ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ; ಪಾರಂಪರಿಕ ಕಟ್ಟಡ ನವೀಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟ

| Updated By: Skanda

Updated on: Jun 21, 2021 | 1:54 PM

Mysuru DC Office: ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿ ಇಲ್ಲದೆ ಕಟ್ಟಡ ನವೀಕರಿಸಿದ್ದಾರೆ. ಜತೆಗೆ, ನಿವಾಸದ ನೆಲ ಹಾಸಿಗೆಯ ನವೀಕರಣ ಮಾಡಿದ್ದಾರೆ ಎಂದು ಶಾಸಕ ಸಾ.ರಾ ಮಹೇಶ್ ದೂರು ನೀಡಿದ್ದರು.

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ; ಪಾರಂಪರಿಕ ಕಟ್ಟಡ ನವೀಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟ
ಶಾಸಕ ಸಾ.ರಾ ಮಹೇಶ್ ಮತ್ತು ರೋಹಿಣಿ ಸಿಂಧೂರಿ
Follow us on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಿಂದ ವಿವಾದಗಳನ್ನು ಹೊತ್ತು ನಿರ್ಗಮಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ ಎದುರುಗೊಂಡಿದೆ. ಮೈಸೂರು ಜಿಲ್ಲಾಧಿಕಾರಿ ಅಧಿಕೃತ ನಿವಾಸದ ನವೀಕರಣ ವಿಚಾರದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಕಂದಾಯ ಇಲಾಖೆ ಆದೇಶಿಸಿದೆ. ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿ ಇಲ್ಲದೆ ಕಟ್ಟಡ ನವೀಕರಿಸಿದ್ದಲ್ಲದೇ ನಿವಾಸದ ನೆಲ ಹಾಸಿಗೆಯ ನವೀಕರಣ ಮಾಡಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ 7 ದಿನಗಳ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ಸೂಚನೆ ನೀಡಲಾಗಿದೆ.

ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿ ಇಲ್ಲದೆ ಕಟ್ಟಡ ನವೀಕರಿಸಿದ್ದಾರೆ. ಜತೆಗೆ, ನಿವಾಸದ ನೆಲ ಹಾಸಿಗೆಯ ನವೀಕರಣ ಮಾಡಿದ್ದಾರೆ ಎಂದು ಶಾಸಕ ಸಾ.ರಾ ಮಹೇಶ್ ದೂರು ನೀಡಿದ್ದರು. ಇದೀಗ ಈ ದೂರನ್ನು ಆಧರಿಸಿ ತನಿಖೆ ನಡೆಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚನೆ ನೀಡಿರುವುದರಿಂದ ತಪ್ಪು ಮಾಡಿರುವುದು ಸಾಬೀತಾದರೆ ರೋಹಿಣಿ ಸಿಂಧೂರಿ ಕೆಲ ಸಂಕಷ್ಟಗಳನ್ನು ಎದುರಿಸಬೇಕಾದ ಸಾಧ್ಯತೆ ಇದೆ.

ಕಳೆದ ಕೆಲ ದಿನಗಳಿಂದಲೂ ಜೆಡಿಎಸ್​ ಶಾಸಕ ಸಾ.ರಾ.ಮಹೇಶ್ ನಿರ್ಗಮಿತ ಜಿಲ್ಲಾಧಿಕಾರಿ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದಾರೆ. ಅಲ್ಲದೇ ಮೈಸೂರು ನಗರದ ಲಿಂಗಾಬುದಿ ಕೆರೆ ಬಳಿ ಅಕ್ರಮ ಮಾಡಿದ ಆರೋಪ ವಿಚಾರವಾಗಿ ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ಕರೆದಿದ್ದ ಅವರು ತಮ್ಮ ಮೇಲೆ ಕೇಳಿಬಂದಿದ್ದ ಆರೋಪಗಳನ್ನು ಅಲ್ಲಗಳೆದಿದ್ದರು. ನನ್ನ ಪತ್ನಿ ಹೆಸರಲ್ಲಿ ಎರಡು ಎಕರೆ ಅಲ್ಲ, ನಾಲ್ಕು ಎಕರೆ ಭೂಮಿ ಇದೆ. ಆದರೆ, ಈ ಭೂಮಿಯನ್ನು 30 ವರ್ಷದ ಹಿಂದೆಯೇ ಖರೀದಿ ಮಾಡಿದ್ದೆ. ನಾನು ರಾಜಕಾಲುವೆ ಅಥವಾ ಹಳ್ಳದ ಮೇಲೆ ಕಟ್ಟಡ ಕಟ್ಟಿದ್ದರೆ ರಾಜ್ಯಪಾಲರಿಗೆ ನೀಡುವೆ. ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುವೆ. ನೀವು ಐಎಎಸ್ ಹುದ್ದೆಗೆ ರಾಜೀನಾಮೆ ಕೊಡ್ತೀರಾ? ಎಂದು ರೋಹಿಣಿ ಸಿಂದೂರಿಗೆ ಶಾಸಕ ಸಾ.ರಾ.ಮಹೇಶ್ ಸವಾಲೊಡ್ಡಿದ್ದರು.

