ಬೆಂಗಳೂರು: ಹಲಗೇವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ಗರಂ ಆಗಿದೆ. ಜೆಡಿಎಸ್ ವರಿಷ್ಠ ಎಚ್ ಡಿ ಕುಮಾರಸ್ವಾಮಿ ಈ ಪ್ರಕರಣದ ವಿಚಾರಣೆಗೆ ಪದೇ ಪದೇ ಗೈರು ಹಾಜರಾಗುತ್ತಿದ್ದರು. ಈ ಬಾರಿಯ ವಿಚಾರಣೆಗೆ ಕೊರೊನಾ ಕ್ವಾರಂಟೈನ್ನಲ್ಲಿರುವ ಕಾರಣದಿಂದ ವಿನಾಯಿತಿ ನೀಡಲು ಅವರು ಮನವಿ ಮಾಡಿದ್ದರು. ಆದರೆ ಕುಮಾರಸ್ವಾಮಿ ಅವರ ಅರ್ಜಿಯ ವಿರುದ್ಧ ಮುನಿಸಿಕೊಂಡಿರುವ ಕೋರ್ಟ್, ‘ನೀವು ಕ್ವಾರಂಟೈನ್ ಆಗಿದ್ದರೆ ಸಾರ್ವಜನಿಕವಾಗಿ ಹೊರಗೆ ಕಾಣಿಸಬಾರದು. ಹಾಗೇನಾದರೂ ಕಾಣಿಸಿಕೊಂಡರೆ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗುವುದು ಎಂದು ತಾಕೀತು ಮಾಡಿದೆ. ಈ ಮೂಲಕ ಒಂದುವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಅವಧಿಯೊಳಗೆ (ಏಪ್ರಿಲ್ 17) ಸಾರ್ವಜನಿಕವಾಗಿ ಕಾಣಿಸಿಕೊಂಡಲ್ಲಿ ಬಂಧನದ ಭೀತಿ ಎದುರಿಸುವಂತಾಗಿದೆ. ಅಲ್ಲದೇ ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಏಪ್ರಿಲ್ 17ರಂದು ಸಮನ್ಸ್ ಜಾರಿಗೊಳಿಸಲಾಗಿದೆ.
ಏಪ್ರಿಲ್ 17ರವರೆಗೂ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಬಹಿರಂಗವಾಗಿ ಕಾಣಿಸಿಕೊಳ್ಳುವಂತಿಲ್ಲ; ಕಾಣಿಸಿಕೊಂಡರೆ ಅರೆಸ್ಟ್ ವಾರಂಟ್ ಜಾರಿ: ಕೋರ್ಟ್ ಆದೇಶ
ಈ ಮೊದಲು ಹಲಗೇವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ತನಿಖೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಪ್ರಕರಣದ ತನಿಖೆ ಮುಂದುವರಿಸುವಂತೆ ಸೂಚನೆ ನೀಡಿತ್ತು. ನ್ಯಾ. ಅಶೋಕ್ ಭೂಷಣ್ ನೇತೃತ್ವದ ಪೀಠದಲ್ಲಿ ನಡೆದ ವಿಚಾರಣೆ ವೇಳೆ ಈ ತೀರ್ಮಾನ ಹೊರಬಿದ್ದಿತ್ತು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಕೋರಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿತ್ತು. ಚಾಮರಾಜನಗರದ ಎಂ.ಎಸ್.ಮಹದೇವಸ್ವಾಮಿ ಎಂಬುವವರು ಈ ಈ ದೂರು ಸಲ್ಲಿಸಿದ್ದರು.
ಹಲಗೆ ವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಹೀಗಾಗಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನ ಆದೇಶ ಪ್ರಶ್ನಿಸಿ, ಎಚ್.ಡಿ ಕುಮಾರಸ್ವಾಮಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಎಚ್.ಡಿ. ಕುಮಾರಸ್ವಾಮಿ ಅರ್ಜಿ ವಜಾಗೊಳಿಸಿತ್ತು.
ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಸಹ ಪ್ರಕರಣದ ತನಿಖೆ ಮುಂದುವರಿಸುವಂತೆ ಸೂಚನೆ ನೀಡಿತ್ತು. ಹೀಗಾಗಿ ಪ್ರಕರಣದ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಹಿನ್ನಡೆಯುಂಟಾಗಿತ್ತು. ಇದೀಗ ವಿಚಾರಣೆಗೆ ಗೈರುಹಾಜರಾಗುತ್ತಿದ್ದ ಅವರ ಕುರಿತು ಕೋರ್ಟ್ ಗರಂ ಆಗಿದೆ.
ಇದನ್ನೂ ಓದಿ: ಏರ್ಪೋರ್ಟ್ ಚಾಲಕ ಆತ್ಮಹತ್ಯೆ; ಪ್ರತಾಪ್ ಕುಟುಂಬಕ್ಕೆ ಧೈರ್ಯ ತುಂಬಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಮೊದಲ ದಿನದ 5 ಕೋಟಿ ಹೇಳಿಕೆ ನೆನಪಿಸಿಕೊಂಡ ಎಚ್.ಡಿ.ಕುಮಾರಸ್ವಾಮಿ