
ಹುಬ್ಬಳ್ಳಿ, ಅಕ್ಟೋಬರ್ 08: ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆ ಪ್ರಕರಣ ಸಂಬಂಧ ಹನಾಲ್ಕು ದಿನದ ಗಂಡು ಮಗುವಿಗೆ ಹುಬ್ಬಳ್ಳಿ (Hubli) ಕಿಮ್ಸ್ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. ನವಜಾತ ಮಗುವಿಗೆ ಅನಸ್ತೇಶಿಯಾ ನೀಡುವುದು ಸೇರಿ ಹಲವು ಸವಾಲುಗಳ ನಡುವೆಯೂ ಶಿಶುವಿನ ಹೊಟ್ಟೆಯಲ್ಲಿದ್ದ ಭ್ರೂಣ ಹೊರೆತೆಗೆದುರುವ ವೈದ್ಯರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಹುಬ್ಬಳ್ಳಿ ಕಿಮ್ಸ್ ನಲ್ಲಿ ಸೆಪ್ಟೆಂಬರ್ 23ರಂದು ಹೆರಿಗೆಗೆಂದು ದಾಖಲಾಗಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಹಿಳೆಯೊಬ್ಬರು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಗಂಡು ಮಗುವನ್ನು ಪರೀಕ್ಷಿಸುವಾಗ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಕಂಡುಬಂದಿತ್ತು. ಇನ್ನು ಹೆರಿಗೆಗೆ ಮುನ್ನವೇ ಮಗುವಿನ ಹೊಟ್ಟೆಯಲ್ಲಿ ಭ್ರೂಣದ ರೀತಿ ಏನೋ ಇದೆ ಎಂದು ಕಿಮ್ಸ್ನ ಡಾ. ರೂಪಾಲಿ ಅವರು ಅಲ್ಟ್ರಾಸೌಂಡ್ ಪರೀಕ್ಷೆ ವೇಳೆ ಗುರುತಿಸಿದ್ದರು. ಆದರೆ ಹೆರಿಗೆಗೆ ಅದು ಯಾವುದೇ ತೊಂದರೆ ಮಾಡದ ಹಿನ್ನಲೆ ವೈದ್ಯರು ಮಹಿಳೆಗೆ ಸಹಜ ಹೆರಿಗೆ ಮಾಡಿಸಿದ್ದರು.
ಇದನ್ನೂ ಓದಿ: ಬಾಳೆಹಣ್ಣನ್ನು ಈ ರೀತಿ ಬಳಸಿದರೆ ವಿಟಮಿನ್ ಬಿ12 ಕೊರತೆಯನ್ನು ನೀಗಿಸಿಕೊಳ್ಳಬಹುದು
ಮಗುವಿಗೆ ಅಲ್ಟ್ರಾಸೌಂಡ್, ಎಂಆರ್ಐ ಮಾಡಿಸಿದಾಗ ಕೂಡ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರೋದು ದೃಢಪಟ್ಟಿದೆ. ಆದರೆ ನವಜಾತ ಶಿಶುವಿಗೆ ಅನಸ್ತೇಶಿಯಾ ನೀಡಿ ಶಸ್ತ್ರಚಿಕಿತ್ಸೆ ಮಾಡೋದು ಕಷ್ಟ ಸಾಧ್ಯವಾದರೂ ಮಗುವಿನ ಭವಿಷ್ಯದ ದೃಷ್ಟಿಯಿಂದ ಶಸ್ತ್ರಚಿಕಿತ್ಸೆ ಅವಶ್ಯವಿತ್ತು. ಹೀಗಾಗಿ ಘಟನೆಯನ್ನು ಹುಬ್ಬಳ್ಳಿ ಕಿಮ್ಸ್ ವೈದ್ಯರು ಗಂಭೀರವಾಗಿ ಪರಿಗಣಿಸಿದ್ದರು. ಶಸ್ತ್ರಚಿಕಿತ್ಸೆ ಜವಾಬ್ದಾರಿಯನ್ನು ಕಿಮ್ಸ್ನ ಹಿರಿಯ ವೈದ್ಯ, ಮಕ್ಕಳ ಶಸ್ತ್ರಚಿಕಿತ್ಸಕ ಡಾ.