ಪ್ರತ್ಯೇಕ ಘಟನೆ: ನೈಸ್ ರಸ್ತೆಯಲ್ಲಿ ಸರಣಿ ಅಪಘಾತ: ಒಟ್ಟು 4 ಸಾವು, ಐವರಿಗೆ ಗಂಭೀರ ಗಾಯ

ಬೆಂಗಳೂರಿನ ನೈಸ್​ ರಸ್ತೆಯಲ್ಲಿ ಪ್ರತ್ಯೇಕ ಎರಡು ಅಪಘಾತಗಳು ಸಂಭವಿಸಿದ್ದು, ಘಟನೆಯಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು ಐವರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಚಿತ್ರದುರ್ಗ ಸಮೀಪ ಒಂದು ರಸ್ತೆ ಅಪಘಾತ ಸಂಭವಿಸಿದ್ದು, ದಂಪತಿ ಮೃತಪಟ್ಟಿದ್ದಾರೆ. ಈ ಘಟನೆಗಳ ವಿವರ ಈ ಕೆಳಗಿನಂತಿದೆ.

ಪ್ರತ್ಯೇಕ ಘಟನೆ: ನೈಸ್ ರಸ್ತೆಯಲ್ಲಿ ಸರಣಿ ಅಪಘಾತ: ಒಟ್ಟು 4 ಸಾವು, ಐವರಿಗೆ ಗಂಭೀರ ಗಾಯ
ಕಾರು ಅಪಘಾತ
Updated By: ರಮೇಶ್ ಬಿ. ಜವಳಗೇರಾ

Updated on: Jul 15, 2024 | 6:24 PM

ಬೆಂಗಳೂರು, (ಜುಲೈ 15): ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು,-ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊಸೂರು ಕಡೆ ತೆರಳುತ್ತಿದ್ದ ಸ್ಕಾರ್ಪಿಯೋ ಕಾರು ಡಿವೈಡರ್ ಡಿಕ್ಕಿ ಹೊಡೆದಿದೆ. ಬಳಿಕ ಡಿವೈಡರ್​ ದಾಟಿ ಮೈಸೂರು ರಸ್ತೆಯತ್ತ ತೆರಳುತ್ತಿದ್ದ XUV 700  ಕಾರಿಗೆ ಡಿಕ್ಕಿಹೊಡೆದಿದೆ. ಪರಿಣಾಮ ಸ್ಕಾರ್ಪಿಯೋನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ನಂಜೇಶ್(35),ವಿನೋದ್ (34)ಕಮಾರ್(35) ಮೃತ ದುರ್ದೈವಿಗಳು. ಮೃತರು ರಾಮನಗರ ಮೂಲದವರು.

ಹೊಸೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಸ್ಕಾರ್ಪಿಯೋ ಕಾರು ಮಳೆಯಿಂದಾಗಿ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಹೊಡೆದಿದೆ., ಬಳಿಕ ಡಿವೈಡರ್​ ದಾಟಿ ಆಕಡೆ ರಸ್ತೆಯಲ್ಲಿ ಚಲಿಸುತ್ತಿದ್ದ  XUV 700 ಗುದ್ದಿದೆ.  ಎಕ್ಸ್ ಯು ವಿ ಕಾರಿನಲ್ಲಿದ್ದ ಶಿವರಾಮಕೃಷ್ಣ(41),ಪ್ರಸನ್ನ(40) ಇಬ್ಬರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್  ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಜಿಟಿ-ಜಿಟಿ ಮಳೆ: ವಾತಾವರಣ ಫುಲ್ ಕೂಲ್ ಕೂಲ್, ಇನ್ನಷ್ಟು ಮಳೆ ಸಾಧ್ಯತೆ

ಮೃತ ಮೂವರು ಸ್ಕಾರ್ಪಿಯೋ ಕಾರಿನಲ್ಲಿ ಗೋವಾಗೆ ತೆರಳಲು ಬೆಂಗಳೂರಿನತ್ತ ಆಗಮಿಸಿದ್ದರು. ಈ ವೇಳೆ ಮಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೈಸ್ ರಸ್ತೆಯಲ್ಲಿ ಸರಣಿ ಅಪಘಾತ

ಮತ್ತೊಂದೆಡೆ ಎಲೆಕ್ಟ್ರಾನಿಕ್ ಸಿಟಿ ಬಳಿ ನೈಸ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ. ಎಲಿನ್ಸ್ ಕಂಪನಿ ಉದ್ಯೋಗಿ ಕುಣಿಗಲ್ ಮೂಲದ ದೇವರಾಜ್(42) ಮೃತ ದುರ್ವೈವಿ. ಗೊರಗುಂಟೆಪಾಳ್ಯದಿಂದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ ತೆರಳಿತ್ತಿದ್ದ ಎಲಿನ್ಸ್ ಕಂಪನಿ ಬಸ್‌ ನೈಸ್ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂದೆ ವೇಗವಾಗು ಬರುತ್ತಿದ್ದ ಎರಡು ಕಾರುಗಳು ಸಹ ಬಸ್‌ ಹಿಂಬದಿಗೆ ಡಿಕ್ಕಿ ಹೊಡೆದಿವೆ. ಪರಿಣಾಮ ಕಂಪನಿಯ ಮಿನಿ ಬಸ್‌ನಲ್ಲಿ ಚಾಲಕನ ಪಕ್ಕ ಕುಳಿತಿದ್ದ ದೇವರಾಜ್‌ ಮೃತಪಟ್ಟಿದ್ದಾನೆ. ಇನ್ನು ಮಿನಿ ಬಸ್‌ನಲ್ಲಿದ್ದ ಐವರಿಗೆ ಗಾಯಾಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳದಲ್ಲೇ ದಂಪತಿ ದುರ್ಮರಣ

ಚಿತ್ರದುರ್ಗ: ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಇನೋವಾ ಕಾರು ಪಲ್ಟಿಯಾಗಿ ದಂಪತಿ ಸಾವನ್ನಪ್ಪಿರುವ ಘಟನ ಚಿತ್ರದುರ್ಗ ಜಿಲ್ಲೆಯ ತಳಕು ಸಮೀಪದ ಹಿರೆಹಳ್ಳ ಗೇಟ್ ಸಮೀಪ ನಡೆದಿದೆ. ಮುಳುಬಾಗಿಲಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗೋಪಿನಾಥ(50) ಮತ್ತು ಪತ್ನಿ ಶ್ರೀಲತಾ(42) ಮೃತ ದುರ್ದೈವಿಗಳು.

ಗೋಪಿನಾಥ ಮಂಗಳೂರಿನಲ್ಲಿ ಹೋಂಗರ‍್ಡ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಶ್ರೀಲತಾ ಎಂಜಿಎಂ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಮಗಳು ಶ್ರೇಯಾ, ಮಗ ಶ್ರೀನಿವಾಸರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರಿಗೆ ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.