AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕಾಲಿಕ ಮಳೆ, ಕೀಟ ಬಾಧೆ; ಆತಂಕದಲ್ಲಿ ಕೋಲಾರದ ಮಾವಿನ ಬೆಳೆಗಾರರು

ಕೋಲಾರ ಜಿಲ್ಲೆಯ ಶ್ರೀನಿವಾಸಪುರವನ್ನು ರಾಜ್ಯದ ಮಾವಿನ ತವರು ಎಂದೇ ಕರೆಯಲಾಗುತ್ತದೆ. ಕಾರಣ ಕೋಲಾರ ಜಿಲ್ಲೆಯೊಂದರಲ್ಲೇ ಸರಿಸುಮಾರು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಮಾವು ವಿಶ್ವದ ವಿವಿಧ ದೇಶಗಳು ಹಾಗೂ ವಿವಿಧ ರಾಜ್ಯಗಳಿಗೆ ರಫ್ತು ಮಾಡಲಾಗುತ್ತದೆ.

ಅಕಾಲಿಕ ಮಳೆ, ಕೀಟ ಬಾಧೆ; ಆತಂಕದಲ್ಲಿ ಕೋಲಾರದ ಮಾವಿನ ಬೆಳೆಗಾರರು
ಮಾವು ಬೆಳೆ
sandhya thejappa
|

Updated on:Apr 15, 2021 | 2:23 PM

Share

ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮಾವಿನ ತವರು ಎಂದೇ ಪ್ರಸಿದ್ಧಿ. ಇಲ್ಲಿನ ಮಾವು ಬೆಳೆಗಾರರಿಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ಈ ಬಾರಿ ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಆಕಾಲಿಕವಾಗಿ ಬಿದ್ದ ಮಳೆಯಿಂದ ತೊಂದರೆಯುಂಟಾಗಿದೆ. ಅಲ್ಲದೇ ಈ ವರ್ಷ ಮಾವಿನ ತವರಲ್ಲಿ ಮಾವಿಗೆ ಬರ ಬರುವ ಜೊತೆಗೆ ಕೀಟ ಬಾಧೆ ಕಾಡಲಾರಂಭಿಸಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರವನ್ನು ರಾಜ್ಯದ ಮಾವಿನ ತವರು ಎಂದೇ ಕರೆಯಲಾಗುತ್ತದೆ. ಕಾರಣ ಕೋಲಾರ ಜಿಲ್ಲೆಯೊಂದರಲ್ಲೇ ಸರಿಸುಮಾರು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಮಾವು ವಿಶ್ವದ ವಿವಿಧ ದೇಶಗಳು ಹಾಗೂ ವಿವಿಧ ರಾಜ್ಯಗಳಿಗೆ ರಫ್ತು ಮಾಡಲಾಗುತ್ತದೆ. ಮಾವಿನ ಸೀಸನ್ ಬಂದರೆ ಸಾಕು ಬೇರೆ ಬೇರೆಯ ರಾಜ್ಯದ ವ್ಯಾಪಾರಸ್ಥರು ಕೋಲಾರಕ್ಕೆ ಬರುತ್ತಾರೆ. ಬಂದು ತಿಂಗಳುಗಟ್ಟಲೆ ಇಲ್ಲೇ ಬೀಡು ಬಿಟ್ಟು ರೈತರಿಂದ ಮಾವು ಖರೀದಿ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಮಾವು ವಹಿವಾಟು ನಡೆಯುತ್ತದೆ. ಆದರೆ ಈ ವರ್ಷ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಮಾವು ಬೆಳೆಗೆ ಮಾರಕವಾಗಿ ಪರಿಣಮಿಸಿದೆ.

