ವಿಷಯವನ್ನು ಕುರಿತು ಸಂಕ್ಷಿಪ್ತ (500 ಪದಗಳ ಮಿತಿ) ಪ್ರಸ್ತಾವನೆ ಬರೆದು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ಬರವಣಿಗೆಯು ಮೂಲ ಕಲ್ಪನೆ, ಪರಿಹಾರ, ಪ್ರಯೋಗ, ಊಹೆ ಅಥವಾ ವೈದ್ಯಕೀಯ ಸಮಸ್ಯೆಯನ್ನು ಪರಿಹರಿಸುವ ಪ್ರಸ್ತಾಪವಾಗಿರಬೇಕು ಎಂದು ಪತ್ರಿಕಾ ಹೇಳಿಕೆಯು ತಿಳಿಸಿದೆ. ಉದಾಹರಣೆಗೆ ಕೈಗಳ ನೈರ್ಮಲ್ಯೀಕರಣದ ಹೊಸ ರೀತಿ, ವೈರಸ್‌ನ ಸಂಪರ್ಕವನ್ನು ತಡೆಗಟ್ಟುವ ಹೊಸ ವಿಧಾನ, ಸಿಗರೇಟ್ ಹೊಗೆಯ ಪರೋಕ್ಷ ಸಂಪರ್ಕವನ್ನು ಕಡಿಮೆ ಮಾಡುವ ವಿಧಾನ ಇತ್ಯಾದಿ.
ಪ್ರಥಮ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪ್ರಸ್ತಾವನೆಗಳನ್ನು ಪವರ್ ಪಾಯಿಂಟ್ ಮೂಲಕ ತೀರ್ಪುಗಾರರ ಮುಂದೆ ಪ್ರಸ್ತುತಪಡಿಸಲು ಅವಕಾಶ ನೀಡಲಾಗುತ್ತದೆ. ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಮತ್ತು ಸೂಕ್ತ ಬಹುಮಾನಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳನ್ನು, ಪ್ರಯೋಗ ವಿಧಾನಗಳನ್ನು ಪ್ರಸ್ತಾಪಿಸಲು ಹಿಂಜರಿಯಬಾರದು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿಜ್ಞಾನಿಯಾಗಿ ಬೆಳೆಯಬೇಕು ಹಾಗು ವೈಜ್ಞಾನಿಕ ಸಂಶೋಧನೆಯನ್ನು ತಮ್ಮ ವೃತ್ತಿಯಾಗಿ ಆರಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎನ್ನುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ.
2013ರಲ್ಲಿ ಸ್ಥಾಪಿತವಾದ ಇನ್ಸ್ಟಿಟ್ಯೂಟ್ ಫಾರ್ ಡ್ರಗ್ ಡೆಲಿವರಿ ಅಂಡ್ ಬಯೋಮೆಡಿಕಲ್ ರಿಸರ್ಚ್ ಸಂಸ್ಥೆಯು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ (Department of Scientific and Industrial Research – DSIR) ಮಾನ್ಯತೆ ಪಡೆದ ಲಾಭದ ಉದ್ದೇಶವಿಲ್ಲದ ಸಂಶೋಧನಾ ಸಂಸ್ಥೆಯಾಗಿದೆ. ನವೀನ ಔಷಧ ಮತ್ತು ನವೀನ ಚಿಕಿತ್ಸಾ ವಿಧಾನಗಳ ಕುರಿತು ಸಂಶೋಧನೆಗಳನ್ನು ನಡೆಸುವ ಉದ್ದೇಶ ಹೊಂದಿರುತ್ತದೆ. ದೀರ್ಘಕಾಲದ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ವಿಜ್ಞಾನ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳು ಮತ್ತು ಯುವಜನರನ್ನು ಪ್ರೋತ್ಸಾಹಿಸುವುದು ಸಂಸ್ಥೆಯ ಗುರಿಯಾಗಿದೆ.
ಪ್ರಬಂಧಗಳನ್ನು ಕಳಿಸಬೇಕಾದ ಇಮೇಲ್ ವಿಳಾಸ: contact@idbr.in, idbrkids@gmail.com, ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ 98455 77103.
ಇದನ್ನೂ ಓದಿ: ಉನ್ನತ ಶಿಕ್ಷಣಕ್ಕೆ ಕೌನ್ಸೆಲಿಂಗ್ ಪಡೆಯುವ ವಿದ್ಯಾರ್ಥಿಗಳಿಗೆ 2.5 ಲಕ್ಷ ಡಾಲರ್ ವಿದ್ಯಾರ್ಥಿ ವೇತನ ಘೋಷಿಸಿದ ನೆಸ್ಟ್‌ಲಿಸ್ಟ್ ಸಂಸ್ಥೆ
ಇದನ್ನೂ ಓದಿ: ಉದ್ಯೋಗ ಬದಲಾವಣೆ ನಂತರ ಇಪಿಎಫ್ ಖಾತೆದಾರರು ಖಾತೆ ವರ್ಗಾವಣೆ ಬಗ್ಗೆ ಚಿಂತಿಸಬೇಕಿಲ್ಲ ಏಕೆ, ಇಲ್ಲಿದೆ ಮಾಹಿತಿ
Published On - 7:54 pm, Tue, 30 November 21