Yadagiri News: ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ 45.80 ಡಿಗ್ರಿ ಸೆಲ್ಸಿಯೆಸ್ ಉಷ್ಣಾಂಶ; ಬಿಸಿಲಿನ ಬೇಗೆಗೆ ಹೈರಾಣಾದ ಜನ

|

Updated on: May 24, 2023 | 9:01 AM

ರಾಜ್ಯದ ಒಂದು ಭಾಗದಲ್ಲಿ ಅತೀಯಾದ ಮಳೆಯಾಗಿ ಜನ ಹೈರಾಣಾಗಿ ಹೋಗಿದ್ದಾರೆ. ಇನ್ನೊಂದು ಕಡೆ ಅದಕ್ಕೆ ವಿರುದ್ಧ ಎಂಬಂತೆ ಅತಿಯಾದ ಉಷ್ಣಾಂಶದಿಂದ ಕಂಗಾಲಾಗಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕ ಆ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ. ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಇನ್ನೊಂದು ಕಡೆ ಇದೆ ರಣ ಬಿಸಿಲಿನಿಂದ ನವಜಾತ ಶಿಶುಗಳು ಅನಾರೋಗ್ಯದಿಂದ ಬಳಲುವಂತಾಗಿದೆ.

Yadagiri News: ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ 45.80 ಡಿಗ್ರಿ ಸೆಲ್ಸಿಯೆಸ್ ಉಷ್ಣಾಂಶ; ಬಿಸಿಲಿನ ಬೇಗೆಗೆ ಹೈರಾಣಾದ ಜನ
ಯಾದಗಿರಿ
Follow us on

ಯಾದಗಿರಿ: ಜಿಲ್ಲೆಯಲ್ಲಿ ದಾಖಲಾದ ದಾಖಲೆ ಪ್ರಮಾಣದ ಬಿಸಿಲು. ಕಳೆದ ವಾರದಿಂದ ಏರುತ್ತಿದೆ ಉಷ್ಣಾಂಶದ ಪ್ರಮಾಣ. ಮನೆಯಿಂದ ಹೊರಬರಲು ಹೆದರುತ್ತಿರುವ ಬಿಸಿಲಿಗೆ ತತ್ತರಿಸಿದ ಜನ. ಇನ್ನೊಂದು ಕಡೆ ಅತಿಯಾದ ಬಿಸಿಲಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ನವಜಾತ ಶಿಶುಗಳು. ಈ ದೃಶ್ಯಗಳು ಕಂಡು ಬಂದಿದ್ದು ಜಿಲ್ಲೆಯಲ್ಲಿ. ಹೌದು ಯಾದಗಿರಿ(Yadagiri)ಜಿಲ್ಲೆ ಅಂದ್ರೆ ಸಾಕು ಬಿಸಿಲ ನಾಡು ಎಂದು ಕರೆಸಿಕೊಳ್ಳುತ್ತೆ. ಪ್ರತಿ ವರ್ಷ ಬೇಸಿಗೆ ಬಂತು ಅಂದ್ರೆ ಸಾಕು ಜನ ಮನೆಯಿಂದ ಹೊರ ಬರಲು ಹೆದರುವಂತಾಗುತ್ತೆ. ಆದ್ರೆ, ಈ ವರ್ಷ ಪ್ರತಿ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗಿದ್ದರಿಂದ ಜಿಲ್ಲೆಯ ಜನ ಅಕ್ಷರಶ ಪತರಗುಟ್ಟಿ ಹೋಗಿದ್ದಾರೆ. ಇದೆ ಕಾರಣಕ್ಕೆ ಜನ ಅನಿವಾರ್ಯವಾಗಿ ಮನೆಯಿಂದ ಹೊರ ಬರ್ತಾಯಿರುವ ಜನ ಬಿಸಿಲಿನಿಂದ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ನಾನಾ ರೀತಿಯ ಪ್ರಯೋಗಗಳನ್ನ ಮಾಡುತ್ತಿದ್ದಾರೆ.

