ಬೆಂಗಳೂರು, ಮಾ.11: ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ (Fake News) ಹರಿಡಿಸುವವರ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ ಇಂದು ಸಭೆ ನಡೆಸಿ ಕೆಲವು ತೀರ್ಮಾನಗಳನ್ನು ಮಾಡಿದೆ. ಯಾವ ವ್ಯಕ್ತಿ ಫೇಕ್ ನ್ಯೂಸ್ ಮಾಡ್ತಾರೆ, ಅವರಿಗೆ ಯಾವ ಶಿಕ್ಷೆ ನೀಡಬೇಕು ಎಂಬಿತ್ಯಾದಿಗಳ ಕುರಿತು ಚರ್ಚೆ ನಡೆಸಲಾಗಿದ್ದು, ವಿವಿಧ ಇಲಾಖೆಗಳ ಸಮನ್ವಯ ಸಂಪಾದಿಸಲು ಸಮಿತಿ ರಚನೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ (Dr.G. Parameshwara) ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸೈಬರ್ ಕ್ರೈಂ ಸಭೆ ಬಳಿಕ ಮಾತನಾಡಿದ ಅವರು, ಫೇಕ್ ನ್ಯೂಸ್ ವಿರುದ್ಧ ಸಭೆಯಲ್ಲಿ ಕೆಲ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ಫೇಕ್ ನ್ಯೂಸ್ ನಿಯಂತ್ರಿಸಲು ಹಾಗೂ ಪತ್ತೆಹಚ್ಚಿ ಯಾವ ಕ್ರಮ ಕೈಗೊಳ್ಳಬೇಕು, ಯಾವ ವ್ಯಕ್ತಿ ಫೇಕ್ ನ್ಯೂಸ್ ಮಾಡುತ್ತಾರೆ, ಅಂತವರಿಗೆ ಯಾವ ಶಿಕ್ಷೆ ನೀಡಬೇಕು, ಯಾರು ತನಿಖೆ ಮಾಡಬೇಕೆಂದು ಕೆಲ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.
ಮಂಗಳವಾರ ಅಥವಾ ಬುಧವಾರ ಈ ಸಂಬಂಧ ಆದೇಶ ಹೊರಡಿಸುತ್ತೇವೆ ಎಂದು ಹೇಳಿದ ಪರಮೇಶ್ವರ, ಇದಕ್ಕಾಗಿ ವಿವಿಧ ಇಲಾಖೆಗಳ ಸಮನ್ವಯ ಸಂಪಾದಿಸಲು ಸಮಿತಿ ರಚನೆ ಮಾಡಿದ್ದೇವೆ. ಹಿರಿಯ ಪೊಲೀಸ್ ಅಧಿಕಾರಿ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಬೇರೆ ಇಲಾಖೆಗಳ ಕಾರ್ಯದರ್ಶಿಗಳು ಈ ಸಮಿತಿಯಲ್ಲಿ ಇರುತ್ತಾರೆ. ಪೊಲೀಸ್ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸುತ್ತೇವೆ. ನೋಡಲ್ ಅಧಿಕಾರಿಯೇ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಮೂಲಕ ಸರ್ಕಾರಕ್ಕೆ ಇದರ ಮಾಹಿತಿ ನೀಡಲಾಗುತ್ತದೆ ಎಂದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಾಂಬರ್ ಯಾರೆಂಬುದು ಗೊತ್ತಾಗಿದೆ: ಗೃಹಸಚಿವ ಪರಮೇಶ್ವರ್
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಿದ ನಂತರ ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹರಿ ಬಿಡುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಸುಖಾ ಸುಮ್ಮನೆ ಬೇಕಾ ಬಿಟ್ಟಿಯಾಗಿ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಸುಳ್ಳು ಸುದ್ದಿಗಳನ್ನು ಷೇರ್ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ಸದ್ದಿಲ್ಲದೇ ಖಾಕಿ ಪಡೆ ಆ್ಯಕ್ಟೀವ್ ಆಗಿದೆ.
ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಬೆಂಗಳೂರಿನ ಎಲ್ಲಾ ಠಾಣೆಯ ಸಿಬ್ಬಂದಿಗೆ ಸೂಚಿಸಲಾಗಿದೆ. ಬೆಂಗಳೂರು ನಗರದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಇಬ್ಬರು ಎಕ್ಸ್ ಪರ್ಟ್ಗಳ ನೇಮಕ ಮಾಡಲಾಗಿದೆ. ಇವರು ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ ಎಂದು ಈ ಹಿಂದೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