ಗದಗ: ಮಹಿಳೆಯರ ಕೂಡಿ ಹಾಕಿ ಥಳಿಸಿದ ಮೀಟರ್ ಬಡ್ಡಿ ದಂಧೆಕೋರರು, ಎಸ್ಪಿ ಕಚೇರಿ ಎದುರು ಸಂತ್ರಸ್ತೆಯರ ಕಣ್ಣೀರು

ಗದಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮುಂದುವರಿದಿದೆ. ಸಾಲದ ಬಡ್ಡಿ ಹಣಕ್ಕಾಗಿ ಇಬ್ಬರು ಮಹಿಳೆಯರನ್ನು ಮನೆಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿರುವ ಆರೋಪ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಕೇಳಿಬಂದಿದೆ. ಘಟನೆ ಬಗ್ಗೆ ಸ್ಥಳೀಯ ಪೊಲೀಸರು ದೂರು ಸ್ವೀಕರಿಸದ ಕಾರಣ ನೊಂದ ಮಹಿಳೆಯರು ಗದಗ ಎಸ್ಪಿ ಕಚೇರಿ ಎದುರು ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಧರಣಿ ನಡೆಸಿದ್ದಾರೆ.

ಗದಗ: ಮಹಿಳೆಯರ ಕೂಡಿ ಹಾಕಿ ಥಳಿಸಿದ ಮೀಟರ್ ಬಡ್ಡಿ ದಂಧೆಕೋರರು, ಎಸ್ಪಿ ಕಚೇರಿ ಎದುರು ಸಂತ್ರಸ್ತೆಯರ ಕಣ್ಣೀರು
ಸಾಂದರ್ಭಿಕ ಚಿತ್ರ ಹಾಗೂ ಆರೋಪಿ ಸಿದ್ದಯ್ಯ ಹೊಸಮನಿ
Image Credit source: tv9
Edited By:

Updated on: Jun 27, 2026 | 9:08 AM

ಮುಖ್ಯಾಂಶಗಳು

  • ಮಹಿಳೆಯರ ಮನೆಯಲ್ಲಿ ಕೂಡಿ ಹಾಕಿ ಥಳಿತ
  • ವಾರಕ್ಕೆ ಸಾವಿರಾರು ರೂಪಾಯಿ ಚಕ್ರಬಡ್ಡಿ ವಸೂಲಿ
  • ದೂರು ಪಡೆಯದ ಪೊಲೀಸರ ವಿರುದ್ಧ ಆಕ್ರೋಶ

ಗದಗ, ಜೂನ್ 27: ಗದಗ (Gadag) ಜಿಲ್ಲೆಯಲ್ಲಿ ಸಾರ್ವಜನಿಕರ ಜೀವ ಹಿಂಡುತ್ತಿರುವ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆ ಇತ್ತೀಚೆಗಷ್ಟೇ ಬಡ್ಡಿ ಕುಳಗಳ ವಿರುದ್ಧ ಸಮರ ಸಾರಿ ಬೃಹತ್ ದಾಳಿಗಳನ್ನು ನಡೆಸಿದ್ದರೂ ಸಹ ದಂಧೆಕೋರರು ಮಾತ್ರ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಇದೀಗ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ವಾರದ ಬಡ್ಡಿ ಹಣ ನೀಡದಿದ್ದಕ್ಕೆ ಇಬ್ಬರು ಅಸಹಾಯಕ ಮಹಿಳೆಯರನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದಂಧೆಕೋರರ ಕೈಯಿಂದ ಹೇಗೋ ತಪ್ಪಿಸಿಕೊಂಡು ಬಂದಿರುವ ಮಹಿಳೆಯರು ಇಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿ ಎದುರು ಕಣ್ಣೀರು ಸುರಿಸುತ್ತಾ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.

ಲಕ್ಷಾಂತರ ರೂಪಾಯಿ ಸಾಲ; ವಾರಕ್ಕೆ ಸಾವಿರಾರು ರೂಪಾಯಿ ಬಡ್ಡಿ

ಶಿರೋಳ ಗ್ರಾಮದ ನಿವಾಸಿಗಳಾದ ಬಸವಣ್ಣೆಮ್ಮ ಅಂಗಡಿ ಮತ್ತು ಮಹಾದೇವಿ ಮಠದ ಹಲ್ಲೆಗೊಳಗಾದ ಮಹಿಳೆಯರಾಗಿದ್ದಾರೆ. ಇವರು ಅದೇ ಗ್ರಾಮದ ಅಕ್ರಮ ಬಡ್ಡಿ ದಂಧೆಕೋರ ಸಿದ್ದಯ್ಯ ಹೊಸಮನಿ ಹಾಗೂ ಆತನ ಮಗ ವಿನೋದ್ ಹೊಸಮನಿ ಎಂಬವರಿಂದ ಸಾಲ ಪಡೆದುಕೊಂಡಿದ್ದರು. ಆರೋಪಿತ ಸಿದ್ದಯ್ಯ ಹೊಸಮನಿ, ಸಂತ್ರಸ್ತೆ ಮಹಾದೇವಿ ಮಠದ ಅವರಿಗೆ 1.50 ಲಕ್ಷ ರೂಪಾಯಿ ಸಾಲ ನೀಡಿ ವಾರಕ್ಕೆ ಬರೊಬ್ಬರಿ 4,500 ರೂಪಾಯಿ ಬಡ್ಡಿ ವಸೂಲಿ ಮಾಡುತ್ತಿದ್ದ. ಇತ್ತ ಮತ್ತೊಬ್ಬ ಮಹಿಳೆ ಬಸವಣ್ಣೆಮ್ಮ ಅವರಿಗೆ 3 ಲಕ್ಷ ರೂಪಾಯಿ ಸಾಲ ನೀಡಿ ಪ್ರತಿ ವಾರಕ್ಕೆ 9,000 ರೂಪಾಯಿಗಳ ಭಾರಿ ಬಡ್ಡಿಯನ್ನು ಕಿತ್ತುಕೊಳ್ಳುತ್ತಿದ್ದ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಈ ಮಹಿಳೆಯರು ನಿಯಮಿತವಾಗಿ ಕಷ್ಟಪಟ್ಟು ಬಡ್ಡಿ ಹಣವನ್ನು ಪಾವತಿಸಿಕೊಂಡು ಬಂದಿದ್ದರು.

