ಬೆಂಗಳೂರು: ಅಮೇರಿಕಾದಿಂದ ಬಂದ ವೃದ್ಧೆಗೆ ಮಗನಂತೆ ಇದ್ದುಕೊಂಡು ಕೊನೆಯಲ್ಲಿ ಕೋಟ್ಯಾಂತರ ರೂಪಾಯಿ ಮೋಸ ಮಾಡಿದ ಘಟನೆ ನಗರದ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಬ್ಬರು ಹೆಣ್ಣು ಮಕ್ಕಳ ಜೊತೆ ಇದ್ದ ಮಣಿ ತಿರಮಲೈ ಬೆಂಗಳೂರಿಗೆ ಆಗಮಿಸಿದಾಗ ಒಂಟಿಯಾಗಿದ್ದರು. ಈ ವೇಳೆ ಬಿಹಾರ ಮೂಲದ ಕನ್ನಯ್ಯ ಎಂಬಾತನ ಪರಿಚಯವಾಗಿ ಆತ್ಮೀಯತೆ ಬೆಳೆಸಿಕೊಂಡಿದ್ದನು. ಹೀಗಾಗಿ ಕನ್ನಯ್ಯನನ್ನು ಮಣಿ ಅವರು ಮಗನೆಂದು ನಂಬಿದ್ದ ಮಣಿ ಬರೊಬ್ಬರಿ 2.6 ಕೋಟಿ ಮೌಲ್ಯದ ಆಸ್ತಿ ಖರೀದಿಸಿ ಅವನ ಹೆಸರಿಗೆ ಮಾಡಿಸಿ ಮೋಸ ಹೋಗಿದ್ದಾರೆ.
ವೈದ್ಯರಾಗಿರುವ ಇಬ್ಬರು ಹೆಣ್ಣುಮಕ್ಕಳೊಂದಿಗೆ ಅಮೆರಿಕಾದಲ್ಲಿ ನೆಲೆಸಿದ್ದ ಮಣಿ ತಿರಮಲೈ (79) ಅವರಿಗೆ ವಯಸ್ಸಾದ ಕಾಲದಲ್ಲಿ ಭಾರತದಲ್ಲಿ ಬಂದು ನೆಲೆಸಲು ತೀರ್ಮಾನಿಸಿದ್ದಾರೆ. ಈ ಹಿನ್ನಲೆ ಬೆಂಗಳೂರಿಗೆ ಬಂದ ಅವರಿಗೆ ಸರ್ವಿಸ್ ಅಪಾರ್ಟ್ಮೆಂಟ್ ನಡೆಸುತಿದ್ದ ಬಿಹಾರ ಮೂಲದ ಕನ್ನಯ್ಯ ಪರಿಚಯವಾಗುತ್ತದೆ. ಒಂಟಿಯಾಗಿದ್ದ ಮಣಿ ಅವರೊಂದಿಗೆ ಕನ್ನಯ್ಯ ಆತ್ಮೀಯತೆ ಬೆಳೆಸಿದ್ದನು. ಇದರಿಂದಾಗಿ ಮಣಿ ಅವರು ಕನ್ನಯ್ಯನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೆ ಆತನ ಮೇಲಿನ ನಂಬಿಕೆ ಇಟ್ಟು ಬಿಟಿಎಂ ಲೇಔಟ್ನಲ್ಲಿ ಬರೋಬ್ಬರಿಗೆ 2.6 ಕೋಟಿ ರೂಪಾಯಿಯ 4ನೇ ಹಂತದ ಕಟ್ಟಡ ಖರೀದಿ ಮಾಡುತ್ತಾರೆ. ಈ ನಡುವೆ ಮಣಿ ಅವರಿಗೆ ಕಾರಣಾಂತರಗಳಿಂದಾಗಿ ಮತ್ತೆ ಅಮೆರಿಕಾಕ್ಕೆ ಹೋಗುವ ಪ್ರಸಂಗ ಬಂದುಬಿಡುತ್ತದೆ.
ಮಣಿ ಅವರು ಅಮೆರಿಕಾಕ್ಕೆ ಹೊರಟಿರುವ ವೇಳೆ ಖರೀದಿ ಮಾಡಿದ ಆಸ್ತಿಯನ್ನು ಕನ್ನಯ್ಯ ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಅಮೇರಿಕಾದಿಂದ ವಾಪಾಸ್ ಬಂದಾಗ ವಾಪಸ್ ಕೊಡುವುದಾಗಿ ನಂಬಿಸಿ ತನ್ನ ಹೆಸರಿಗೆ ಆಸ್ತಿಯನ್ನು ಬರೆಸಿಕೊಂಡಿದ್ದಾನೆ. ಮಗನಂತೆ ಕಂಡಿದ್ದ ವೃದ್ಧೆ ಆತನ ಮಾತು ನಂಬಿ ಕೋಟಿ ಕೋಟಿ ಹಣ, ಆಸ್ತಿ ಆತನಿಗೆ ವರ್ಗಾ ಮಾಡಿ ಅಮೇರಿಕಾ ತೆರಳಿದ್ದಾರೆ. ಒಂದು ತಿಂಗಳ ಬಳಿಕ ಭಾರತಕ್ಕೆ ವಾಪಾಸ್ ಆದಾಗ ಕನ್ನಯ್ಯ ವರಸೆ ಬದಲಾಯಿಸಿದ್ದು, ಆಸ್ತಿ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ,
ನಂಬಿ ಮೋಸ ಹೋದ ಹಿನ್ನೆಲೆ ಮಣಿ ಅವರು ಕೂಡಲೇ ಹುಳಿಮಾವು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕನ್ನಯ್ಯನಿಗೆ ನೋಟಿಸ್ ಜಾರಿ ಮಾಡಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಅದರಂತೆ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬ ಅವರು ಆಸ್ತಿಯನ್ನು ಕನ್ನಯ್ಯನ ಹೆಸರಿನಿಂದ ಮಣಿ ಹೆಸರಿಗೆ ಮಾಡಿಸಿಕೊಟ್ಟಿದ್ದಾರೆ. ಇದಾದ ನಂತರ ಪೊಲೀಸರು ಮುಂದೆ ಕಣ್ಣೀರಿಟ್ಟ ವೃದ್ಧೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:28 am, Sat, 6 August 22