ಜನವರಿ ಮತ್ತು ಫೆಬ್ರವರಿಯಲ್ಲಿ ಸುರಿದ ಮಳೆಯಿಂದ ಮಾವಿನ ಹೂವೆಲ್ಲ ಉದುರಿ ಹೋಗಿ ಮರಗಳಲ್ಲಿ ಕೇವಲ 10 ರಿಂದ 20 ರಷ್ಟು ಫಸಲು ಮಾತ್ರ ಉಳಿದುಕೊಂಡಿದೆ. ಹಾಗಾಗಿ ಈ ಬಾರಿ ಮಾವು ಬೆಳೆಗಾರರು ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ ಎಂದು ಮಾವು ಬೆಳೆಗಾರರಾದ ವೆಂಕಟರಮಣಪ್ಪ ಹೇಳಿದರು.

ಮಾವಿನ ಕಣಜ ಎಂದು ಕರೆಯುವ ಕೋಲಾರ ಜಿಲ್ಲೆಯಲ್ಲಿ ಹಲವು ಬಗೆಯ ಮಾವನ್ನು ಬೆಳೆಯಲಾಗುತ್ತದೆ. ಇಲ್ಲಿ ಉತ್ಕೃಷ್ಟವಾದ ಮಾವನ್ನು ಬೆಳೆಯುತ್ತಾರೆ. ಅದಕ್ಕಾಗಿ ಇಲ್ಲಿನ ಮಾವಿನ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಆದರೆ ಈ ವರ್ಷ ಅಕಾಲಿಕ ಮಳೆಯ ಜೊತೆಗೆ ಕೀಟ ಭಾದೆಯಿಂದ ಶೇಕಡಾ ಹತ್ತರಿಂದ ಇಪ್ಪತ್ತರಷ್ಟು ಮಾವು ಬೆಳೆ ಕೂಡಾ ರೈತರ ಕೈ ಸೇರುವುದು ಅನುಮಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ಅಕಾಲಿಕ ಮಳೆಗೆ ಹೂವೆಲ್ಲಾ ಉದುರಿ ಬೆಳೆ ಹಾಳಾದರೆ, ಈಗ ಅಧಿಕ ತಾಪಮಾನ ಹಾಗೂ ಕೀಟ ಬಾಧೆಗೆ ಬೆಳೆ ಹಾಳಾಗುತ್ತಿದೆ. ಈಗ ಮಾವು ಬೆಳೆಯನ್ನು ಬೂದು ರೋಗ ಹಾಗೂ ಊಜಿ ಹುಳ ಕಿತ್ತು ತಿನ್ನುತ್ತಿವೆ. ಪರಿಣಾಮ ಮಾವಿನ ಮರಗಳಲ್ಲಿ ಅಲ್ಲೊಂದು ಇಲ್ಲೊಂದು ಕಾಯಿಗಳು ಕಣ್ಣಿಗೆ ಕಾಣಿಸುತ್ತಿವೆ. ಮಾವು ಬೆಳೆಯನ್ನೇ ಅವಲಂಬಿಸಿದ್ದ ರೈತರು ಮುಂದಿನ ಜೀವನವನ್ನು ಹೇಗೆ ಎದುರಿಸುವುದೆಂಬ ಆತಂಕಕ್ಕೆ ಒಳಗಾಗಿದ್ದಾರೆ.

ಕೀಟ ಬಾಧೆಯಿಂದ ನಷ್ಟವಾದ ಮಾವಿನ ಬೆಳೆ

ಇದನ್ನೂ ಓದಿ

ಕುಡಿಯುವ ನೀರಿಗೆ ಪರದಾಟ ಪಡುತ್ತಿರುವ ಹಾವೇರಿ ಜನ; ಪರಿಹಾರಕ್ಕೆ ಸ್ಥಳೀಯರ ಆಗ್ರಹ

ಮೊದಲ ಬಾರಿಗೆ ಅರಬ್ ರಾಷ್ಟ್ರಕ್ಕೆ ಆಪೋಸ್ ಮಾವು; ಧಾರವಾಡ ರೈತರು ಫುಲ್ ಖುಷ್

(Farmers of Kolar worried by premature rainfall and pest infestation)

Published On - 2:21 pm, Thu, 15 April 21