ಹಣದ ವಿಚಾರಕ್ಕೆ ಕುಚಿಕು ಗೆಳೆಯನನ್ನೇ ಕೊಂದ ಕಿರಾತಕ: ಕೊಲೆ ಬಳಿಕ ಆತನ ಮನೆಗೇ ತೆರಳಿ ಉಪ್ಪಿಟ್ಟು ಸವಿದಿದ್ದ ಆರೋಪಿ!
ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಹಣಕಾಸಿನ ವಿಚಾರಕ್ಕೆ ಕುಚಿಕು ಗೆಳೆಯನನ್ನೇ ವ್ಯಕ್ತಿಯೋರ್ವ ಕೊಂದಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಮೃತನ ಮನೆಗೇ ತೆರಳಿ ಆರೋಪಿ ಉಪ್ಪಿಟ್ಟು ಸವಿದಿದ್ದು, ಪೊಲೀಸರ ತನಿಖೆ ವೇಳೆ ಹಲವು ವಿಚಾರಗಳು ಬಯಲಾಗಿವೆ.

ಗದಗ, ಅಕ್ಟೋಬರ್ 22: ಹಣಕಾಸಿನ ವಿಚಾರಕ್ಕೆ ವ್ಯಕ್ತಿಯೋರ್ವ ಕುಚಿಕು ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ನಡೆದಿದೆ. ದ್ಯಾಮಪ್ಪ ಗೊಜನೂರು (62) ಕೊಲೆಯಾದ ವ್ಯಕ್ತಿಯಾಗಿದ್ದು, ಶರಣಪ್ಪ ನರಗುಂದ ಎಂಬಾತ ಆರೋಪಿಯಾಗಿದ್ದಾನೆ. ಗೆಳೆಯನನ್ನು ಕೊಂದ ಬಳಿಕ ಆತನ ಮನೆಗೇ ತೆರಳಿ ಶರಣಪ್ಪ ಉಪ್ಪಿಟ್ಟು ಸವಿದಿದ್ದ ಎಂಬ ವಿಚಾರವೂ ತನಿಖೆ ವೇಳೆ ಬಯಲಾಗಿದೆ.
ಅಕ್ಟೋಬರ್ 8ರಂದು ಮನೆಯಿಂದ ತೆರಳಿದ್ದ ದ್ಯಾಮಪ್ಪ ಮರಳಿ ಬಂದಿರಲಿಲ್ಲ. ಹೀಗಾಗಿ ಎರಡು ದಿನಗಳ ಬಳಿಕ ಕುಟುಂಬ ಈ ಬಗ್ಗೆ ಪೊಲೀಸರಿಗೆ ದೂರು ನೀಡಿತ್ತು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿರುವ ಹೊತ್ತಲ್ಲಿಯೇ ಅ.19ರಂದು ಕಾಲುವೆಯಲ್ಲಿ ಶವವಾಗಿ ದ್ಯಾಮಪ್ಪ ಪತ್ತೆಯಾಗಿದ್ದರು. ರೈತರಿಂದ ಬೆಳೆ ಖರೀದಿ ವ್ಯವಹಾರ ಮಾಡುತ್ತಿದ್ದ ದ್ಯಾಮಪ್ಪ, ಶರಣಪ್ಪನ ಹೆಸರಲ್ಲಿ 45 ಕ್ವಿಂಟಾಲ್ ಕಡಲೆಯನ್ನು ಇಟ್ಟಿದ್ದರು. ಆದರೆ ಶರಣಪ್ಪ, ದ್ಯಾಮಪ್ಪನಿಗೆ ಗೊತ್ತಾಗದಂತೆ ಅವನ್ನು ಮಾರಿದ್ದ ಮತ್ತು ಆ ಹಣವನ್ನು ಸ್ವಂತ ಖರ್ಚಿಗೆ ಬಳಸಿಕೊಂಡಿದ್ದ. ಕಡಲೆ ಬಗ್ಗೆ ದ್ಯಾಮಪ್ಪ ಕೇಳಿದರೆ ತನ್ನ ಕಳ್ಳಾಟ ಗೊತ್ತಾಗುತ್ತೆ. ಹೀಗಾಗಿ ಆತನನ್ನೇ ಕೊಂದು ಬಿಟ್ಟರೆ ಯಾವುದೇ ವಿಷಯ ಹೊರಗೆ ಬರಲ್ಲ ಎಂದು ಸ್ನೇಹಿತನ ಕತೆಯನ್ನೇ ಆರೋಪಿ ಮುಗಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಗದಗನಲ್ಲಿ ಅಂತಾರಾಜ್ಯ ಗಾಂಜಾ ಜಾಲ ಪತ್ತೆ: ಸೊಲ್ಲಾಪುರದಿಂದ ಮಾಲು ಸಾಗಿಸುತ್ತಿದ್ದ ಇಬ್ರು ಸೇರಿ ನಾಲ್ವರ ಬಂಧನ
ಕೊಲೆ ಪ್ರಕರಣ ಬಯಲಾಗಿದ್ದೇಗೆ?
ದ್ಯಾಮಪ್ಪ ನಾಪತ್ತೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗಿಳಿದಾಗ ಆತ ಕೊನೆಯದಾಗಿ ಶರಣಪ್ಪನ ಜೊತೆ ಬೈಕ್ನಲ್ಲಿ ತೆರಳಿದ್ದ ಎಂಬ ಮಾಹಿತಿ ಸಿಕ್ಕಿತ್ತು. ಈ ಆಧಾರದಲ್ಲಿ ಆತನ ಮೇಲೆ ಅನುಮಾನಗೊಂಡು ಪೊಲೀಸರು ಬಾಯ್ಬಿಡಿಸಿದಾಗ ಕೊಲೆ ವಿಚಾರ ಬಯಲಾಗಿದೆ. ಹೊಲಕ್ಕೆ ಹೋಗಿ ಬರೋಣ ಎಂದು ದ್ಯಾಮಪ್ಪನ ಕರೆದೊಯ್ದಿದ್ದ ಆರೋಪಿ, ಕೊಡಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ಕೆನಾಲ್ ಪೈಪ್ನಲ್ಲಿ ಮೃತದೇಹವನ್ನು ಬಚ್ಚಿಟ್ಟಿದ್ದ ಎಂಬ ಸಂಗತಿ ಗೊತ್ತಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:37 am, Thu, 22 October 26
