ಗದಗ: ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಖೈದಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ. ಆತ್ಮಹತ್ಯೆ ಮಾಡಿಕೊಳ್ಳುವಂಥವನಲ್ಲ ನನ್ನ ಗಂಡ ಎಂದು ಪತ್ನಿ ಗೋಳಾಟ. ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ (Gadag) ನಗರದ ಜಿಮ್ಸ್ ಆಸ್ಪತ್ರೆಯಲ್ಲಿ. ನಿನ್ನೆ(ಏ.17) ಬೆಳಗ್ಗೆ ಗದಗ ಸಬ್ ಜೈಲ್ನಲ್ಲಿ ಖೈದಿಗಳು, ವಿಚಾರಣಾಧೀನ ಖೈದಿಗಳು, ಜೈಲು ಅಧಿಕಾರಿಗಳು ಬೆಚ್ಚಿಬಿದ್ದಿದ್ರು. ಹೌದು ಶೌಚಾಲಯದಲ್ಲಿ ಓರ್ವ ವಿಚಾರಣಾಧೀನ ಖೈದಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಕೊಲೆ ಆರೋಪದ ಮೇಲೆ ಗದಗ ಸಬ್ ಜೈಲು ಸೇರಿದ್ದ ಜಿಲ್ಲೆಯ ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ಬಸಪ್ಪ ಚಂದ್ರ ಎಂಬಾಂತ ಮುಂಜಾನೆ ಬ್ಲೇಡ್ನಿಂದ ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
ಜೈಲಿನ ಬಾತ್ ರೂಂನಲ್ಲಿ ಬಸಪ್ಪ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಗದಗ ಜಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು. ಸಾಕಷ್ಟು ರಕ್ತಸ್ರಾವವಾಗಿರುವ ಕಾರಣ ಆರೋಪಿ ಬಸಪ್ಪನ ಸ್ಥಿತಿ ಗಂಭೀರವಾಗಿದೆ. ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತೆ ಎಂದಿದ್ದಾರೆ. ಕೊಲೆ ಮಾಡಿದಕ್ಕೆ ಪಶ್ಚಾತಾಪವಾಗಿಯೋ ಅಥವಾ ಮತ್ತೆ ಯಾವ ಕಾರಣವೋ ಗೋತ್ತಿಲ್ಲ ವಿಚಾರಣಾಧೀನ ಖೈದಿ ಬಸಪ್ಪ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇದೀಗ ಬಸಪ್ಪ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.
ಇದನ್ನೂ ಓದಿ:ಮನೆಯಲ್ಲೆ ಮಹಿಳೆ ಅನುಮಾನಸ್ಪದ ಸಾವು; ನ್ಯಾಯಕ್ಕಾಗಿ ಅತ್ತೆ ಮಗನಿಂದ ಆತ್ಮಹತ್ಯೆ ಹೈಡ್ರಾಮಾ
ಅನೈತಿಕ ಸಂಬಂಧ ಹಿನ್ನಲೆ 2022ರಲ್ಲಿ ಮಹಿಳೆಯೊಬ್ಬಳ ಕೊಲೆ ಮಾಡಿ ಜೈಲು ಸೇರಿದ್ದ ಬಸಪ್ಪ
2022ರ ಡಿಸೆಂಬರ್ 18ರಂದು ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ಜಮೀನೊಂದರಲ್ಲಿ ಅನೈತಿಕ ಸಂಬಂಧ ಹಿನ್ನಲೆ ಮಹಿಳೆಯೊಬ್ಬಳ ಭೀಕರ ಕೊಲೆ ಮಾಡಿ ಬಸಪ್ಪ ಜೈಲು ಪಾಲಾಗಿದ್ದ. ನಾಲ್ಕು ದಿನಗಳ ಹಿಂದೆ ಪತ್ನಿ ಜೊತೆ ಜೈಲಿನಿಂದ ಆರೋಪಿ ಬಸಪ್ಪ ಮಾತನಾಡಿದ್ದಾನೆ. ನನಗೆ ಬಿಸಿ ಬಿಸಿ ರೊಟ್ಟಿ ತಿನ್ನುವಂತಾಗಿದೆ. ನೀನು ಬರುವಾಗ ರೊಟ್ಟಿ ತಗೊಂಡು ಬಾ ಅಂತ ಹೇಳಿದ್ದಾನೆ. ಹೀಗಾಗಿ ಪತ್ನಿ ಪತಿಗಾಗಿ ಬಿಸಿ ಬಿಸಿ ರೊಟ್ಟಿ ಮಾಡಿಕೊಂಡು ಗದಗ ಸಬ್ ಜೈಲ್ ಗೆ ಹೋಗಲು ಸಜ್ಜಾಗಿದ್ದಳು. ಅಷ್ಟರಲ್ಲೇ ಸಬ್ ಜೈಲ್ ಅಧಿಕಾರಿಗಳು ಪತ್ನಿಗೆ ಫೋನ್ ಮಾಡಿ, ನಿನ್ನ ಗಂಡ ಬ್ಲೇಡ್ ನಿಂದ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು, ಸುದ್ದಿ ಕೇಳಿದ ಪತ್ನಿಗೆ ಬರಸಿಡಿಲು ಬಂಡಿದಂತಾಗಿದೆ. ಕೂಡಲೇ ಓಡೋಡಿ ಗದಗ ಜಿಮ್ಸ್ ಆಸ್ಪತ್ರೆಗೆ ಬಂದಿದ್ದಾಳೆ. ಗಂಡನ ಸ್ಥಿತಿ ನೋಡಿ, ನನ್ನ ಗಂಡ ಈ ರೀತಿ ಮಾಡಿಕೊಳ್ಳುವಂಥ ವ್ಯಕ್ತಿ ಅಲ್ಲ ಎಂದು ಕಣ್ಣೀರು ಹಾಕುತ್ತಿದ್ದಾಳೆ.
ವಿಚಾರಣಾಧೀನ ಖೈದಿ ಬಸಪ್ಪ ಆತ್ಮಹತ್ಯೆಗೆ ಯತ್ನಿಸಿದ್ದು ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಜೈಲ್ನ ಸೆಲ್ನಲ್ಲಿ ಯಾವುದೇ ವಸ್ತುಗಳು ಇರಲ್ಲ. ಆದ್ರೆ, ಈ ಬಸಪ್ಪನ ಬಳಿ ಬ್ಲೇಡ್ ಎಲ್ಲಿಂದ ಬಂತು ಅನ್ನೋ ಪ್ರಶ್ನೆ ಕಾಡುತ್ತಿದೆ. ನಿನ್ನೆ ಭಾನುವಾರ ಇರೋದ್ರಿಂದ ಎಲ್ಲ ಆರೋಪಿಗಳ ಕ್ಷೌರ ಮಾಡಿಸಲಾಗಿದೆ. ಆಗ ಏನಾದ್ರೂ ಬ್ಲೇಡ್ ಬಚ್ಚಿಟ್ಟಿಕೊಂಡಿದ್ನೋ ಎನ್ನುವ ಹತ್ತಾರು ಪ್ರಶ್ನೆಗಳು ಕಾಡ್ತಾಯಿವೆ. ಅಷ್ಟಕ್ಕೂ ಬಸಪ್ಪ ಆತ್ಮಹತ್ಯೆ ಯತ್ನಕ್ಕೆ ಕಾರಣ ಏನೂ ಅನ್ನೋದು ತನಿಖೆ ಬಳಿಕ ಗೋತ್ತಾಗಲಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:24 am, Tue, 18 April 23