ಆ ಜಿಲ್ಲೆಯಲ್ಲಿ ಪ್ರತಿ ವರ್ಷ ಬೃಹತ್ ಹೊಂಡಗಳಲ್ಲಿ (ponds) ಬಿದ್ದು ಯುವಕ್ರು, ಮಕ್ಕಳು ಬಲಿಯಾಗ್ತಾಯಿದ್ದಾರೆ. ಆದ್ರೆ, ಸಾವಿನ ಹೊಂಡಗಳ ಬಗ್ಗೆ ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ. ಯುವಕ್ರು ಮಕ್ಕಳು ಬಲಿಯಾಗುತ್ತಿದ್ರೂ (death) ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಈಗ ನಿರಂತರ ಮಳೆಯಿಂದಾಗಿ ತುಂಬಿದ ಬೃಹತ್ ಹೊಂಡಗಳು ಮತ್ತೆ ಬಲಿಗಾಗಿ ಕಾಯುತ್ತಿವೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ ಅಂತ ಜನ್ರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲಿವೆ ನೀರಿನಿಂದ ತುಂಬಿ ಬಲಿಗಾಗಿ ಕಾಯುತ್ತಿರೋ ಬೃಹತ್ ಹೊಂಡಗಳು…! ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಬೃಹತ್ ಹೊಂಡ ಸ್ವಲ್ಪ ಯಾಮಾರಿದ್ರೂ ಬಲಿ ಗ್ಯಾರಂಟಿ…! ಅಕ್ರಮ ಮಣ್ಣು ಗಣಿಗಾರಿಕೆ ಬಗ್ಗೆ ಗಣಿ ಹಾಗೂ ಕಂದಾಯ ಇಲಾಖೆಗೆ ಗೊತ್ತಿದ್ರೂ ಗಪ್ ಚುಪ್, ಜನ್ರು ಕಿಡಿ…!
ಹಳ್ಳಿ ಹಳ್ಳಿಗಳಲ್ಲೂ ಅಪಾರ ನೀರಿನಿಂದ ತುಂಬಿರುವ ಹೊಂಡಗಳೇ. ಪದೇ ಪದೇ ಹೊಂಡಕ್ಕೆ ಬಿದ್ದು ಸಾವನ್ನಪ್ಪುತ್ತಿದ್ರೂ ಕ್ಯಾರೇ ಎನ್ನದ ಅಧಿಕಾರಿಗಳು. ಹೌದು ಈ ಅಪಾಯಕಾರಿ ಹೊಂಡಗಳು ಕಾಣ್ತಾಯಿರೋದು ಗದಗ ಜಿಲ್ಲೆಯಲ್ಲಿ. ಗದಗ (gadag) ತಾಲೂಕಿನ ಹುಲಕೋಟಿ, ಕುರ್ತಕೋಟಿ, ದುಂದೂರ, ಚಿಕ್ಕಹಂದಿಗೋಳ, ನಾಗಾವಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಾನೂನಬಾಹಿರ ಮಣ್ಣು ಗಣಿಗಾರಿಕೆ (soil mining) ಎಗ್ಗಿಲ್ಲದೇ ಸಾಗಿದೆ. ಜಮೀನು ಸಮತಟ್ಟು ಮಾಡುವುದಾಗಿ ಅನುಮತಿ ಪಡೆದ ಮಣ್ಣು ಲೂಟಿಕೋರರು ಸಿಕ್ಕಾಪಟ್ಟೆ ಮಣ್ಣು ಲೂಟಿ ಮಾಡಿ, ಬೃಹತ್ ಹೊಂಡಗಳನ್ನು ನಿರ್ಮಾಣ ಮಾಡ್ತಾಯಿದ್ದಾರೆ.