ಈ ವರ್ಷ ದಾಖಲೆ ಪ್ರಮಾಣದ 45.80 ಡಿಗ್ರಿ ಸೆಲ್ಸಿಯೆಸ್ ಉಷ್ಣಾಂಶ ದಾಖಲು

ಹೌದು ಅದರಲ್ಲೂ ಹಳ್ಳಿಗಳಿಂದ ಸಿಟಿಗೆ ನಾನಾ ಕೆಲಸಗಳ ಕಾರಣಕ್ಕೆ ಬರುವ ಜನ ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದಾರೆ. ತಹಶೀಲ್ದಾರ್​, ಜಿಲ್ಲಾಧಿಕಾರಿ, ನ್ಯಾಯಾಲಯ ಸೇರಿದಂತೆ ನಾನಾ ಕಚೇರಿಗೆ ಬರುವ ಜನ ಬಿಸಿಲಿನ ಹೊಡೆತಕ್ಕೆ ಬೆಂಡಾಗಿದ್ದಾರೆ. ಇದೆ ಕಾರಣಕ್ಕೆ ಕಚೇರಿಗಳ ಮುಂದೆ ಎಲ್ಲೆಲ್ಲಿ ಮರಗಿಡಗಳು ಕಾಣುತ್ತವೆಯೋ ಅಲ್ಲಿ ಹೋಗಿ ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ 38 ರಿಂದ 40 ಡಿಗ್ರಿ ಸೆಲ್ಸಿಯೆಸ್ ಉಷ್ಣಾಂಶ ದಾಖಲಾಗುತ್ತಿತ್ತು. ಆದ್ರೆ, ಈ ವರ್ಷ ದಾಖಲೆ ಪ್ರಮಾಣದಲ್ಲಿ 45.80 ಡಿಗ್ರಿ ಸೆಲ್ಸಿಯೆಸ್ ಉಷ್ಣಾಂಶ ದಾಖಲಾಗಿದೆ. ಜಿಲ್ಲೆಯ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಇಷ್ಟೊಂದು ಸೆಲ್ಸಿಯಸ್​ ದಾಖಲಾಗಿದೆ.

ಇದನ್ನೂ ಓದಿ:ವಿಡಿಯೋ: ಹೊರಗೆ ಬಿಸಿಲು ಸುಡುತ್ತಿದೆ ಎಂದು ಎಸಿಯ ತಂಪು ವಾತಾವರಣದಲ್ಲಿದ್ದ ಎಟಿಎಂಗೆ ನುಗ್ಗಿತ್ತು ನಾಗರ, ಅದ ನೋಡಿ ಥರ ಥರ ಥರಗುಟ್ಟಿದ ಗ್ರಾಹಕ

ಈ ವರ್ಷ ಕಳೆದ ಒಂದು ವಾರದಿಂದ ನಿರಂತರವಾಗಿ ಉಷ್ಣಾಂಶದ ಪ್ರಮಾಣ ಏರುತ್ತಿದ್ದು, ಸದ್ಯ 45 ಡಿಗ್ರಿ ಸೆಲ್ಸಿಯೆಸ್ಗೆ ಬಂದು ನಿಂತಿದೆ. ಇನ್ನು ಈ ಬಿಸಿಲಿನಿಂದ ನವಜಾತ ಶಿಶುಗಳ ಮೇಲೆ ಬಾರಿ ಪರಿಣಾಮ ಬಿರುತ್ತಿದೆ. ಇದೆ ಕಾರಣಕ್ಕೆ ಬಿಸಿಲಿನ ಹೊಡೆತಕ್ಕೆ ಕಳೆದ ಒಂದೇ ವಾರದಲ್ಲಿ ಸುಮಾರು 30 ಕ್ಕೂ ಅಧಿಕ ಮಕ್ಕಳು ಆಸ್ಪತ್ರೆಗೆ ದಾಖಲಾಗಿವೆ. ನವಜಾತ ಶಿಶುಗಳಲ್ಲಿ ನಿರ್ಜಲೀಕರಣ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ನಿರ್ಜಲೀಕರಣದಿಂದಾಗಿ ಮಕ್ಕಳ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಕಿಡ್ನಿ ಸಮಸ್ಯೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಮಕ್ಕಳಿಗೆ ತೀವ್ರ ಜ್ವರ, ವಾಂತಿಯೂ ಕಾಣಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಬೇಸಿಗೆ ಆರಂಭದ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಕಂಡು ಬಂದಿಲ್ಲ. ಅದರಲ್ಲೂ ಏಪ್ರಿಲ್ ತಿಂಗಳಲ್ಲಿ ಆಗಾಗ ಮಳೆಯಾಗುತ್ತಿದ್ದ ಕಾರಣಕ್ಕೆ ಬೇಸಿಗೆ ಇದಿಯಾ ಇಲ್ಲವೋ ಎನ್ನುವಂತ ಸ್ಥಿತಿ ಇತ್ತು. ಆದ್ರೆ, ಈಗ ಬೇಸಿಗೆಯ ಕೊನೆ ಹಂತದಲ್ಲಿ ದಾಖಲೆ ಪ್ರಮಾಣದಲ್ಲಿ ರಣ ಬಿಸಿಲು ದಾಖಲಾಗುತ್ತಿದೆ. ಬಿಸಿಲಿನಿಂದ ಬಸವಳಿದ ಜನ ದಾಹ ತೀರಿಸಿಕೊಳ್ಳಲು ಹೆಚ್ಚಾಗಿ ತಂಪು ಪಾನಿಯಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಹಳ್ಳಿಯಿಂದ ಬಂದ ಜನರು ತಲೆ ಮೇಲೆ ಟೋಪಿ, ಟಾವಲ್, ರೂಮಾಲು ಹಾಗೂ ಕೊಡೆಯನ್ನ ಬಳಸಿಕೊಂಡು ಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದಾರೆ. ಇನ್ನೊಂದು ಕಡೆ ಒಂದು ವಾರದಿಂದ ದಾಖಲೆ ಪ್ರಮಾಣದಲ್ಲಿ ಬಿಸಿಲು ಹೆಚ್ಚಾಗುತ್ತಿದ್ದ ಕಾರಣಕ್ಕೆ ಯಾದಗಿರಿ ನಗರದಲ್ಲಿ ಮಣ್ಣಿನ ಮಡಕೆ ಮಾರಾಟ ಕೂಡ ಜೋರಾಗುತ್ತಿದೆ.

