ಆಕೆ ಬಡತನದ (Poor) ಬೆಂಕಿಯಲ್ಲಿ ಅರಳಿದ ಬಾಲೆ. ಸೈಕ್ಲಿಸ್ಟ್ ಅಗಬೇಕು, ಸೈಕ್ಲಿಂಗ್ (Cyclist)ನಲ್ಲಿ ಏನಾದ್ರೂ ಸಾಧನೆ ಮಾಡಬೇಕು ಅನ್ನೋ ಛಲ ಇತ್ತು. ಅದಕ್ಕೆ ತಕ್ಕಂತೆ ದಕ್ಷಿಣ ಭಾರತದ ಘಟಾನುಘಟಿ ಸೈಕ್ಲಿಸ್ಟ್ ಗಳಿಗೆ ಮಣ್ಣುಮುಕ್ಕಿಸಿ ಇದೀಗ ಚಿನ್ನ ಬೇಟೆಯಾಡಿದ್ದಾಳೆ. ಸಾಧನೆ ಗುರಿ, ಛಲ ಇಟ್ಕೊಂಡ ಬಾಲಕಿ ಹರಿಯಾಣ ರಾಜ್ಯದಲ್ಲಿ ನಡೆದ 19ನೇ ರಾಷ್ಟ್ರ ಮಟ್ಟದ ಮೌಂಟೆನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ಏಕೈಕ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾಳೆ. ನನ್ನ ಈ ಸಾಧನೆಗೆ ಟಿವಿ9 ಕಾರಣ ಅಂತನೂ ಆಕೆ ತನ್ನ ಖುಷಿಯನ್ನು ಹಂಚಿಕೊಂಡಿದ್ದಾಳೆ. ಹರಿಯಾಣ ರಾಜ್ಯದಲ್ಲಿ ಕರ್ನಾಟಕದ ಹಳ್ಳಿಗಾಡಿನ ಕನ್ನಡ ಕುವರಿಯ ಭರ್ಜರಿ ಸಾಧನೆ ಇದಾಗಿದೆ. ಹತ್ತಾರು ರಾಜ್ಯಗಳ ಘಟಾನುಘಟಿ ಸೈಕ್ಲಿಂಗ್ ಪಟುಗಳನ್ನು ಮಣ್ಣುಮುಕ್ಕಿಸಿ ಚಿನ್ನದ ಬೇಟೆಯಾಡಿದ ಕಪ್ಪಗುಡ್ಡದ ಹುಡ್ಗಿ ಇವಳು. ಅತ್ತ ಕೊರೆಯುವ ಚಳಿಯಲ್ಲಿ, ಇತ್ತ ಬಿಸಿಲಿನ ನಾಡಿನ ಹುಡುಗಿಯ ಓಟಕ್ಕೆ ದಕ್ಷಿಣ ಭಾರತದ ಸೈಕ್ಲಿಸ್ಟ್ ಗಳು ಕಂಗಾಲಾಗಿದ್ದಾರೆ. ರಾಜ್ಯದ ಏಕೈಕ ಚಿನ್ನದ ಹುಡಿಯಾಗಿ ಹೊರಹೊಮ್ಮಿದ್ದಾಳೆ ಪವಿತ್ರಾ! ಚಿನ್ನದ ಹುಡುಗಿಯ ಸಾಧನೆಗೆ ಟಿವಿ 9 ( TV9 Kannada) ಸಾಥ್ ಕೊಟ್ಟಿದೆ ಎಂಬುದು ಹೆಮ್ಮೆಯ ಸಂಗತಿ. ಕಲ್ಲು, ಮಣ್ಣಿನ ಗುಡ್ಡಗಾಡು ಪ್ರದೇಶದಲ್ಲಿ ಪವಿತ್ರಾ ಮಿಂಚಿನ ಓಟ ಓಡಿದ್ದಾಳೆ. ನನ್ನ ನೀವು ಗೆಲ್ಲಲಾಗದು ಎಂದು ಗುಡ್ಡಗಾಡು ಪ್ರದೇಶದಲ್ಲಿ ಸೈಕಲ್ ತುಳಿದು ಸಾಧನೆಯ ಶಿಖರವೇರಿದ್ದಾಳೆ ಮುದ್ರಣ ಕಾಶಿ (Gadag) ನಾಡಿನ ಹುಡುಗಿ. ಅತ್ಯಾಧುನಿಕ, ಲಕ್ಷಾಂತರ ರೂಪಾಯಿ ಮೌಲ್ಯದ ಸೈಕಲ್ ಗಳನ್ನು ಹೊಂದಿರುವ ಘಟಾನುಘಟಿ ಚಾಂಪಿಯನ್ ಗಳನ್ನು ಹಿಂದಿಕ್ಕಿ ಚಿನ್ನದ ಬೇಟೆಯಾಡಿದ್ದಳೆ ನಮ್ಮ ಚಿನ್ನದ ಹುಡ್ಗಿ.