30-40 ಅಡಿ ಆಳ ಮಣ್ಣು ಅಗೆದು ಮಾರಾಟ ಮಾಡ್ತಾ ಇದ್ದಾರೆ. ಆದ್ರೆ, ಈಗ ಈ ಬೃಹತ್ ಹೊಂಡಗಳಲ್ಲಿ ಅಪಾರ ನೀರು ತುಂಬಿಕೊಂಡಿವೆ. ಹೀಗಾಗಿ ಮತ್ತೆ ಈ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಯಾಕಂದ್ರೆ ಯುವಕ್ರು, ಮಕ್ಕಳು ಈ ಹೊಂಡಗಳ ಕಡೆ ಹೋಗಿ ಸ್ನಾನಕ್ಕೆ, ಜಾನುವಾರಗಳಿಗೆ ನೀರು ಕುಡಿಸಲು ಹೋಗಿ ಏನಾದ್ರೂ ಅನಾಹುತ ಆಗುತ್ತಾ ಅಂತ ಭಯ ಶುರುವಾಗಿದೆ.
ಯಾಕಂದ್ರೆ ತಿಂಗಳ ಹಿಂದೆ ಗಜೇಂದ್ರಗಡ ತಾಲೂಕಿನ ಜಾನುವಾರಗಳಿಗೆ ನೀರು ಕುಡಿಸಲು ಹೋಗಿ ತೋಟಗಂಟಿ ಗ್ರಾಮದಲ್ಲಿ ಇಬ್ಬರು ಬಾಲಕರು ಇಂಥ ಹೊಂಡಕ್ಕೆ ಬಿದ್ದು ಸಾವನಪ್ಪಿದ್ದಾರೆ. ಕಳೆದ ವರ್ಷ ಶಾಗೋಟಿ ಬಳಿಯೂ ಇಬ್ಬರು ಯುವಕ್ರು ಹೊಂಡಕ್ಕೆ ಬಿದ್ದು ಸಾವನಪ್ಪಿದ್ದಾರೆ. ಪ್ರತಿವರ್ಷ ಯುವಕ್ರು, ಮಕ್ಕಳನ್ನು ಬಲಿ ಪಡೆಯುತ್ತಿದ್ರೂ ಜಿಲ್ಲಾಡಳಿತ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ ಅಂತ ಗದಗ ಜನ್ರು ಕಿಡಿಕಾರಿದ್ದಾರೆ.
ಕಳೆದ ವರ್ಷ ಇಬ್ಬರು ಯುವಕ್ರು ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೊಂಡಗಳಿಗೆ ಮುಕ್ತಿ ನೀಡಿದ್ರೆ, ತೋಟಗಂಟಿ ಗ್ರಾಮದಲ್ಲಿ ಬಾಲಕರು ಬಲಿಯಾಗುತ್ತಿರಲಿಲ್ಲ. ಇಷ್ಟಾದ್ರೂ ಇನ್ನೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಇನ್ನೂ ಹುಲಕೋಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಬೃಹತ್ ಹೊಂಡ ನೀರು ತುಂಬಿಕೊಂಡು ಬಲಿಗಾಗಿ ಕಾಯುತ್ತಿದೆ.
ಮಕ್ಕಳನ್ನು ಕಳೆದುಕೊಂಡು ಪೊಷಕರು ಅನಾಥವಾಗಿದ್ದಾರೆ. ಆದ್ರೂ ಗಣಿಗಾರಿಗೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ. ಈ ಭಾಗದ ಜನ್ರು ಕೂಡ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇನ್ಮುಂದೆ ಏನಾದ್ರೂ ಅನಾಹುತ ಸಂಭವಿಸಿದ್ರೆ ಅಧಿಕಾರಿಗಳೇ ಹೊಣೆ ಅಂತ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ, ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಹೊಂಡಗಳು ಮುಚ್ಚಲು ಅಥವಾ ರಕ್ಷಣಾ ಗೋಡೆ ನಿರ್ಮಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ದಂದೆಕೋರರು ನೀಡೋ ಎಂಜಲು ಕಾಸು ಪಡೆದು ಗಣಿ ಅಧಿಕಾರಿಗಳು ಅನುಮತಿ ನೀಡಿ ಕಚೇರಿಯಲ್ಲಿ ಕುಳಿತಿದ್ದಾರೆ. ಇಲ್ಲಿ ದಂಧೆಕೋರರು ಮಣ್ಣು ಲೂಟಿ ಮಾಡಿದ್ದೇ ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರತಿವರ್ಷಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ. ಇನ್ನಾದ್ರೂ ಗಣಿ, ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಬೇಕು ಅಂತ ಜನ್ರು ಒತ್ತಾಯಿಸಿದ್ದಾರೆ…
ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