ಬೀದರ್: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದರಿಂದ ಪರಿಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿತ್ತು. ಇದರಿಂದಾಗಿ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ, ಬೆಳೆಗೆ ಸೂಕ್ತ ಬೆಲೆ ಸಿಗದೆ ನಷ್ಟಕ್ಕೆ ಸಿಲುಕ್ಕಿದ್ದಾರೆ ಎಂಬ ಬಗ್ಗೆ ನಾವು ಈಗಾಗಲೇ ಓದಿದ್ದೇವೆ. ಆದರೆ ಬೀದರ್ ಜಿಲ್ಲೆಯ ರೈತರೊಬ್ಬರು ಹತ್ತಾರು ವರ್ಷದಿಂದ ಸೋಯಾಬಿನ್, ತೊಗರಿ, ಉದ್ದು, ಹೀಗೆ ಒಂದೆ ಬೆಳೆ ಬೆಳೆದು ಹೈರಾಣಾಗಿದ್ದರು. ಹೀಗಾಗಿ ಈ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಏನಾದರೂ ಹೊಸದನ್ನು ಮಾಡಬೇಕೆಂದು ಯೋಚಿಸಿದ್ದು, ತಮ್ಮ ಹೊಲದಲ್ಲಿ ಪಪ್ಪಾಯಿ ಬೆಳೆದು ಕೈತುಂಬಾ ಹಣ ಗಳಿಸುತ್ತಿದ್ದಾರೆ. ಆ ಮೂಲಕ ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಮಾತನ್ನು ಈ ರೈತ ಅಕ್ಷರಶಃ ಸತ್ಯ ಮಾಡಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ಗ್ರಾಮದ ರೈತ ಬಾಲಾಜಿ ಧನಗರ್, ತಮ್ಮ ಸ್ವಂತ 4 ಎಕರೆ ಜಮೀನಿನಲ್ಲಿ 1 ಎಕ್ಕರೆ ಪಪ್ಪಾಯಿ ಬೆಳೆ ಬೆಳೆದು ತೋಟ ಮಾಡಿಕೊಂಡಿದ್ದಾರೆ. ಇನ್ನು ಉಳಿದ ಜಮೀನಿನಲ್ಲಿ ಟೊಮ್ಯಾಟೊ, ಶುಂಠಿ, ನಿಂಬೆ, ಮಾವು ಬೆಳೆಗಳನ್ನು ಬೆಳಿಯುತ್ತಿದ್ದಾರೆ. ಆದರೆ ಕಳೆದ 1 ವರ್ಷಗಳಿಂದ ರೈತ ಬಾಲಾಜಿ ಪಪ್ಪಾಯಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದು, ತಮ್ಮ 4 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯ ಪದ್ಧತಿ ಮೂಲಕ “ತೈವಾನ್ ರೆಡ್ ಲೇಡಿ” ಮೂಲದ ಪಪ್ಪಾಯಿ ತಳಿ ಬೆಳೆಯುತ್ತಿದ್ದಾರೆ.
ಈ ತಳಿಯ ಹಣ್ಣುಗಳಿಗೆ ದೆಹಲಿ – ಹೈದರಾಬಾದ್ನಲ್ಲಿ ತುಂಬಾ ಬೇಡಿಕೆ ಇದೆ. ಹೀಗಾಗಿ ಇವರು ತಾವು ಬೆಳೆದ ಪಪ್ಪಾಯಿ ಬೆಳೆಯನ್ನು ಮಾರುಕಟ್ಟೆಗಳಿಗೆ ಕಳಿಹಿಸಿ ಉತ್ತಮ ಲಾಭ ಪಡೆಯುತ್ತಿದ್ದಾರೆ. ಈಗಾಗಲೇ 4 ಬಾರಿ ಕಟಾವು ಮಾಡಿದ್ದು, 20 ರಿಂದ 25ಟನ್ ಇಳುವರಿ ಬಂದಿದೆ. 1 ಎಕರೆ ಜಮೀನಿನಲ್ಲಿ ಬೆಳೆದ ಪಪ್ಪಾಯಿಯಲ್ಲಿ ಸದ್ಯ 40 ಸಾವಿರ ರೂಪಾಯಿ ಆದಾಯ ಬಂದಿದೆ ಎಂದು ರೈತ ಬಾಲಾಜಿ ಧನಗರ್ ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ವಾಣಿಜ್ಯ ಬೆಳೆಯಾದ ಸೋಯಾಬಿನ್, ತೊಗರಿ, ಉದ್ದು, ಸೇರಿದಂತೆ ಅನೇಕ ಬೆಳೆ ಬೆಳೆಯುತ್ತಿದ್ದರು. ಆದರೆ ಲಾಭ ಅಷ್ಟಕಷ್ಟೇ ಬರುತ್ತಿತ್ತು. ಹೀಗಾಗಿ ಗ್ರಾಮಕ್ಕೆ ಬಂದಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೋಟಗಾರಿಕೆ ಬೆಳೆಯ ಮಾಹಿತಿ ನೀಡಿದ್ದಾರೆ. ತೋಟಗಾರಿಕೆ ಬೆಳೆಯಾದ ಪಪ್ಪಾಯಿ ಬೆಳೆಸಿ ಸೈ ಎಣಿಸಿಕೊಂಡಿದ್ದು, ಮಾರುಕಟ್ಟಯಲ್ಲಿಯೂ ಈ ಹಣ್ಣಿಗೆ ಬಾರೀ ಬೇಡಿಕೆ ಇರುವ ಕಾರಣ ಇವರಿಗೆ ಸಹಜವಾಗಿಯೇ ಲಾಭ ಬಂದಿದೆ.