ಎಸ್… ನಾವು ಹೇಳ್ತಾ ಇರೋದು ಗದಗ ಜಿಲ್ಲೆಯ 17 ವರ್ಷದ ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಎಂಬ ಬಾಲಕಿ ಸಾಧನೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಪವಿತ್ರ ಇವಳು. ಇವತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ಧಾಳೆ. ಬಡತನದ ಬೆಂಕಿಯಲ್ಲಿ ಅರಳಿದ ಪ್ರತಿಭೆ ಇದು. ವರ್ಷದ ಹಿಂದೆ ಸೈಕ್ಲಿಂಗ್ ಸಾಧನೆಗೆ ಬಡತನ ಅಡ್ಡಿಯಾಗಿತ್ತು. ಉತ್ತಮ ಸೈಕಲ್ ಇಲ್ಲದೇ ಒದ್ದಾಡುತ್ತಿದ್ದಳು.
ಇಂತಹ ಬಾಲಕಿಯ ಸಾಧನೆಗೆ ಸೇತುವೆಯಾಗಿದ್ದು ಟಿವಿ 9 ಕನ್ನಡ ವಾಹಿನಿ. ಹೌದು ಟಿವಿ 9 ಬಾಲಕಿಯ ಕನಸು ನನಸು ಮಾಡುವಂತೆ ಮಾಡಿತ್ತು. ವರ್ಷದ ಹಿಂದೆ ಟಿವಿ9ನಲ್ಲಿ ಬಾಲಕಿಯ ಸಾಧನೆ, ಆಕೆಯ ಬಡತನ ಬಗ್ಗೆ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರ ಆಗುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು (Basavaraj Bommai) ತಕ್ಷಣ 8 ಲಕ್ಷ ರೂಪಾಯಿ ಮೌಲ್ಯದ ಸೈಕಲ್ ಒಂದನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಿದ್ದರು.
Also Read:
ಅದೇ ಸೈಕಲ್ ತುಳಿದ ಪವಿತ್ರಾ ಕುರ್ತಕೋಟಿ ಮಾರ್ಚ್ 28 ರಿಂದ 30ರ ವರೆಗೆ ಮೂರು ದಿನಗಳ ಕಾಲ ಹರಿಯಾಣ ರಾಜ್ಯದ ಪಂಚಕುಲದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮೌಂಟೆನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಘಟಾನುಘಟಿಗಳನ್ನು ಹಿಂದಿಕ್ಕಿ ಚಿನ್ನದ ಹುಡುಗಿಯಾಗಿ ಮಿಂಚಿದ್ದಾಳೆ. ಬೇರೆ ಬೇರೆ ರಾಜ್ಯಗಳ ಸೈಕ್ಲಿಸ್ಟ್ ಗಳು ಅತ್ಯಾಧುನಿಕ, ದುಬಾರಿ ವೆಚ್ಚದ ಸೈಕಲ್ ಹೊಂದಿದ್ದರು. ಅಷ್ಟೇ ಅಲ್ಲ ನಮ್ಮ ರಾಜ್ಯಕ್ಕಿಂತಲೂ ಕಠಿಣವಾದ ಟ್ರ್ಯಾಕ್ ನಲ್ಲಿ ನಡೆದ ಪಂದ್ಯದಲ್ಲಿ ಪವಿತ್ರಾ ಕಠಿಣ ಪೈಪೋಟಿ ನೀಡಿ 18 ವರ್ಷದೊಳಗಿನ ಟೈಮ್ ರಿಲೇ ಬಾಲಕಿಯರ ವಿಭಾಗದಲ್ಲಿ ಚಿನ್ನದ ಹುಡುಗಿಯಾಗಿ ಮಿಂಚಿದ್ದಾಳೆ. ನನ್ನ ಈ ಸಾಧನೆಗೆ ಟಿವಿ9, ಸರ್ಕಾರ ಮತ್ತು ಅಧಿಕಾರ ವರ್ಗವೇ ಕಾರಣ ಅಂತ ರಾಷ್ಟ್ರೀಯ ಸೈಕ್ಲಿಸ್ಟ್ ಆಗಿ ಹೊರಹೊಮ್ಮಿರುವ ಪವಿತ್ರಾ ಕುರ್ತಕೋಟಿ ಹೇಳಿದ್ದಾಳೆ.