ಇದನ್ನೂ ಓದಿ:ವಿಡಿಯೋ: ಹೊರಗೆ ಬಿಸಿಲು ಸುಡುತ್ತಿದೆ ಎಂದು ಎಸಿಯ ತಂಪು ವಾತಾವರಣದಲ್ಲಿದ್ದ ಎಟಿಎಂಗೆ ನುಗ್ಗಿತ್ತು ನಾಗರ, ಅದ ನೋಡಿ ಥರ ಥರ ಥರಗುಟ್ಟಿದ ಗ್ರಾಹಕ

ನಗರದಲ್ಲಿ ಮಣ್ಣಿನ ಮಡಕೆ ಮಾರಾಟ ಜೋರು

ಯಾದಗಿರಿ ನಗರದ ಎರಡ್ಮೂರು ಕಡೆ ಕುಂಬಾರರು ಮಾರಾಟ ಮಾಡುವ ಮಡಕೆಗಳನ್ನ ಖರೀದಿ ಮಾಡಲು ಜನ ಮುಂದಾಗುತ್ತಿದ್ದಾರೆ. ಬಡವರ ಫ್ರೀಡ್ಜ್ ಅಂತ ಕರೆಸಿಕೊಳ್ಳುವ ಮಣ್ಣಿನ ಮಡಕೆಗಳಿಗೆ ಪ್ರತಿ ವರ್ಷ ಬಾರಿ ಡಿಮ್ಯಾಂಡ್ ಉಂಟಾಗುತ್ತೆ. ಆದ್ರೆ, ಈ ವರ್ಷ ಬಿಸಿಲು ಹೆಚ್ಚಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಡಕೆಗಳ ಖರೀದಿ ಕೂಡ ಹೆಚ್ಚಾಗುತ್ತಿದೆ. ಮಡಕೆಯಲ್ಲಿನ ನೀರು ಕುಡಿದ್ರೆ, ದೇಹಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಮಡಕೆಗಳನ್ನ ಖರೀದಿ ಮಾಡಿಕೊಂಡು ಜನ ಹೋಗುತ್ತಿದ್ದಾರೆ. ಇನ್ನು ಈ ಬಾರಿ ಮಾರುಕಟ್ಟೆಯಲ್ಲಿ ಗ್ರಾಹಕರನ್ನ ಸೆಳೆಯಲು ಕುಂಬಾರರು ರಾಜಸ್ಥಾನ ಹಾಗೂ ಆಂಧ್ರ ಪ್ರದೇಶದಿಂದ ಕಲರ್ ಫುಲ್ ಮಡಕೆಗಳನ್ನ ತರಿಸಿದ್ದಾರೆ. ಬಣ್ಣ ಬಣ್ಣದ ಮಡಕೆಗಳನ್ನ ಜನ ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ.

ಒಟ್ಟನಲ್ಲಿ ದಾಖಲೆ ಪ್ರಮಾಣದ ರಣ ಬಿಸಿಲಿಗೆ ಯಾದಗಿರಿ ಜಿಲ್ಲೆಯ ಜನ ಅಕ್ಷರಶ ತತ್ತರಿಸಿ ಹೋಗಿದ್ದಾರೆ. ಹಿಂದೆಂದು ದಾಖಲಾಗದ ಬಿಸಿಲು ಈ ಬಾರಿ ದಾಖಲಾಗಿದ್ದರಿಂದ ನಾನಾ ರೀತಿಯ ತೊಂದರೆಗಳು ಉಂಟಾಗುತ್ತಿವೆ. ಅದರಲ್ಲೂ ಈ ರಣ ಬಿಸಿಲು ನವಜಾತ ಶಿಶುಗಳ ಮೇಲೆ ಬಾರಿ ಪರಿಣಾಮ ಬಿರಿದಂತೂ ಸುಳ್ಳಲ್ಲ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