ಗದಗ, ಡಿಸೆಂಬರ್ 17: ಈ ದೇಶ ಹಿಂದೂ ರಾಷ್ಟ್ರ ಆಗಬೇಕೆಂಬುದು ಬಿಜೆಪಿಯವರ ಸಿದ್ಧಾಂತ. ನಮ್ಮ ದೇಶ ಹಿಂದೂಗಳ ರಾಷ್ಟ್ರ ಅಲ್ಲ, ಇದು ಬಹುತ್ವದ ದೇಶವಾಗಿದೆ. ಕೇವಲ ಹಿಂದೂ ರಾಷ್ಟ್ರವನ್ನು ಮಾಡಲು ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ‘ಶ್ರೀರಾಮಮಂದಿರ ಉಳಿಯಬೇಕಾದರೆ ಹಿಂದೂ ರಾಷ್ಟ್ರ ಆಗಬೇಕು’ ಎಂಬ ಉಡುಪಿ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಅವರು ಮಾತನಾಡಿದ್ದು, ಪ್ರಶ್ನೆ ಕೇಳುತ್ತಿದ್ದಂತೆ ಕೆಂಡಾಮಂಡಲರಾಗಿದ್ದಾರೆ.
ನಮ್ಮ ದೇಶದಲ್ಲಿ ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಜೈನರು ಸಹ ಇದ್ದಾರೆ. 1950ರಲ್ಲಿ ಜನಸಂಘ ಸ್ಥಾಪಿಸಿ ಹಿಂದೂ ರಾಷ್ಟ್ರ ಮಾಡುತ್ತೇವೆ ಅಂದರು. 1925ರಲ್ಲಿ ಹೆಡ್ಗೇವಾರ್ ಆರ್ಎಸ್ಎಸ್ ಸ್ಥಾಪನೆ ಮಾಡಿದ್ದರು. ಈ ಬಗ್ಗೆ ಬಿಜೆಪಿಯವರನ್ನು ಕೇಳಿ, ಅವರಿಗೆ ಇವೆಲ್ಲವೂ ಗೊತ್ತೇ ಇಲ್ಲ. ಬಿಜೆಪಿಯವರು ಸುಮ್ಮನೆ ಬುರುಡೆ ಬಿಡುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸುವ ವಿಚಾರವಾಗಿ ಮಾತನಾಡಿದ ಅವರು, ತನಿಖೆಯನ್ನು ಎಲ್ಲಿಗೆ ಬೇಕಾದರೂ ವಹಿಸಲು ತಯಾರಾಗಿದ್ದೇನೆ. ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಪ್ರಕರಣದ ತನಿಖೆ ಮಾಡಲು ನಮ್ಮ ಪೊಲೀಸರೇ ಸಮರ್ಥರಿದ್ದಾರೆ. ಸಾಕ್ಷ್ಯ ಸಂಗ್ರಹಿಸಿ ಶಿಕ್ಷೆ ಕೊಡಿಸಲು ಪೊಲೀಸರೇ ತಯಾರಾಗಿದ್ದಾರೆ ಎಂದಿದ್ದಾರೆ.
ಗದಗ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ತಪ್ಪಿತಸ್ಥರು ಯಾರೇ ಇದ್ದರೂ ನಾವು ಕ್ರಮ ಕೈಗೊಳ್ಳುತ್ತೇವೆ. ಭ್ರಷ್ಟಾಚಾರ ಪ್ರಕರಣವಿದ್ದರೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಗೆ ಒಳಪಡಿಸುತ್ತೇವೆ. ಹೊಸ ಬಸ್ ಖರೀದಿಸಿ ಅಗತ್ಯವಿರುವ ಕಡೆ ಬಿಡಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೊಸ ವಂಟಮುರಿ ಘಟನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಸಿದ್ದರಾಮಯ್ಯ
ರಾಜ್ಯದ ಅತಿಥಿ ಉಪನ್ಯಾಸಕರ ಬೇಡಿಕೆಗಳ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಒಂದು ಸೂತ್ರ ಕಂಡು ಹಿಡಿಯುತ್ತಿದ್ದಾರೆ. ಸಭೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ತ್ವರಿತವಾಗಿ ವರದಿ ಸಲ್ಲಿಸಲು ಸೂಚಿಸಿದ್ದೆನೆ ಎಂದರು.
ಚಳಿಗಾಲ ಅಧಿವೇಶನದಲ್ಲಿ ಕಾಂತರಾಜು ವರದಿ ಸ್ವೀಕರಿಸುವ ಹೇಳಿಕೆ ವಿಚಾರವಾಗಿ ಮಾತನಾಡಿ, ಕಾಂತರಾಜು ವರದಿ ಇನ್ನೂ ಸಲ್ಲಿಕೆನೇ ಆಗಿಲ್ಲ, ಸ್ವೀಕಾರ ಮಾಡಲು ಹೇಗೆ ಸಾಧ್ಯ. ಶಾಶ್ವತ ಹಿಂದೂಳಿದ ವರ್ಗದ ಆಯೋಗದವರು ಇನ್ನೂ ವರದಿ ಕೊಟ್ಟಿಲ್ಲ. ವರದಿ ಕೊಡಲು ಬಂದಾಗ ವಿಚಾರ ಮಾಡುತ್ತೇವೆ. ವರದಿಯಲ್ಲಿ ಏನಿದೆ ಅಂತ ಸಿಎಂ ಆದ ನನಗೆ ಗೊತ್ತಿಲ್ಲ. ಕೆಲವರು ಊಹಾಪೋಹಗಳ ಆಧಾರದ ಮೇಲೆ ವಿರೋಧ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ತಂತ್ರಕ್ಕೆ ಬಿಕೆ ಹರಿಪ್ರಸಾದ್ ಪ್ರತಿತಂತ್ರ, ಬೃಹತ್ ಹಿಂದುಳಿದ ಸಮಾವೇಶಕ್ಕೆ ಸಜ್ಜು
ವರದಿ ಬಂದ ನಂತರವೇ ವೈಜ್ಞಾನಿಕನಾ ಅವೈಜ್ಞಾನಿಕನಾ ಅಂತ ಗೊತ್ತಾಗುತ್ತೆ. ವರದಿ ಬಂದ ನಂತರ ನೋಡೋಣ. ಶಕ್ತಿ ಯೋಜನೆಯಡಿ ಎಷ್ಟು ಹಣ ಖರ್ಚು ಆಗುತ್ತೊ ಅಷ್ಟು ಹಣ ಕೊಡುತ್ತೇವೆ. ಸರ್ಕಾರ ಆ ಹಣವನ್ನು ತುಂಬಿಕೊಡುತ್ತೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.