ಬಿಎ ಪದವೀಧರರಾದ ಬಾಲಾಜಿಗೆ ಮಾರುಕಟ್ಟೆಯ ಬಗ್ಗೆ ಜ್ಞಾನವಿದೆ, ಯಾವ ಋತುವಿನಲ್ಲಿ ಯಾವ ಬೆಳೆ ಬೆಳೆಯಬೇಕು, ಯಾವ ಬೆಳೆ ಬೆಳೆಸಿದರೆ ಲಾಭ ಸಿಗಬಹುದೆಂದು ಅಂದಾಜು ಹಾಕಿ ಬೆಳೆ ಬೆಳೆಯುತ್ತಾರೆ ಹೀಗಾಗಿ ಇವರಿಗೆ ನಷ್ಟದ ಪ್ರಮಾಣ ಕಡಿಮೆಯಿದೆ ಇದರ ಜೊತೆಗೆ ಈ ಕೊರೊನಾ ಸಂಕಷ್ಟದ ಸಮಯದಲ್ಲಿ ಕಲ್ಲಂಗಡಿ ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ ಆದರೆ ಪಪ್ಪಾಯಿ ಬೆಳೆದ ಈ ರೈತನಿಗೆ ಲಾಭವಾಗಿದೆ. ಇದಕ್ಕೆ ಪ್ರಮುಖ ಕಾರಣ ಕೊರೊನಾ ಸೋಂಕಿತರು ಪಪ್ಪಾಯಿ ಹಣ್ಣನ್ನು ಜಾಸ್ತಿ ಬಳಸಿದ್ದಾರೆ. ಹೀಗಾಗಿ ಕೊರೊನಾ ಸಮಯದಲ್ಲಿ ಈ ಹಣ್ಣಿಗೆ ಬಾರೀ ಬೇಡಿಕೆಯಿತ್ತು. ಈಗಲು ಈ ಹಣ್ಣಿಗೆ ಬೇಡಿಕೆಯಿದೆ.
ಇವರು ಮಾರುಕಟ್ಟೆಗೆ ಪಪ್ಪಾಯಿ ತೆಗೆದುಕೊಂಡು ಹೋಗುವ ಪ್ರಮೇಯವೂ ಕೂಡಾ ಬಂದಿಲ್ಲ. ಯಾಕೆಂದರೆ ಇವರ ಹೊಲಕ್ಕೆ ಬಂದು ಕೆಜಿಗೆ 12 ರೂಪಾಯಿ ಕೊಟ್ಟು ಜನರೇ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಇವರಿಗೆ ಹೆಚ್ಚಿನ ಲಾಭವಾಗುತ್ತಿದೆ. ಇನ್ನೂ ಇವರ ಕೃಷಿಯ ಕಾರ್ಯದ ಬಗ್ಗೆ ಇವರ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೊಲದಲ್ಲಿ ಶ್ರಮವಹಿಸಿ ದುಡಿಯುತ್ತಾರೆ. ಹೀಗಾಗಿ ಇವರಿಗೆ ಕೃಷಿಯಲ್ಲಿ ನಷ್ಟ ಬಂದಿಲ್ಲ ಎಂದು
ಮಲ್ಲಪ್ಪಗೌಡ ತಿಳಿಸಿದ್ದಾರೆ.
ಒಟ್ಟಿನಲ್ಲಿ ರೈತ ಬಾಲಾಜಿ ಧನಗರ್ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲಾ ರೈತರು ಕೂಡ ಹೀಗೆ ಪ್ರಯೋಗಾತ್ಮಕ ಕೃಷಿ, ಬೆಳೆ ಬೆಳೆಯಲು ಅನುಕೂಲ ಮಾಡಿಕೊಳಬೇಕು. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸಬೇಕಿದೆ.
ಇದನ್ನೂ ಓದಿ:
ಕೋಲಾರದಿಂದ ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು; ಧವನ ಬೆಳೆದು ಲಾಭ ಗಳಿಸುತ್ತಿರುವ ರೈತರು