ಸರ್ಕಾರದ ಗ್ಯಾರಂಟಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಪಾನ್ ಶಾಪ್ ಅಂಗಡಿ ಮಾಲೀಕನ ವಿರುದ್ಧ ಕೇಸ್
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೀಯಾಳಿಸಿ ಒಂದು ಸಮುದಾಯದ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಡಿ ಗದಗದಲ್ಲಿರುವ ಪಾನ್ ಶಾಪ್ ಮಾಲೀಕನ ವಿರುದ್ಧ ದೂರು ದಾಖಲಾಗಿದೆ.
ಗದಗ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು (Congress Guarantees) ಹೀಯಾಳಿಸಿದ್ದಲ್ಲದೆ, ಒಂದು ಸಮುದಾಯದ ಜನರ ಮತೀಯ ಭಾವನೆಗಳಿಗೆ ಭಂಗವನ್ನುಂಟುಮಾಡಿ, ಸಮಾಜದಲ್ಲಿ ದ್ವೇಷ ಭಾವನೆಯನ್ನು ಮೂಡಿಸುವ ಬರಹಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ (Facebook) ಪೋಸ್ಟ್ ಮಾಡಿದ ಆರೋಪದ ಮೇಲೆ ಗದಗ (Gadag) ಜಿಲ್ಲೆಯ ಗಜೇಂದ್ರಗಡ ಪಟ್ಟಣದ ವ್ಯಕ್ತಿಯೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ಗಜೇಂದ್ರಗಢ ಪಟ್ಟಣದ ನಿವಾಸಿ, ಪಾನ್ ಶಾಪ್ ಅಂಗಡಿಯ ಮುತ್ತಣ್ಣ ಯಮನಪ್ಪ ಮ್ಯಾಗೇರಿ ಜೂನ್ 11ರಂದು ಮುತ್ತು ಮ್ಯಾಗೇರಿ ಎನ್ನುವ ತನ್ನ ಫೇಸ್‌ಬುಕ್ ಖಾತೆಯಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಕುರಿತು ಪೋಸ್ಟ್ ಮಾಡಿದ್ದರು. “ಷರತ್ತಿನ ಮೇಲೆ ಷರತ್ತು ಹಾಕಿ ಕೊನೆಗೆ ಅವರ ಬಾಂಧವರಿಗಷ್ಟೇ ಯೋಜನೆ ತಲುಪಿಸುವುದು ಗ್ಯಾರಂಟಿಯ ಉದ್ದೇಶ” ಎಂದು ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಷರತ್ತು: ಅಸಮಾಧಾನ ಹೊರಹಾಕಿದ ಸ್ವಪಕ್ಷದ ಶಾಸಕ ಶಾಮನೂರು ಶಿವಶಂಕರಪ್ಪ
ಅಷ್ಟೇ ಅಲ್ಲದೆ, “ಇಂದಿನಿಂದ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ವ್ಯಾನಿಟಿ ಬ್ಯಾಗಿಗೆ ಖಚಿತ ಇದು ಮುಲ್ಲಾ ಖಾನ್ ಆದೇಶ”. “ಸೀತಾಮಾತೆ ಲಂಕಾದಲ್ಲಿ ಇದ್ದ 11 ತಿಂಗಳು, 14 ದಿನವೂ ಸುರಕ್ಷಿತವಾಗಿದ್ದರು. ಯಾಕೆಂದರೆ, ರಾವಣ ವೇದ-ಪುರಾಣಗಳನ್ನು ಓದಿದ್ದನೇ ಹೊರತು ಕುರಾನ್ ಅಲ್ಲ” ಅಂತಾನೂ ಪೋಸ್ಟ್ ಮಾಡಿದ್ದರು.
ರಾಜ್ಯದ ಮುಖ್ಯಂಂತ್ರಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಲ್ಲದೆ, ಒಂದು ಸಮುದಾಯದ ಜನರ ಮತೀಯ ಭಾವನೆಗಳನ್ನು ಕೆರಳಿಸಿ, ಸಮುದಾಯಗಳ ನಡುವೆ ಎತ್ತಿ ಕಟ್ಟುವ ಪೋಸ್ಟ್ ಹಂಚಿಕೊಂಡಿದ್ದಾರೆಂದು ಆರೋಪಿಸಿ ಅರ್ಜುನ್ ಹನುಮಂತಪ್ಪ ರಾಥೋಡ್ ಎಂಬುವರು ದೂರು ನೀಡಿದ್ದರು. ದೂರನ್ನು ಸ್ವೀಕರಿಸಿರುವ ಗಜೇಂದ್ರಗಡ ಪೊಲೀಸರು ಅಪರಾಧ 0087/2023, ಐಪಿಸಿ ಸೆಕ್ಷನ್ 1860ರ ಕಲಂ 295A, 505(1)(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