ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಮೊದಲ ದಿನದ 5 ಕೋಟಿ ಹೇಳಿಕೆ ನೆನಪಿಸಿಕೊಂಡ ಎಚ್.ಡಿ.ಕುಮಾರಸ್ವಾಮಿ
‘ಇದು ₹ 5 ಕೋಟಿ ವ್ಯವಹಾರವೆಂದು ಮೊದಲ ದಿನವೇ ನಾನು ಹೇಳಿದ್ದೆ’ ಎಂದು ನೆನಪಿಸಿಕೊಂಡಿರುವ ಕುಮಾರಸ್ವಾಮಿ. ‘ನರೇಶ್ ಎಂಬ ಹುಡುಗನ ಬಗ್ಗೆಯೂ ನಾನು ಪ್ರತಿಕ್ರಿಯಿಸಿದ್ದೆ. ಈಗ ಒಂದೊಂದಾಗಿ ಎಲ್ಲವೂ ಹೊರಗೆ ಬರುತ್ತಿವೆ’ ಎಂದು ನುಡಿದರು.
ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಸುದ್ದಿಸ್ಫೋಟಕ್ಕೆ ಸಂಬಂಧಿಸಿದಂತೆ ಗುರುವಾರ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಯಿಸಿದ್ದಾರೆ. ‘ಇದು ₹ 5 ಕೋಟಿ ವ್ಯವಹಾರವೆಂದು ಮೊದಲ ದಿನವೇ ನಾನು ಹೇಳಿದ್ದೆ’ ಎಂದು ನೆನಪಿಸಿಕೊಂಡಿರುವ ಕುಮಾರಸ್ವಾಮಿ. ‘ನರೇಶ್ ಎಂಬ ಹುಡುಗನ ಬಗ್ಗೆಯೂ ನಾನು ಪ್ರತಿಕ್ರಿಯಿಸಿದ್ದೆ. ಈಗ ಒಂದೊಂದಾಗಿ ಎಲ್ಲವೂ ಹೊರಗೆ ಬರುತ್ತಿವೆ’ ಎಂದು ನುಡಿದರು.
‘ಈ ಪ್ರಕರಣದ ಮಹಾನಾಯಕ ಯಾರು ಎಂಬುದು ಈವರೆಗೆ ನನಗೂ ಗೊತ್ತಾಗಿಲ್ಲ. ಈ ಕುರಿತು ಎಸ್ಐಟಿ ಅಧಿಕಾರಿಗಳೇ ವಾಸ್ತವ ಸಂಗತಿ ಬಹಿರಂಗಪಡಿಸಬೇಕು. ತನಿಖಾಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಿ ರಾಜ್ಯದ ಮರ್ಯಾದೆ ಉಳಿಸಬೇಕು’ ಎಂದು ಸಲಹೆ ಮಾಡಿದರು.
‘ನನಗೂ ಹಲವು ಮೂಲಗಳಿಂದ ಎಲ್ಲ ರೀತಿಯ ಮಾಹಿತಿ ಸಿಗುತ್ತೆ. ನನ್ನ ತಂದೆ 70 ವರ್ಷ ರಾಜಕೀಯ ಮಾಡಿದವರು ಎಂಬುದನ್ನು ಮರೆಯಬೇಡಿ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ’ ಎಂದು ಮುಗುಮ್ಮಾಗಿ ಹೇಳಿದರು.
ನನ್ನದೇನೂ ತಪ್ಪಿಲ್ಲ: ಆರೋಪಿ ನರೇಶ್ ರಮೇಶ್ ಜಾರಕಿಹೊಳಿ ಸಿಡಿ ಸುದ್ದಿಸ್ಫೋಟಕ್ಕೆ ಸಂಬಂಧಿಸಿದಂತೆ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದ ಆರೋಪಿ ಪತ್ರಕರ್ತ ನರೇಶ್, ‘ಮಾಡಬಾರದ ಕೆಲಸ ಮಾಡಿದ್ದು ರಮೇಶ್ ಜಾರಕಿಹೊಳಿ’ ಎಂದು ನೇರ ಆರೋಪ ಮಾಡಿದ್ದರು. ‘ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ನನ್ನ ಹೆಸರನ್ನು ವ್ಯವಸ್ಥಿತವಾಗಿ ಸೇರಿಸಲಾಗಿದೆ’ ಎಂದು ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಪತ್ರಕರ್ತನಾಗಿದ್ದ ಕಾರಣ ಯುವತಿಯ ಪರಿಚಯ ಆಗಿತ್ತು, ಆಕೆ ತನಗೆ ರಮೇಶ್ ಜಾರಕಿಹೊಳಿಯಿಂದ ತನಗೆ ತೊಂದರೆ ಆಗಿರುವುದಾಗಿ ಹೇಳಿದ್ದರು. ಸಾಕ್ಷಿ ಇದ್ದರೆ ಕಳುಹಿಸಿ ಎಂದಿದ್ದೆ. ಅದಾದ ನಂತರ ಆಕೆ ನನ್ನಿಂದ ಸಹಾಯ ಕೇಳಿದ್ದರು’ ಎಂದು ಹೇಳಿದ್ದಾರೆ.
