
ಬೆಂಗಳೂರು, ಆಗಸ್ಟ್ 24: ಬೆಂಗಳೂರು (Bengaluru) ಸಮೀಪವೇ ನಕಲಿ ಔಷಧ ಜಾಲ ಪತ್ತೆಯಾದ ಹಿನ್ನೆಲೆಯಲ್ಲಿ ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಿರುವ ಖಾಸಗಿ ಆಸ್ಪತ್ರೆಗಳ ಒಕ್ಕೂಟ (PHANA), ತನ್ನ ವ್ಯಾಪ್ತಿಯ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಿದೆ. ಆಸ್ಪತ್ರೆಗಳ ಮೆಡಿಸಿನ್ ಸ್ಟೋರ್, ಫಾರ್ಮಸಿ, ಔಷಧ ಖರೀದಿ ವಿಭಾಗ ಹಾಗೂ ಕ್ಲಿನಿಕಲ್ ವಿಭಾಗಗಳಲ್ಲಿ ಔಷಧಗಳ ಪರಿಶೀಲನೆ ಮತ್ತು ದಾಖಲೆ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಲಾಗಿದೆ.
ಈಗಾಗಲೇ ಆಸ್ಪತ್ರೆಗಳಲ್ಲಿ ಸಂಗ್ರಹಿಸಿರುವ ಔಷಧಗಳ ಸ್ಟಾಕನ್ನು ಮತ್ತೊಮ್ಮೆ ಪರಿಶೀಲಿಸುವಂತೆ PHANA ಸೂಚಿಸಿದೆ. ವಿಶೇಷವಾಗಿ ನಕಲಿ ಔಷಧ ಪ್ರಕರಣದಲ್ಲಿ ಜಪ್ತಿಯಾಗಿರುವ ಔಷಧಗಳ ಬ್ಯಾಚ್ ನಂಬರ್‌ಗಳನ್ನು ಆಸ್ಪತ್ರೆಯಲ್ಲಿರುವ ಸ್ಟಾಕ್‌ನೊಂದಿಗೆ ಹೋಲಿಕೆ ಮಾಡಿ ಯಾವುದೇ ಹೊಂದಾಣಿಕೆ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಮುಂದಿನ ದಿನಗಳಲ್ಲಿ ಔಷಧ ಖರೀದಿಸುವಾಗಲೂ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಕೇವಲ ಪರವಾನಗಿ ಹೊಂದಿರುವ ಅಧಿಕೃತ ತಯಾರಕರು, ಡಿಸ್ಟ್ರಿಬ್ಯೂಟರ್‌ಗಳು ಮತ್ತು ಸರಬರಾಜುದಾರರಿಂದಲೇ ಔಷಧಗಳನ್ನು ಖರೀದಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಗೆ ಔಷಧಗಳು ಬಂದಾಗಲೇ ಅದರ ಹೆಸರು, ಬ್ರ್ಯಾಂಡ್, ಬ್ಯಾಚ್ ನಂಬರ್, ತಯಾರಿಕಾ ದಿನಾಂಕ ಹಾಗೂ ಅವಧಿ ಮುಕ್ತಾಯ ದಿನಾಂಕವನ್ನು ಪರಿಶೀಲಿಸಬೇಕು. ಔಷಧದ ಪ್ಯಾಕೇಜಿಂಗ್, ಲೇಬಲ್ ಅಥವಾ ವಯಲ್‌ನಲ್ಲಿ ಯಾವುದೇ ಅನುಮಾನಾಸ್ಪದ ಬದಲಾವಣೆ ಕಂಡುಬಂದರೆ ಅದನ್ನು ರೋಗಿಗಳಿಗೆ ಬಳಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಅಂತಹ ಔಷಧಗಳನ್ನು ಇತರ ಸ್ಟಾಕ್‌ನಿಂದ ಪ್ರತ್ಯೇಕವಾಗಿ ಇರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜೊತೆಗೆ ಖಾಲಿ ವಯಲ್ಸ್, ಡ್ರಗ್ ಲೇಬಲ್‌ಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂರಕ್ಷಿಸಬೇಕು ಎಂದು PHANA ಸೂಚಿಸಿದೆ.
ಆಸ್ಪತ್ರೆಗಳು ಪ್ರತಿಯೊಂದು ಔಷಧ ಖರೀದಿಯ ಇನ್ವಾಯ್ಸನ್ನು ಕಡ್ಡಾಯವಾಗಿ ಸಂರಕ್ಷಿಸಬೇಕು. ಬ್ಯಾಚ್‌ವಾರು ಸ್ಟಾಕ್ ದಾಖಲೆಗಳನ್ನು ನಿರ್ವಹಿಸುವ ಮೂಲಕ ಔಷಧ ಯಾವ ಸಂಸ್ಥೆಯಿಂದ ಖರೀದಿಯಾಗಿದೆ, ಯಾವ ಬ್ಯಾಚ್ ಆಸ್ಪತ್ರೆಗೆ ಬಂದಿದೆ ಹಾಗೂ ಅದರ ಬಳಕೆ ಎಲ್ಲಿಗೆ ನಡೆದಿದೆ ಎಂಬುದನ್ನು ಸುಲಭವಾಗಿ ಪತ್ತೆಹಚ್ಚುವ ವ್ಯವಸ್ಥೆ ಇರಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ರಾಮನಗರ ನಕಲಿ ಔಷಧ ಜಾಲ: ಪೋರ್ಟರ್ ಆ್ಯಪ್ ಮೂಲಕ ನಡೆಯುತ್ತಿತ್ತು ಸಪ್ಲೈ!
ಔಷಧ ಖರೀದಿ, ಸಂಗ್ರಹಣೆ ಮತ್ತು ಬಳಕೆಯ ಸಂಪೂರ್ಣ ಟ್ರೇಸಬಿಲಿಟಿ ಕಾಯ್ದುಕೊಳ್ಳುವುದರಿಂದ ಅನುಮಾನಾಸ್ಪದ ಔಷಧ ಪತ್ತೆಯಾದ ಸಂದರ್ಭದಲ್ಲಿ ಅದರ ಮೂಲ ಮತ್ತು ಬಳಕೆಯ ವಿವರಗಳನ್ನು ತ್ವರಿತವಾಗಿ ಪರಿಶೀಲಿಸಲು ಸಾಧ್ಯವಾಗಲಿದೆ. ಅನುಮಾನಾಸ್ಪದ ಔಷಧ ಕಂಡುಬಂದರೆ ಯಾವುದೇ ಕಾರಣಕ್ಕೂ ಅದನ್ನು ಬಳಸದೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು PHANA ಅಧ್ಯಕ್ಷೆ ಶೋಭಾ ಪ್ರಕಾಶ್ ಅವರ ನೇತೃತ್ವದ ಒಕ್ಕೂಟ ಆಸ್ಪತ್ರೆಗಳಿಗೆ ಸೂಚಿಸಿದೆ.
ಬೆಂಗಳೂರಿನಲ್ಲಿ ಪತ್ತೆಯಾಗಿರುವ ನಕಲಿ ಔಷಧ ಜಾಲದ ತನಿಖೆ ಮುಂದುವರಿದಿರುವ ನಡುವೆಯೇ ಖಾಸಗಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ರೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಔಷಧ ಖರೀದಿ, ಸಂಗ್ರಹಣೆ ಮತ್ತು ಬಳಕೆಯಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂಬುದು PHANA ನೀಡಿರುವ ಮಾರ್ಗಸೂಚಿಯ ಪ್ರಮುಖ ಉದ್ದೇಶವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