
ಕಾರವಾರ: ಹಳ್ಳಿಗಳಿಂದಲೂ ಕಣ್ಮರೆಯಾಗುತ್ತಿರುವ ಅಪರೂಪದ ತರಕಾರಿ ಮಾಡಹಾಗಲಕಾಯಿಯ ಕೃಷಿ ಮಾಡುವ ಮೂಲಕ ಇಲ್ಲೋರ್ವ ಕೃಷಿಕರು ಅಚ್ಚರಿ ಮೂಡಿಸಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಈ ಮಾಡಹಾಗಲಕಾಯಿ ಎಷ್ಟೂ ಹುಡುಕಿದರೂ ಸಿಗುವುದಿಲ್ಲ. ಅಲ್ಲದೇ, ಮೂಢನಂಬಿಕೆಯೊಂದು ಮಾಡಹಾಗಲು ಬೆಳೆಯದಂತೆ ಈ ಭಾಗದ ರೈತರನ್ನು ಕಟ್ಟಿಹಾಕಿದೆ. ಇದನ್ನು ಅವಕಾಶವೆಂದು ಪರಿಗಣಿಸಿದ ಸಾಧನೆ ಮಾಡಿದ್ದಾರೆ ಯಲ್ಲಾಪುರ ತಾಲ್ಲೂಕಿನ ಹೊನ್ನಳ್ಳಿಯ ಗುರುಪ್ರಸಾದ ಭಟ್.
ಎಷ್ಟು ಹುಡುಕಿದರೂ ಸಿಗಲ್ಲ..
ಮಾಡಹಾಗಲವೇ ಹಾಗೆ, ಬಹುತೇಕ ಸಂದರ್ಭಗಳಲ್ಲಿ ಎಷ್ಟು ಹುಡುಕಿದರೂ ಈ ತರಕಾರಿ ಎಲ್ಲೂ ಸಿಗದು. ಮಲೆನಾಡಿನ ಬೆಟ್ಟಗಳಲ್ಲಿ ಅಲ್ಲಲ್ಲಿ ಮಾಡಹಾಗಲಿನ ಬಳ್ಳಿ ಕಾಣಸಿಗುತ್ತಾದರೂ, ಇತ್ತೀಚಿಗೆ ಲಭ್ಯತೆ ಇಲ್ಲ ಎಂಬಂತೆಯೇ ಆಗಿದೆ.ಜೊತೆಗೆ, ಮಾಡಹಾಗಲಕಾಯಿ ಬಳ್ಳಿಯ ಗಡ್ಡೆ, ನಾಟಿ ಮಾಡಿದ ರೈತನ ತಲೆಗಿಂತ ದೊಡ್ಡದಾದರೆ ತಲೆ ಒಡೆಯುತ್ತದೆ ಎಂಬ ಮೂಢನಂಬಿಕೆ ಈ ಭಾಗದಲ್ಲಿದೆ. ಹೀಗಾಗಿ, ಈ ಬೆಳೆ ಬೆಳೆಯಲು ಹಿಂದೇಟು ಹಾಕುತ್ತಾರೆ. ಹೊಸ ಅನ್ವೇಷಣೆ ಪ್ರಯೋಗ ಪ್ರವೃತ್ತಿಯ ಗುರುಪ್ರಸಾದ್ ಈ ಮೂಢ ನಂಬಿಕೆಯನ್ನು ಸುಳ್ಳಾಗಿಸಿದ್ದಾರೆ.
ಮಾಡಹಾಗಲು ತೋಟ
ಅಕಾಲವೂ ಸಕಾಲವೇ ಆದ ಯಶೋಗಾಥೆ
ಸಾಮಾನ್ಯವಾಗಿ ಫೆಬ್ರುವರಿ ವೇಳೆಗೆ ನಾಟಿ ಮಾಡಲ್ಪಡುವ ಮಾಡಹಾಗಲ ಬಳ್ಳಿ ಆಗಸ್ಟ್‌ವರೆಗೆ ಮಾತ್ರ ಫಸಲು ನೀಡುತ್ತದೆ. ಬಳಿಕ ಬಳ್ಳಿ ಒಣಗುತ್ತದೆ. ಆದರೆ, ಗುರುಪ್ರಸಾದ್ ಆಗಸ್ಟ್ ಬಳಿಕವೂ ನಿರಂತರವಾಗಿ ಫಸಲು ಪಡೆಯುತ್ತಿದ್ದಾರೆ. ಅಲ್ಲದೇ, ಎರಡೂವರೆ ತಿಂಗಳಲ್ಲಿ ಒಂದು ಕ್ವಿಂಟಲ್‍ನಷ್ಟು ಹಾಗಲ ಮಾರಾಟ ಮಾಡಿದ್ದಾರೆ.
