ಜಾನುವಾರು ಸಂತೆಗಳಿಗೆ ಗೋಹತ್ಯೆ ನಿಷೇಧದ ಬಿಸಿ; ಜಾನುವಾರುಗಳ ಮಾರಾಟ ಕುಂಠಿತ, ರೈತರಿಗೆ ಸಂಕಷ್ಟ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 28, 2020 | 6:10 PM

ಗುಂಡ್ಲುಪೇಟೆ ತಾಲೂಕಿನ ತೆರಣಕಾಂಬಿ ದನಗಳ ಸಂತೆಯಲ್ಲಿ ಈ ಬಾರಿ ರೈತರು ತುಂಬ ಕಷ್ಟಪಟ್ಟಿದ್ದಾರೆ. ರಾಶಿರಾಶಿ ಜಾನುವಾರುಗಳು ಇದ್ದರೂ ಹೊರರಾಜ್ಯದ ದಲ್ಲಾಳಿಗಳು ಖರೀದಿಗೆ ಬರುತ್ತಿಲ್ಲ. ಸ್ಥಳೀಯ ದಲ್ಲಾಳಿಗಳು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗುತ್ತಿದ್ದಾರೆ.

ಜಾನುವಾರು ಸಂತೆಗಳಿಗೆ ಗೋಹತ್ಯೆ ನಿಷೇಧದ ಬಿಸಿ; ಜಾನುವಾರುಗಳ ಮಾರಾಟ ಕುಂಠಿತ, ರೈತರಿಗೆ ಸಂಕಷ್ಟ
ಸಂತೆಯಲ್ಲಿ ಹಸುಗಳ ಮಾರಾಟವಾಗದೆ ಕಷ್ಟಪಡುತ್ತಿರುವ ರೈತರು
Follow us on

ಚಾಮರಾಜನಗರ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದರೂ, ವಿಧಾನ ಪರಿಷತ್​ನಲ್ಲಿ ಅಂಗೀಕಾರವಾಗದ ಕಾರಣ ಕಾಯ್ದೆಯಾಗಿ ರೂಪುಗೊಳ್ಳುವಲ್ಲಿ ಹಿನ್ನಡೆಯಾಗಿದೆ. ಆದರೆ ಈ ಗೋಹತ್ಯೆ ನಿಷೇಧದ ಬಿಸಿ ಮಾತ್ರ ಅದಾಗಲೇ ತಟ್ಟಲು ಶುರುವಾಗಿದ್ದು, ಚಾಮರಾಜನಗರದಲ್ಲಿ ರೈತರ ಆಕ್ರೋಶಕ್ಕೂ ಕಾರಣವಾಗಿದೆ.

ಚಾಮರಾಜನಗರ ರಾಜ್ಯದ ದಕ್ಷಿಣ ಗಡಿಯ ಜಿಲ್ಲೆ. ಇದು ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಿದೆ. ಈ ಜಿಲ್ಲೆಯಿಂದ ಜಾನುವಾರುಗಳನ್ನು ಕದ್ದುಮುಚ್ಚಿ ಕೇರಳ, ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು. ಹಾಗೇ ರೈತರೂ ಕೂಡ ತಮ್ಮ ಅನುಪಯುಕ್ತ ಹಸುಗಳನ್ನು ಆ ರಾಜ್ಯಗಳಿಗೆ ಮಾರಾಟ ಮಾಡಿ, ಹಣ ಗಳಿಸುತ್ತಿದ್ದರು.

ಆದರೆ ಇದೀಗ ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಜೋರಾಗಿ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೇರಳ, ತಮಿಳುನಾಡಿನ ದಲ್ಲಾಳಿಗಳು ಚಾಮರಾಜನಗರಕ್ಕೆ ಬರುತ್ತಿಲ್ಲ. ಇದರಿಂದ ರೈತರು ಪ್ರಾಣಿಗಳ ಮಾರಾಟಕ್ಕೆ ತೀವ್ರ ಕಷ್ಟಪಡುತ್ತಿದ್ದಾರೆ.

ಸರ್ಕಾರವೇ ಖರೀದಿಸಲಿ
ಜಾನುವಾರು ಮಾರಲಾಗದೆ ಪರದಾಡುತ್ತಿರುವ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಬೆಳೆಯ ಬದಲು, ಸರ್ಕಾರ ಹಸುಕರುಗಳನ್ನು ಖರೀದಿಸಲಿ ಎಂದು ಆಗ್ರಹಿಸುತ್ತಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ತೆರಣಕಾಂಬಿ ದನಗಳ ಸಂತೆಯಲ್ಲಿ ಈ ಬಾರಿ ರೈತರು ತುಂಬ ಕಷ್ಟಪಟ್ಟಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳು ಇದ್ದರೂ ಹೊರರಾಜ್ಯದ ದಲ್ಲಾಳಿಗಳು ಖರೀದಿಗೆ ಬರುತ್ತಿಲ್ಲ. ಸ್ಥಳೀಯ ದಲ್ಲಾಳಿಗಳು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗುತ್ತಿದ್ದಾರೆ. ಅಗ್ಗದ ಬೆಲೆಗೆ ಕೇಳುತ್ತಿದ್ದಾರೆ. ಸಾಮಾನ್ಯವಾಗಿ ಜನರು ತಮಗೆ ಬೇಡದ ಹಸುಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ಹಣಕಾಸಿನ ಮುಗ್ಗಟ್ಟು ಎದುರಾದಾಗ ಜಾನುವಾರು ಮಾರಲು ಮುಂದಾಗುತ್ತಾರೆ. ಆದರೆ ಈ ಬಾರಿ ಜಾನುವಾರುಗಳ ಬಿಕರಿ ತುಂಬ ಕಷ್ಟ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ತೆಗೆದುಕೊಂಡು ಬಂದ ಹಸುಗಳನ್ನು ಹಾಗೇ, ವಾಪಸ್ ಕೊಂಡೊಯ್ಯುತ್ತಿದ್ದಾರೆ.

ಸಂತೆಯಲ್ಲಿ ಕಂಡುಬಂದ ದೃಶ್ಯಗಳು