ಖಾಲಿ ಗಾಡಾ ಸ್ಪರ್ಧೆ; ಜೋಡಿ ಎತ್ತುಗಳ ಓಟಕ್ಕೆ ಮನಸೋತ ಹಾವೇರಿ ಗ್ರಾಮಸ್ಥರು

|

Updated on: Apr 03, 2021 | 8:57 AM

ಬೆಳಿಗ್ಗೆಯಿಂದ ಓಡಿದ ಜೋಡಿ ಎತ್ತುಗಳಲ್ಲಿ ಒಂದು ನಿಮಿಷದಲ್ಲಿ ಕೆಲವು ಜೋಡಿಗಳು 1900 ಫೀಟ್​ವರೆಗೆ ಓಡಿದರೆ, ಕೆಲವು ಜೋಡಿಗಳು 1500, 1600ಫೀಟ್​ಗಳವರೆಗೆ ಓಡಿ ನೋಡುಗರ ಗಮನ ಸೆಳೆದವು. ಕೆಲವು ಜೋಡಿ ಎತ್ತುಗಳ ಅಭಿಮಾನಿಗಳು ಎತ್ತುಗಳು ಅಖಾಡದಲ್ಲಿ ಮಿಂಚಿನ ಓಟ ಓಡುತ್ತಿದ್ದಂತೆ ಅವುಗಳ ಜೊತೆ ಜೊತೆಗೆ ಓಡಿ ಹುರುಪು ತುಂಬಿದರು.

ಖಾಲಿ ಗಾಡಾ ಸ್ಪರ್ಧೆ; ಜೋಡಿ ಎತ್ತುಗಳ ಓಟಕ್ಕೆ ಮನಸೋತ ಹಾವೇರಿ ಗ್ರಾಮಸ್ಥರು
ಖಾಲಿ ಗಾಡಾ ಓಟ ಸ್ಪರ್ಧೆ
Follow us on

ಹಾವೇರಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗ ಹಾಗೂ ಬೀರೇಶ್ವರ ಯುವಕ ಮಂಡಳಿಯವರು ಜಂಟಿಯಾಗಿ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಐವತ್ತೈದು ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿವರೆಗೆ 20 ಬಗೆಯ ಬಹುಮಾನಗಳನ್ನ ಇಡಲಾಗಿತ್ತು. ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ, ಸ್ಪರ್ಧೆಯಲ್ಲಿ ಒಂದು ನಿಮಿಷದಲ್ಲಿ ಯಾವ ಜೋಡಿ ಎತ್ತುಗಳು ಹೆಚ್ಚಿನ ದೂರ ಓಡುತ್ತವೆಯೋ ಅವುಗಳನ್ನು ವಿಜಯಿ ಎತ್ತುಗಳು ಎಂದು ಘೋಷಿಸಿ ಬಹುಮಾನ ನೀಡಲಾಯಿತು. ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೂರಕ್ಕೂ ಅಧಿಕ ಜೋಡಿ ಎತ್ತುಗಳು ಖಾಲಿ ಗಾಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಕೃಷಿ ಕೆಲಸದ ಜೊತೆಗೆ ಬಂಡಿ ಓಟಕ್ಕೆ ಅಂತಲೇ ಎತ್ತುಗಳ ಮಾಲೀಕರು ಎತ್ತುಗಳನ್ನ ಕಟ್ಟುಮಸ್ತಾಗಿ ಬೆಳೆಸಿರುತ್ತಾರೆ. ಹುರುಳಿ ಕಾಳು, ಜೋಳದ ನುಚ್ಚು, ಹಿಂಡಿ ಸೇರಿದಂತೆ ವಿವಿಧ ರೀತಿಯ ಪೌಷ್ಠಿಕಾಂಶಭರಿತ ಪದಾರ್ಥಗಳನ್ನ ತಿನ್ನಿಸಿ ಮಾಲೀಕರು ಎತ್ತುಗಳನ್ನ ಭರ್ಜರಿಯಾಗಿ ರೆಡಿ ಮಾಡಿ ಅಖಾಡಕ್ಕೆ ತಂದಿರುತ್ತಾರೆ. ಅಖಾಡಕ್ಕೆ ಬಂದ ಜೋಡಿ ಎತ್ತುಗಳ ಕೊರಳಿಗೆ ಸಂಘಟಕರು ಖಾಲಿ ಗಾಡಾ ಕಟ್ಟಿ ಬಿಡುತ್ತಾರೆ. ಒಂದು ನಿಮಿಷದಲ್ಲಿ ಯಾವ ಜೋಡಿ ಎತ್ತುಗಳು ಹೆಚ್ಚಿನ ದೂರ ಓಡುತ್ತವೆಯೋ ಆ ಜೋಡಿ ಎತ್ತುಗಳನ್ನ ವಿಜಯಿ ಎತ್ತುಗಳು ಎಂದು ಘೋಷಿಸಲಾಗುದೆ.