‘ನಾನು ಯಾರಿಂದಲೂ ಹಣ ಪಡೆದಿಲ್ಲ. ಅಷ್ಟು ಹಣ ನನ್ನ ಬಳಿ ಇಲ್ಲ. ಪೊಲೀಸರ ವಿಚಾರಣೆಗೆ ಹಾಜರಾಗುತ್ತಿದ್ದೆ. ಆದರೆ, ಬಂದರೆ ಏನಾಗುತ್ತೆ ಅನ್ನೋದು ಗೊತ್ತಿದೆ. ಇನ್ನು 5-10 ದಿನಗಳೊಳಗೆ ಬಂದು ವಿಚಾರಣೆಗೆ ಹಾಜರಾಗ್ತೇನೆ. ಸಿಡಿ ವಿಚಾರ ಹೇಗೆ ಹೊರಗೆ ಬಂತು ಅನ್ನೋದು ನನಗೆ ಗೊತ್ತಿಲ್ಲ. ಆದರೆ, ಇದನ್ನೇ ಇಟ್ಟುಕೊಂಡು ನನ್ನ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದೆ’ ಎಂದು ಅಲವತ್ತುಕೊಂಡಿದ್ದರು.
ಅಪಹರಣದ ದೂರು ದಾಖಲು ನನ್ನ ಮಗಳನ್ನು ಆಪಹರಿಸಿ, ಬೆದರಿಸಿ ಅಶ್ಲೀಲ ಸಿಡಿ ಮಾಡಿಕೊಂಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಸಂತ್ರಸ್ತ ಯುವತಿಯ ತಂದೆ ಬೆಳಗಾವಿ ಎಪಿಎಂಸಿ ಠಾಣೆಗೆ ಮಂಗಳವಾರ ದೂರು ದಾಖಲಿಸಿದ್ದರು. ‘ನಾಪತ್ತೆಯಾಗಿರುವ ಮಗಳನ್ನು ಹುಡುಕಿಕೊಡಿ’ ಎಂದು ಅವರು ಪೊಲೀಸರನ್ನು ಕೋರಿದ್ದರು. ಇದಕ್ಕೂ ಮುನ್ನ ತನ್ನ ಕುಟುಂಬವನ್ನು ಸಂಪರ್ಕಿಸಿದ್ದ ಯುವತಿ, ಆ ಸಿಡಿಯಲ್ಲಿರುವ ಮಹಿಳೆ ನಾನಲ್ಲ. ನನ್ನ ಫೋಟೊವನ್ನು ಸೇರಿಸಿದ್ದಾರೆ ಎಂದು ಹೇಳಿದ್ದರು ಎಂದು ಯುವತಿಯ ಕುಟುಂಬದ ಸದಸ್ಯರು ಹೇಳಿದ್ದರು.
ಇದನ್ನೂ ಓದಿ: 2020ರ ಅಕ್ಟೋಬರ್ ತಿಂಗಳಲ್ಲಿ ಸಿಡಿ ತಯಾರಿ ಶಂಕೆ; ವಿಧಾನಸೌಧ ಸಿಬ್ಬಂದಿ ಜತೆಗೂ ಆರೋಪಿ ನರೇಶ್ ವಾಟ್ಸಪ್ ಚಾಟ್!
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ‘ಸಿಡಿ’ ಮಾಸ್ಟರ್ ಮೈಂಡ್ ಮನೆ ಮೇಲೆ ಎಸ್ಐಟಿ ಅಧಿಕಾರಿಗಳ ದಾಳಿ