ಹರಿಯಾಣ ರಾಜ್ಯದಲ್ಲಿ ನಡೆದ ಪಂದ್ಯದಲ್ಲಿ ಬಾಲಕಿಯರ ವಿಭಾಗದಲ್ಲಿ ಚಿನ್ನದ ಬೇಟೆಯಾಡಿದ ರಾಜ್ಯದ ಏಕೈಕ ಹುಡುಗಿಯಾಗಿದ್ದಾಳೆ. ಅಷ್ಟೇ ಅಲ್ಲ 16 ವರ್ಷದೊಳಗಿನ ಟೈಮ್ ರಿಲೇ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ 16 ವರ್ಷದೊಳಗಿನ ಮಾಸ್ಕ್ಡ್ ಸ್ಟಾರ್ಟ್ ನಲ್ಲಿ ಕಂಚಿನ ಪದಕವನ್ನು ಕೊರಳಿಗೆ ಹಾಕಿಕೊಂಡಿದ್ದಾಳೆ. ಬಡತನದ ಬೆಂಕಿಯಲ್ಲಿ ಅರಳಿದ ಬಾಲಕಿ 2015ರಲ್ಲಿ ಜೂನ್ 5 ರಂದು ಗದಗ ಕ್ರೀಡಾಶಾಲೆಗೆ ಆಗಮಿಸಿದ್ದಳು. ಪುಟ್ಟ ದೇಹ ನೋಡಿ ಈಕೆ ಏನ್ ಮಾಡ್ತಾಳೆ ಅಂತ ತರಬೇತಿದಾರರು ಅಂದ್ಕೊಂಡಿದ್ರು.
ಆದ್ರೆ, ಈಗ ಈ ಬಾಲಕಿಯ ಸಾಧನೆಯನ್ನು ಕಂಡು ಇಡೀ ಕರ್ನಾಟಕವೇ ಆಕೆಯತ್ತ ನೋಡುವಂತೆ ಮಾಡಿದೆ. ಸಾಧನೆ ಯಾರ ಸ್ವತ್ತು ಅಲ್ಲ ಅನ್ನೋದನ್ನು ನಮ್ಮೀ ಕನ್ನಡದ ಕುವರಿ ಮತ್ತೊಮ್ಮೆ ಸಾಬೀತು ಮಾಡಿದ್ದಾಳೆ. ಲಕ್ಷ ಲಕ್ಷ ಮೊತ್ತದ ಸೈಕಲ್ ಖರೀದಿಸುವ ಶಕ್ತಿಯಂತೂ ಈಕೆಯ ಕುಟುಂಬಕ್ಕೆ ಇರಲಿಲ್ಲ. ಇನ್ನೇನೂ ಸೈಕ್ಲಿಂಗ್ ಸಹವಾಸವೇ ಬೇಡ ಅಂತ ವಾಪಸ್ ಮನೆಯ ಹಾದಿಯನ್ನು ಹಿಡಿದಿದ್ದಳು.
Also Read:
ಆದ್ರೆ, ಆಗ ಟಿವಿ9 ವರ್ಷದ ಹಿಂದೆ ಈ ಬಾಲಕಿ ಸಂಕಷ್ಟ ಕುರಿತು ವಿಸ್ತೃತ ವರದಿ ಮಾಡಿತ್ತು. ಅದಕ್ಕೆ ತಕ್ಷಣ ಸ್ಪಂದಿಸಿದ ಸರ್ಕಾರ 8 ಲಕ್ಷ ರೂಪಾಯಿ ಮೌಲ್ಯದ ಸೈಕಲ್ ಒಂದನ್ನು ಉಚಿತವಾಗಿ ಕೊಟ್ಟಿತ್ತು. ಆಗ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರುವ ಸಾಧನೆ ಮಾಡ್ತೀನಿ ಅಂತ ಶಪಥ ಮಾಡಿದ್ದಳು. ಈಗ ರಾಜ್ಯದ ಕೀರ್ತಿಯನ್ನು ಇಡೀ ದೇಶದ್ಯಾಂತ ಹರಡುವಂತೆ ಮಾಡಿದ್ದಾಳೆ ಪವಿತ್ರಾ ಕುರ್ತಕೋಟಿ.
ಇನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವುದು ಪವಿತ್ರಾ ಇಟ್ಕೊಂಡಿರುವ ಗುರಿ, ಛಲ! ಆದ್ರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಸೈಕಲ್ ವ್ಹೀಲ್ ಗಳು ಈಕೆಗೆ ಅಗತ್ಯವಾಗಿ ಬೇಕಾಗಿದೆ. ಜಸ್ಟ್ ಎರಡು ವ್ಹೀಲ್ ಗಳ ಖರೀದಿಗೇ ಅಂದಾಜು 2 ಲಕ್ಷ ರೂಪಾಯಿಯ ಅವಶ್ಯಕತೆ ಇದೆ. ಹೀಗಾಗಿ ಕ್ರೀಡಾ ಪ್ರೇಮಿಗಳು, ಅಭಿಮಾನಿಗಳು ಸಹಾಯ ಮಾಡಿದ್ರೆ ಕನ್ನಡದ ಕಂಪು, ದೇಶದ ಕೀರ್ತಿಯನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಹರಡುವುದರಲ್ಲಿ ಎರಡು ಮಾತಿಲ್ಲ.
ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