ರಾಜಶಂಕರ್ ಅವರಿಗೆ ವಹಿಸಲಾಗಿತ್ತು. ಅವರು ಅನೇಕ ಪರಿಣಿತರ ಜೊತೆ ಚರ್ಚಿಸಿ, ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಮೊದಲು ಮಗುವಿಗೆ ಲ್ಯಾಪ್ರೋಸ್ಕೋಪಿ ಮಾಡಿ ಹೊಟ್ಟೆಯ ಯಾವ ಭಾಗದಲ್ಲಿ ಭ್ರೂಣ ಇದೆ ಅನ್ನೋದನ್ನು ಪತ್ತೆ ಮಾಡಲಾಗಿತ್ತು. ಅನಂತರ ಅನಸ್ತೇಶಿಯಾ ಕೊಟ್ಟು ಹೊಟ್ಟೆಯ ಭಾಗದಲ್ಲಿ ಸಣ್ಣ ರಂಧ್ರ ಮಾಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸರಿಸುಮಾರು ನಲವತ್ತೈದು ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದ್ದು, ಮಗುವಿನ ಹೊಟ್ಟೆಯಲ್ಲಿದ್ದ ಎಂಟು ಸೆಂಟಿಮೀಟರ್ ಗಾತ್ರದ ಭ್ರೂಣವನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಇನ್ನು ಹೊರತಗೆದ ಭ್ರೂಣಕ್ಕೆ ಮೆದುಳು ಮತ್ತು ಹೃದಯ ಇರಲಿಲ್ಲ. ಬೆನ್ನುಮೂಳೆ ಹಾಗೂ ಸಣ್ಣ ಕೈಕಾಲು ಇರೋದು ಪತ್ತೆಯಾಗಿದೆ.
ಶಸ್ತ್ರ ಚಿಕಿತ್ಸೆಗೊಳಗಾಗಿರೋ ಮಗುವಿನ ಕುಟುಂಬದ ಹಿಸ್ಟರಿ ಪರಿಶೀಲಿಸಿದಾಗ, ಮಗುವಿನ ತಂದೆ ಕೂಡ ಅವಳಿ-ಜವಳಿಯಾಗಿ ಹುಟ್ಟಿದ್ದರಂತೆ. ಆದರೆ ಇಲ್ಲಿ ಅವಳಿ- ಜವಳಿ ಹುಟ್ಟುವ ಬದಲು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಬೆಳದಿತ್ತು. ಸದ್ಯ ಮಗು ಆರೋಗ್ಯವಾಗಿದ್ದು, ಮಕ್ಕಳ ತೀರ್ವ ನಿಘಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.
ಹುಟ್ಟುವಾಗಲೇ ನವಜಾತ ಶಿಶುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣದ ಬೆಳವಣಿಗೆ ಆಗುವುದನ್ನ ವೈದ್ಯಕೀಯ ಭಾಷೆಯಲ್ಲಿ Fetus in fetu ಎಂದು ಕರೆಯಲಾಗುತ್ತೆ. ಇದು ನವಜಾತ ಶಿಶುವಿನ ದೇಹದೊಳಗೆ ಅಸಹಜ ದ್ರವ್ಯರಾಶಿ ಬೆಳೆಯುವ ಅಪರೂಪದ ಸ್ಥಿತಿಯಾಗಿದೆ.ಈ ರೀತಿಯ ಪ್ರಕಣಗಳು ಅತ್ಯಂತ ವಿರಳವಾಗಿದ್ದು, ಜಗತ್ತಿನಾದ್ಯಂತ ಈವರೆಗೆ ಕೇವಲ ಬೆರಳೆಣಿಕೆಯಷ್ಟು ಕೇಸ್ ಮಾತ್ರ ಪತ್ತೆಯಾಗಿವೆ.
ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:55 pm, Wed, 8 October 25