ಬೆಂಗಳೂರು: ಬೆಂಗಳೂರು ಟೆಕ್ ಸಮಿಟ್ 2020ರ ಕೊನೆಯ ದಿನದ ತಂತ್ರಜ್ಞಾನ ಕ್ಷೇತ್ರದಲ್ಲಿ ಗಾಢ ಆಸಕ್ತಿ ಮೂಡಿಸುವ ಕುರಿತು ನೆಡೆದ ಗೋಷ್ಠಿ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸುವವರಿಗೆ ಮಾರ್ಗದರ್ಶಿಯಂತಿತ್ತು. ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ತಜ್ಞರಾದ ಇಂಟೆಲ್ ಇಂಡಿಯಾದ ಜಿತೇಂದ್ರ ಚಡ್ಡಾ, ಲೋವ್ಸ್ ಇನೋವೇಶನ್ನ ಅಭಯ್ ಟಂಡನ್, ಪೈ ವೆಂಚರ್ಸ್ನ ಮನೀಶ್ ಸಿಘಲ್, ಅಕ್ಸೆಂಚರ್ನ ಅನೂಪ್ ಮೆನನ್ ಭಾಗವಹಿಸಿದ್ದರು. ಯುವರ್ ಸ್ಟೋರಿಯ ಮದನ್ಮೋಹನ್ ರಾವ್ ಗೋಷ್ಠಿ ನಡೆಸಿಕೊಟ್ಟರು.
ತಜ್ಞರ ಸಲಹೆಗಳೇನು?
-ಬಂಡವಾಳ ಹೂಡಿಕೆ ಮಾಡುವಾಗ ಎಚ್ಚರವಿರಲಿ.
-ಬಹುಬೇಗ ಲಾಭವಾಗುತ್ತದೆಯೆಂಬ ನಿರೀಕ್ಷೆ ಬೇಡ.
-ವಿಷಯದ ಮೇಲಿನ ಆಸಕ್ತಿ, ಪಡುವ ಶ್ರಮದಲ್ಲಿ ಕಡಿಮೆಯಾಗದಿರಲಿ
-ಜನಸಾಮಾನ್ಯರ ಜೀನವ ಶೈಲಿ ಗಮನಿಸಿ
-ನಿಮ್ಮ ನವೋದ್ಯಮ ಇತರರಿಗಿಂತ ಭಿನ್ನವಾಗಿರಲಿ
-ತಂತ್ರಜ್ಞಾನದ ಹೊಸತನಗಳ ಮೇಲೆ ಗಮನವಿರಲಿ, ಆದಷ್ಟು ಬೇಗ ಅಳವಡಿಸಿಕೊಳ್ಳಿ
-ಸರ್ಕಾರಿ ಸೌಲಭ್ಯಗಳನ್ನು ಸೂಕ್ತವಾಗಿ ಬಳಸಿಕೊಳ್ಳಿ
ಕಲ್ಪನೆಗಳಿಗಿಂತ ಮಾನವ ಕೇಂದ್ರಿತ ವಿಷಯಗಳತ್ತ, ತಂತ್ರಜ್ಞಾನ ಆಧಾರಿತ ನವೋದ್ಯಮಗಳು ಗಮನಹರಿಸಬೇಕು. ಮನುಷ್ಯ ಸಂಬಂಧಗಳಲ್ಲಿ ದೃಢತೆ ಹೆಚ್ಚಿಸುವ ತಂತ್ರಜ್ಞಾನ ಎಲ್ಲ ವರ್ಗದ ಜನರನ್ನೂ ತಲುಪುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ತಂತ್ರಜ್ಞಾನಗಳಾದ ಮಶಿನ್ ಲರ್ನಿಂಗ್, ಎಐ, ಪರ್ಸನಲೈಜೇಶನ್ ಮುಂತಾದವುಗಳ ಬಳಕೆ ಎಲ್ಲ ಕ್ಷೇತ್ರದಲ್ಲೂ ಹೆಚ್ಚುತ್ತಿದೆ. ನಾಸ್ಕಾಂನ ಇತ್ತೀಚಿನ ವರದಿ ಪ್ರಕಾರ ಭಾರತದಲ್ಲಿ ಸ್ಥಾಪನೆಯಾಗುತ್ತಿರುವ ನವೋದ್ಯಮಗಳ ಪೈಕಿ ಶೇ.18 ಆಳ ಸಂಶೋಧನಾ ತಂತ್ರಜ್ಞಾನ ಬಳಸಿಕೊಳ್ಳುತ್ತಿವೆ. ಸಮಾಜದ ಸಮಸ್ಯೆಗಳೇ ನವೋದ್ಯಮಗಳ ಹುಟ್ಟಿಗೆ ಅವಕಾಶ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಮನುಷ್ಯ ಕೇಂದ್ರಿತ ನವೋದ್ಯಮಗಳಲ್ಲಿ ಹೂಡಿಕೆ ಲಾಭದಾಯಕ. ರಾಕೆಟ್ ಇಂಜಿನ್ ಡ್ರೋಣ್ಗಳನ್ನು ಬಳಸುವಷ್ಟು ಮುಂದುವರೆಯುತ್ತಿದ್ದೇವೆ ಎಂದು ತಿಳಿಸಿದರು.
Published On - 4:13 pm, Sat, 21 November 20