ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ..

|

Updated on: Jan 18, 2021 | 12:46 PM

ಬೆಳಗಾವಿ ಗಡಿ ಬಗ್ಗೆ ಮಹಾಜನ ವರದಿಯೇ ಅಂತಿಮ. ಎಲ್ಲವೂ ಇತ್ಯರ್ಥವಾದ ಮೇಲೆ ಮತ್ತೆ ಕೆಣಕಿ ರಾಜಕೀಯ ಮಾಡಬೇಡಿ. ಈಗ ನೀವು ಕೇವಲ ಶಿವಸೈನಿಕ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ..
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಮರಾಠಿ ಭಾಷೆ ಮಾತನಾಡುವ ಜನರು ಹೆಚ್ಚಾಗಿರುವ ಕರ್ನಾಟಕದ ಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಾವು ಬದ್ಧ ಎಂದಿರುವ ಅಲ್ಲಿನ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ಕನ್ನಡಿಗರು ಶಾಂತಿಪ್ರಿಯರು, ಸಹನಾಶೀಲರು ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ನಮ್ಮ ಸಜ್ಜನಿಕೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮ ಸರಣಿ ಟ್ವೀಟ್​ಗಳಿಗೆ ಬೆಳಗಾವಿ ನಮ್ಮದು ಎಂದು ಹ್ಯಾಷ್​ಟ್ಯಾಗ್​ ನೀಡಿರುವ ಸಿದ್ದರಾಮಯ್ಯನವರು, ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೀಡಿರುವ ಹೇಳಿಕೆ ಖಂಡನೀಯ. ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಇತ್ಯರ್ಥವಾಗಿರುವ ವಿಷಯವನ್ನು ಕೆಣಕಲು ಬರಬೇಡಿ ಎಂದು ಹೇಳಿದ್ದಾರೆ.

ಬೆಳಗಾವಿ ಗಡಿ ಬಗ್ಗೆ ಮಹಾಜನ ವರದಿಯೇ ಅಂತಿಮ. ಎಲ್ಲವೂ ಇತ್ಯರ್ಥವಾದ ಮೇಲೆ ಮತ್ತೆ ಕೆಣಕಿ ರಾಜಕೀಯ ಮಾಡಬೇಡಿ. ಈಗ ನೀವು ಕೇವಲ ಶಿವಸೈನಿಕ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ ಎಂದೂ ಹೇಳಿದ್ದಾರೆ. ಹಾಗೇ, ಕರ್ನಾಟಕ ನೆಲ, ಜಲ-ಭಾಷೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿಯವರ ಉದ್ಧಟತನದ ಹೇಳಿಕೆಗೆ ನಮ್ಮ ಮುಖ್ಯಮಂತ್ರಿ ತಕ್ಕ ಪ್ರತ್ಯುತ್ತರ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

 

ಕರ್ನಾಟಕದ ಬಗ್ಗೆ ಉದ್ಧವ್ ಠಾಕ್ರೆ ಯೋಚಿಸುವುದು ಬೇಡ
ಮಹಾರಾಷ್ಟ್ರ ಮುಖ್ಯಮಂತ್ರಿಯ ಹೇಳಿಕೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕೂಡ ಅಸಮಾಧಾನ ಹೊರಹಾಕಿದ್ದಾರೆ. ನೆಲ, ಜಲ ವಿಚಾರದಲ್ಲಿ ಈಗಾಗಲೇ ನಿರ್ಧಾರವಾಗಿದೆ. ಆದರೂ ಉದ್ಧವ್ ಠಾಕ್ರೆ ವೈಯಕ್ತಿಕ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರು ಕರ್ನಾಟಕ ರಾಜ್ಯದ ಬಗ್ಗೆ ಚಿಂತೆ ಮಾಡುವುದು ಬೇಡ. ರಾಜಕೀಯ ಹೇಳಿಕೆಗೆ ಮಹತ್ವ ನೀಡೋದು ಬೇಡ. ನಾವು ರಾಜ್ಯದ ಹಿತ ಕಾಯುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧಟತನ ತೋರುತ್ತಿದ್ದಾರೆ.. ಗಡಿ ಸೌಹಾರ್ದತೆ ಕದಡುತ್ತಿದ್ದಾರೆ: ಸಿಎಂ ಯಡಿಯೂರಪ್ಪ ಆಕ್ರೋಶ

Published On - 12:08 pm, Mon, 18 January 21