ಬೆಳಿಗ್ಗೆಯಿಂದ ಓಡಿದ ಜೋಡಿ ಎತ್ತುಗಳಲ್ಲಿ ಒಂದು ನಿಮಿಷದಲ್ಲಿ ಕೆಲವು ಜೋಡಿಗಳು 1900 ಅಡಿವರೆಗೆ ಓಡಿದರೆ, ಕೆಲವು ಜೋಡಿಗಳು 1500, 1600 ಅಡಿ​ಗಳವರೆಗೆ ಓಡಿ ನೋಡುಗರ ಗಮನ ಸೆಳೆದವು. ಕೆಲವು ಜೋಡಿ ಎತ್ತುಗಳ ಅಭಿಮಾನಿಗಳು ಎತ್ತುಗಳು ಅಖಾಡದಲ್ಲಿ ಮಿಂಚಿನ ಓಟ ಓಡುತ್ತಿದ್ದಂತೆ ಅವುಗಳ ಜೊತೆ ಜೊತೆಗೆ ಓಡಿ ಹುರುಪು ತುಂಬಿದರು. ಇನ್ನು ಗಾಡಾ ಓಡೋ ಅಖಾಡದ ಅಕ್ಕಪಕ್ಕದಲ್ಲಿ ನಿಂತಿರುವ ರೈತರು ಹಾಗೂ ಎತ್ತುಗಳ ಅಭಿಮಾನಿಗಳು ಕೇಕೆ, ಸಿಳ್ಳೆ, ಚಪ್ಪಾಳೆಗಳ ಮೂಲಕ ಎತ್ತುಗಳಿಗೆ ಶರವೇಗದ ಓಟ ಓಡಲು ಹುಮ್ಮಸ್ಸು ತುಂಬಿದರು ಎತ್ತುಗಳ ಮಾಲೀಕರಂತೂ ತಮ್ಮ ತಮ್ಮ ಎತ್ತುಗಳು ಭರ್ಜರಿಯಾಗಿ ಓಡುವುದನ್ನು ನೋಡಿ ಸಂತೋಷಪಟ್ಟರು.

ಖಾಲಿ ಗಾಡಾ ಓಟದ ದೃಶ್ಯ

ದೇವಗಿರಿ ಗ್ರಾಮದಲ್ಲಿ ನಡೆದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ನೋಡುಗರಿಗೆ ಖುಷಿ ನೀಡಿತು. ಒಂದೊಂದು ಜೋಡಿ ಎತ್ತುಗಳು ಒಂದೊಂದು ತೆರನಾದ ಪ್ರದರ್ಶನವನ್ನು ನೀಡಿದ್ದು, ಹಳ್ಳಿ ಸೊಬಗಿನ ಈ ಸ್ಪರ್ಧೆ ಜನರಲ್ಲಿ ಹುರುಪು ತುಂಬಿತು.

(ವರದಿ: ಪ್ರಭುಗೌಡ.ಎನ್.ಪಾಟೀಲ- 9980914107)

ಇದನ್ನೂ ಓದಿ: ಯೂರಿಯಾ ಮಿಶ್ರಿತ ನೀರು ಕುಡಿದು 4 ಎತ್ತು, ಒಂದು ಜಿಂಕೆ ಸಾವು; ಕಿಡಿಗೇಡಿಗಳ ಕೃತ್ಯಕ್ಕೆ ಮೂಕಪ್ರಾಣಿಗಳು ಬಲಿ

(empty bull gada Competition held in haveri )

Published On - 8:33 am, Sat, 3 April 21