ಗದಗ: ತವರಿನಿಂದ ಕೊಟ್ಟ ಬೆಳ್ಳಿ ಉಡುಗೊರೆ ಕಳ್ಳತನ, ಕಣ್ಣೀರು ಹಾಕುತ್ತಿರುವ ತಾಯಿ ಮಗಳು
ವೈದ್ಯೆಯಾಗಿರುವ ಮನೆಮಗಳು ಮದುವೆಯಾಗಿ ಪತಿ ಮನೆಗೆ ಹೋಗುವಾಗ ತವರಿನಿಂದ ಉಡುಗೊರೆಯಾಗಿ ಲಕ್ಷಾಂತರ ಮೌಲ್ಯದ ಬೆಳ್ಳಿ ಕೊಡ, ಬೆಳ್ಳಿ ತಾಟುಗಳು, ತಂಬಿಗೆಗಳು, ಆರತಿ ತಟ್ಟೆ ಇತ್ಯಾದಿಗಳನ್ನು ನೀಡಲಾಗಿತ್ತು. ಆದರೆ ಭಾನುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳ್ಳರು ಬೆಳ್ಳಿ ವಸ್ತುಗಳನ್ನೆಲ್ಲಾ ದೋಚಿದ್ದಾರೆ.
ಗದಗ, ಜುಲೈ 31: ಮನೆ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ತವರಿನಿಂದ ಉಡುಗೊರೆಯಾಗಿ ಕೊಟ್ಟಿದ್ದ ಲಕ್ಷಾಂತರ ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳ್ಳರು ರಾತ್ರೋರಾತ್ರಿ ಕಳ್ಳತನ ಮಾಡಿದ ಘಟನೆ ಗದಗ (Gadag) ನಗರದ ಧೋಬಿ ಘಾಟ್ ಬಳಿ ನಡೆದಿದೆ. 15 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ತವರು ಮನೆಯ ಪ್ರೀತಿಯ ಉಡುಗೊರೆಗಳನ್ನು ಕಳೆದುಕೊಂಡ ವೈದ್ಯೆ ಕಣ್ಣೀರು ಹಾಕುತ್ತಿದ್ದಾರೆ.
ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಚೆನ್ನಮ್ಮ ರೆಡ್ಡಿ ಅವರು ಅಕ್ಕ ಬಂದಿದ್ದಾಳೆ ಎಂದು ಹೇಳಿ ಶನಿವಾರ ಮನೆಗೆ ಬೀಗ ಹಾಕಿ ಪತಿಯೊಂದಿಗೆ ಧಾರವಾಡದಲ್ಲಿರುವ ತಾಯಿ ಮನೆಗೆ ಹೋಗಿದ್ದರು. ಇಂದು (ಜುಲೈ 31) ಧಾರವಾಡದಿಂದ ಮನೆ ವಾಪಸ್ ಬಂದಾಗ ಮನೆಯ ಬೀಗ ಮುರಿದಿರುವುದನ್ನು ನೋಡಿ ದಂಪತಿ ಆಘಾತಗೊಂಡಿದ್ದಾರೆ.
ಇದನ್ನೂ ಓದಿ: ಜುವೆಲ್ಲರಿ ಶಾಪ್ ಮಾಲೀಕನ ಕಳ್ಳಾಟ ಬಯಲು, ಚಿನ್ನ ಕಳ್ಳತನವಾಗಿದೆ ಎಂದು ದೂರು ನೀಡಿದ್ದವನನ್ನೇ ಬಂಧಿಸಿದ ಪೊಲೀಸ್ರು
ಮನೆಯೊಳಗೆ ಹೋಗಿ ನೋಡಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಮನೆಯ ಬೆಡ್ ರೂಂನಲ್ಲಿದ್ದ ಟ್ರಿಜರಿ ಬಾಗಿಲನ್ನು ಕಬ್ಬಿಣದ ರಾಡ್ನಿಂದ ಮುರಿದು ಬೆಳ್ಳಿ ಕೊಡ, ಬೆಳ್ಳಿ ತಾಟುಗಳು, ತಂಬಿಗೆಗಳು, ಆರತಿ ತಟ್ಟೆ ಸೇರಿದಂತೆ 5 ಕೆ.ಜಿ.ಗೂ ಅಧಿಕ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಎರಡು ಬೆಡ್ ರೂಂನಲ್ಲಿದ್ದ ಮೂರು ಕಪಾಟಿನಲ್ಲಿನ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.
ಕಳ್ಳತನ ವಿಚಾರ ತಿಳಿದ ಗದಗ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸಿ.ಸಿ.ಟಿವಿ ಕ್ಯಾಮರಾ ಮನೆ ಹೊರವಲಯದಲ್ಲಿ ಇರುವುದರಿಂದ ಕಳ್ಳರು ಪಕ್ಕಾ ಪ್ಲಾನ್ ಮಾಡಿ ಲೂಟಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಸ್ಥಳಕ್ಕೆ ಬಂದಿದ್ದ ಶ್ವಾನದಳವು ಕಳ್ಳರು ಪರಾರಿಯಾಗಿರುವ ದಿಕ್ಕು ತೋರಿಸಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 pm, Mon, 31 July 23