ಬೆಂಗಳೂರು: ಕೊರೊನಾ ಪೀಡೆಯನ್ನು ನಿಯಂತ್ರಿಸಲು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಗಾಧವಾದ ಭ್ರಷ್ಟಾಚಾರ ನಡೆದಿದೆಯೆಂದು ಕಾಂಗ್ರೆಸ್ ಪಕ್ಷದ ನಾಯಕರು ಪದೆಪದೇ ಆರೋಪ ಮಾಡುತ್ತಾ, ಸುದ್ದಿಗೋಷ್ಠಿ ಹಾಗೂ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಮಗುಮ್ಮಾಗಿದ್ದ ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ನಾಯಕ ಹೆಚ್ ಡಿ ದೇವೇಗೌಡ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರದಂದು ಮಾಧ್ಯಮದವರೊಂದಿಗೆ ಮಾತನಾಡಿದ ದೇವೇಗೌಡರು, ಕೊವಿಡ್ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದೀಗ ಬಟಾಬಯಲಾಗಿದೆ. ಎರಡು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ದುರುಪಯೋಗವಾಗಿದೆಯೆಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ನಾವು ಹೋರಾಟ ಮಾಡಬೇಕೋ ಬೇಡವೋ ಅಂತ ಅರ್ಥವಾಗುತ್ತಿಲ್ಲ ಎಂದು ಹೆಚ್ಡಿಡಿ ಹೇಳಿದರು.
‘ನಾವು ಪ್ರತಿಭಟನೆ ನಡೆಸಲು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣವಿದೆ. ನಮ್ಮ ಹೋರಾಟಗಳು ಭ್ರಷ್ಟರನ್ನು ಮತ್ತಷ್ಟು ಬಲಪಡಿಸುತ್ತವೆ. ಇದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿವೆ. ಹಾಗಂತ ನಾವು ಸುಮ್ಮನೆ ಕೂರಲಾರೆವು’ ಎಂದು ಗೌಡರು ಹೇಳಿದರು.
ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಉರುಳಿಸುತ್ತಿರುವ ಪ್ರಯತ್ನಗಳನ್ನು ಖಂಡಿಸಿದ ದೇವೇಗೌಡರು, ಇದನ್ನು ಯಾರು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅಧಿಕಾರ ಕಬಳಿಸಲು ಆವರು ಯಾವ ಮಟ್ಟಕ್ಕಾದರೂ ಇಳಿಯಬಲ್ಲರು ಎಂದರು.
Published On - 6:27 pm, Tue, 28 July 20