ಈ ರೀತಿಯ ಅಧಿಕಾರಿಯನ್ನು ನಾನು ಜೀವನದಲ್ಲಿ ನೋಡಿಲ್ಲ. ಕೆಲವು ಸಾಮಾಜಿಕ ಜಾಲತಾಣ ಬಳಸಿಕೊಂಡು ಕಮ್ ಬ್ಯಾಕ್ ಅಂತಾ ಶೇರ್ ಟ್ರೆಂಡ್ ಮಾಡುತ್ತಿದ್ದಾರೆ ಎಂದು ರೋಹಿಣಿ ಕಮ್ ಬ್ಯಾಕ್‌ ಅಭಿಯಾನವನ್ನು ವ್ಯಂಗ್ಯ ಮಾಡಿದ್ದ ಶಾಸಕ ಸಾ.ರಾ.ಮಹೇಶ್, ರೋಹಿಣಿ ಸಿಂಧೂರಿ ಅವರಿಗೆ ಮನಸಾಕ್ಷಿ, ಆತ್ಮಸಾಕ್ಷಿ ಅಥವಾ ತಾಯಿ ಹೃದಯ ಇದ್ದರೆ ಒಮ್ಮೆ ಕುಳಿತುಕೊಂಡು ಮನಸಾಕ್ಷಿಯನ್ನು ಕೇಳಿಕೊಳ್ಳಬೇಕು. ಮೈಸೂರು ಜಿಲ್ಲೆಯಲ್ಲಿ ಕೊರೊನಾದಿಂದ 5 ಸಾವಿರ ಜನ ಸಾವನ್ನಪ್ಪಿದ್ದಾರೆ. ಆದರೆ ಮೈಸೂರಿನಲ್ಲಿ 2 ಸಾವಿರಕ್ಕೂ ಹೆಚ್ಚು ಕೊವಿಡ್ ಸಂಬಂಧಿತ ಸಾವನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಿದ್ದರು.

ಇದರ ಜತೆಗೆ ಇನ್ನೂ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿದ್ದ ಅವರು, ರೋಹಿಣಿ ಸಿಂಧೂರಿ ವಿರುದ್ಧ ಅನುಮತಿ ಇಲ್ಲದೇ ಪಾರಂಪರಿಕ ಕಟ್ಟಡ ನವೀಕರಣ ಮಾಡಿದ್ದಾರೆ ಎಂದ ದೂರನ್ನು ನೀಡಿದ್ದರು. ಸದ್ಯ ವರ್ಗಾವಣೆಯ ನಂತರವೂ ಮೈಸೂರು ಜನಪ್ರತಿನಿಧಿ ಹಾಗೂ ನಿರ್ಗಮಿತ ಜಿಲ್ಲಾಧಿಕಾರಿ ನಡುವಿನ ಜಟಾಪಟಿ ಮುಂದುವರೆದಿದ್ದು ಇದಕ್ಕೆ ತನಿಖೆಯಲ್ಲಿ ಏನು ಉತ್ತರ ಬರಲಿದೆ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ:
ರೋಹಿಣಿ ಸಿಂಧೂರಿಗೆ ತಾಯಿ ಹೃದಯವಿದ್ದರೆ ತಮ್ಮ ಮನಸ್ಸಾಕ್ಷಿ ಪ್ರಶ್ನಿಸಿಕೊಳ್ಳಲಿ: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ 

ರೋಹಿಣಿ ಮರು ನೇಮಕಕ್ಕೆ ‘ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಕ್ಯಾಂಪೇನ್, ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