ಯಶೋಗಾಥೆಯ ಹಿಂದಿನ ಕಥೆ
ಕಳೆದ ವರ್ಷ ಸಹ ಮಾಡಹಾಗಲ ಬೆಳೆದಿದ್ದ ಗುರುಪ್ರಸಾದ್, ಈ ವರ್ಷ 35 ಗುಂಟೆಯಲ್ಲಿ ಅಸ್ಸಾಂ ತಳಿಯ ಬಳ್ಳಿಗಳನ್ನು ನಾಟಿ ಮಾಡಿದ್ದರು. ಬಳ್ಳಿಗಳಿಗೆ ಅಗತ್ಯ ನೀರು, ಪೋಷಕಾಂಶಯುಕ್ತ ಗೊಬ್ಬರ ನಿರಂತರವಾಗಿ ಒದಗಿಸಿದರ ಪರಿಣಾಮ ಈಗಲೂ ಕಾಯಿ ಬೆಳೆಯುತ್ತಿದೆ.
ನಾಲಿಗೆಗೆ ರುಚಿ ಆರೋಗ್ಯಕ್ಕೆ ಹಿತ
ಗೋವಾದಲ್ಲೂ ಇದೆ ಬೇಡಿಕೆ..
ಗುರುಪ್ರಸಾದ್, ಐದು ತಿಂಗಳಲ್ಲಿ 40 ಕ್ವಿಂಟಲ್‍ನಷ್ಟು ಮಾಡಹಾಗಲಕಾಯನ್ನು ಹೊನ್ನಾವರ, ಕುಮಟಾ, ಗೋವಾ ಮಾರುಕಟ್ಟೆಗಳಿಗೆ ರವಾನಿಸಿದ್ದಾರೆ. 350 ಬಳ್ಳಿಗಳನ್ನು ಬೆಳೆದಿರುವ ಅವರು, ಈ ಬೆಳೆಗೆ ಭಾರಿ ಬೇಡಿಕೆ ಇದೆ ಎನ್ನುತ್ತಾರೆ. ಪ್ರತಿ ಕೆಜಿಗೆ ₹120ರಿಂದ 160 ದರವಿದ್ದು, ಆಹಾರ ಮತ್ತು ಔಷಧಗಳಿಗಾಗಿ ಕಾಯಿಗೆ ಮತ್ತು ಗಡ್ಡೆಗಳಿಗೆ ಹೆಚ್ಚು ಬೇಡಿಕೆ ಇದೆ ಎಂದು ವಿವರಿಸುತ್ತಾರೆ.
ತಜ್ಞರಿಂದ ಶ್ಲಾಘನೆ
ಗುರುಪ್ರಸಾದ್ರ ಮಾಡಹಾಗಲಕಾಯಿ ತೋಟಕ್ಕೆ ಶಿರಸಿಯ ತೋಟಗಾರಿಕಾ ವಿದ್ಯಾಲಯದ ತಜ್ಞ ಡಾ. ಶಿವಾನಂದ ಹೊಂಗಲ ಭೇಟಿ ನೀಡಿದ್ದಾರೆ. ‘ನೀರು, ಗೊಬ್ಬರ ಸರಿಯಾದ ಸಮಯಕ್ಕೆ ದೊರೆತ ಕಾರಣ ಗಡ್ಡೆ ಪುನಃ ಚಿಗುರಿದೆ. ಉತ್ತಮ ಪೋಷಕಾಂಶ ಲಭಿಸಿರುವ ಕಾರಣ ಬಳ್ಳಿಗಳು ಒಣಗಿಲ್ಲ. ಕೃಷಿಯಲ್ಲಿ ಇಂತಹ ಪ್ರಯೋಗ ನಡೆದಿರುವುದು ಒಳ್ಳೆಯ ಬೆಳವಣಿಗೆ’ಎಂದು ಡಾ.ಶಿವಾನಂದ್ ಪ್ರತಿಕ್ರಿಯಿಸಿದ್ದಾರೆ.
-ಜಗದೀಶ್
Published On - 5:38 pm, Thu, 10 December 20