ಬೀದರ್: ಅದು ತುಂಬು ಕುಟುಂಬ. ಮನೆ ತುಂಬ ಮಕ್ಕಳು, ಮೊಮ್ಮಕ್ಕಳು. ಕಿತ್ತು ತಿನ್ನುವ ಬಡತನ. ಇದರ ಮಧ್ಯೆ ಮನೆ ಮಂದಿಯೆಲ್ಲಾ ಅಂಧರಾಗಿದ್ರೆ ಜೀವನ ಹೇಗಿರುತ್ತೆ ಹೇಳಿ? ನಿಜಕ್ಕೂ ಅವರ ಬದುಕನ್ನು ಊಹಿಸಿಕೊಳ್ಳೋದು ಕಷ್ಟ. ಅಂತಹದ್ದೊಂದು ಕುಟುಂಬ ಸರ್ಕಾರದ ಸಹಾಯಕ್ಕಾಗಿ ಎದುರು ನೋಡುತ್ತಿದೆ.
ಒಬ್ಬರಲ್ಲ.. ಇಬ್ಬರಲ್ಲ.. 9 ಜನ ಅಂಧರು.. ಹೌದು.. ಬೀದರ್ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಮದರಗಿ ಗುಡಿ ತಾಂಡಾದಲ್ಲಿರುವ ಈ ಕುಟುಂಬದಲ್ಲಿ 9 ಮಂದಿ ಅಂಧರಿದ್ದಾರೆ. ತಾತಾ, ಅಜ್ಜಿ, ಮಕ್ಕಳು,ಮೊಮ್ಮಕ್ಕಳು ಸೇರಿದಂತೆ ಒಟ್ಟು 14 ಜನರಿದ್ದಾರೆ.
14 ಜನರ ಪೈಕಿ 9 ಜನರಿಗೆ ಕಣ್ಣು ಕಾಣಿಸುವುದಿಲ್ಲ. ಸರ್ಕಾರ ನೀಡುವ ಅಂಧತ್ವ ವೇತನದಲ್ಲೇ ಜೀವನ ಸಾಗಿಸುತ್ತಿದ್ರು. ಆದ್ರೆ ಕಳೆದ ಎರಡು ವರ್ಷಗಳಿಂದ ಅಂಧತ್ವ ವೇತನ ಸಿಕ್ಕಿಲ್ವಂತೆ ಹೀಗಾಗಿ ಈ ಕುಟಂಬದ ಸದಸ್ಯರೆಲ್ಲಾ ನಿತ್ಯದ ಊಟಕ್ಕೂ ಪರದಾಡುವಂತಾಗಿದೆ.
ಅಂದಹಾಗೆ ಈ ಕುಟುಂಬದ ಹಿರಿಯರಾದ 81 ವರ್ಷದ ಪಾಂಡು ರಾಠೋಡ್‌ಗೆ ಮೂರು ಜನ ಮಕ್ಕಳು. ಮೂರು ಮಕ್ಕಳ ಪೈಕಿ ಇಬ್ಬರು ಹುಟ್ಟುವಾಗಲೇ ಅಂಧರಾಗಿ ಹುಟ್ಟಿದ್ದಾರೆ. ಈ ಇಬ್ಬರ ಮಕ್ಕಳು ಕೂಡ ಅಂಧರಾಗಿಯೇ ಹುಟ್ಟಿದ್ದಾರೆ. ಹೀಗಾಗಿ ಈ ಕುಟುಂಬದಲ್ಲಿ 9 ಜನ ಅಂಧರಿದ್ದು, ಬದುಕು ಸಾಗಿಸುವುದು ಕಷ್ಟವಾಗಿದೆ. ಸರ್ಕಾರ ನೀಡುತ್ತಿದ್ದ 1,400 ರೂಪಾಯಿ ಅಂಧತ್ವ ವೇತನಕ್ಕಾಗಿ ತಾಲೂಕು ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದಾರೆ.
ವಯಸ್ಸಾದವರಿಗೆ, ಅಂಧರಿಗೆ, ವಿಕಲಚೇತನರಿಗೆ ಬದುಕಲು ಅನೂಕೂಲವಾಗಲೆಂದು ಸರಕಾರ ಹಣ ನೀಡುತ್ತಿದೆ. ಆದರೇ ಆ ಹಣ ಮಾತ್ರ ಉಳ್ಳವರಿಗೆ ಸೇರುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದ್ರೂ ಈ ಕುಟುಂಬದ ನೆರವಿಗೆ ಬರಬೇಕು. ಬದುಕು ಸಾಗಿಸಲು ಪರದಾಡುತ್ತಿರುವ ಅಂಧರಿಗೆ ನೆರವಾಗಬೇಕು.
Published On - 2:44 pm, Fri, 27 November 20