ಮೂರು ತಿಂಗಳ ಬಡ್ಡಿ ಬಾಕಿಗೆ ಮೃಗೀಯ ವರ್ತನೆ

ಕಳೆದ ಮೂರು ತಿಂಗಳಿಂದ ಆರ್ಥಿಕ ಸಂಕಷ್ಟದಿಂದಾಗಿ ಮಹಿಳೆಯರಿಗೆ ವಾರದ ಬಡ್ಡಿ ಹಣವನ್ನು ಸರಿಯಾಗಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪೋದ್ರಿಕ್ತರಾದ ಸಿದ್ದಯ್ಯ ಹೊಸಮನಿ ಮತ್ತು ಆತನ ಮಗ ವಿನೋದ್, ಮಹಿಳೆಯರನ್ನು ಬಲವಂತವಾಗಿ ಮನೆಯೊಳಗೆ ಎಳೆದುಕೊಂಡು ಹೋಗಿ, ಹೊರಗಿನಿಂದ ಲಾಕ್ ಮಾಡಿ ಮೃಗಗಳಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ದಂಧೆಕೋರರ ದೌರ್ಜನ್ಯದಿಂದ ಬಚಾವ್‌ ಆಗಿ ಬಂದ ಮಹಿಳೆಯರು ತಕ್ಷಣವೇ ನ್ಯಾಯಕ್ಕಾಗಿ ನರಗುಂದ ಪೊಲೀಸ್ ಠಾಣೆಗೆ ಧಾವಿಸಿದ್ದರು. ಆದರೆ, ಅಲ್ಲಿನ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿ ಉದ್ಧಟತನ ತೋರಿದ್ದಾರೆ ಎಂದು ಸಂತ್ರಸ್ತೆಯರು ಗಂಭೀರ ಆರೋಪ ಮಾಡಿದ್ದಾರೆ. ಸ್ಟೇಷನ್‌ನಲ್ಲಿ ನ್ಯಾಯ ಸಿಗದ ಕಾರಣ ಅಸಹಾಯಕ ಮಹಿಳೆಯರು ಗದಗ ಎಸ್ಪಿ ಕಚೇರಿಗೆ ಬಂದು ಕಣ್ಣೀರಿಡುತ್ತಾ ‘ನಮಗೆ ಬಡ್ಡಿಕೋರರಿಂದ ರಕ್ಷಣೆ ನೀಡಿ, ನ್ಯಾಯ ಕೊಡಿಸಿ’ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಮುಂದುವರಿದ ಬಡ್ಡಿ ದಂಧೆಯ ಸರಣಿ

ಗದಗ ಜಿಲ್ಲೆಯಲ್ಲಿ ಇಂತಹ ಅಕ್ರಮ ಹಣಕಾಸು ಜಾಲಗಳು ಸಾರ್ವಜನಿಕರನ್ನು ಪೀಡಿಸುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಗದಗ ಪೊಲೀಸರು 6 ವಿಶೇಷ ತಂಡಗಳನ್ನು ರಚಿಸಿಕೊಂಡು ಅಕ್ರಮ ಬಡ್ಡಿ ದಂಧೆಕೋರ ಮನೋಹರ್ ಕಟ್ಟಿಮನಿ ಎಂಬಾತನ ಮನೆ ಮತ್ತು ಕಚೇರಿಗಳ ಮೇಲೆ ಭರ್ಜರಿ ದಾಳಿ ನಡೆಸಿದ್ದರು. ಆ ವೇಳೆ 150ಕ್ಕೂ ಹೆಚ್ಚು ಚೆಕ್‌ಗಳು, 65ಕ್ಕೂ ಹೆಚ್ಚು ಖಾಲಿ ಬಾಂಡ್‌ ಪೇಪರ್‌ಗಳು, 422 ಗ್ರಾಂ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ಖಾಕಿ ಸಮರ: ಕಂತೆ ಕಂತೆ ಹಣ, ಚಿನ್ನಾಭರಣ ಕಂಡು ಶಾಕ್​​!

ಆದರೂ ಸಹ ಗ್ರಾಮೀಣ ಭಾಗಗಳಲ್ಲಿ ಇಂತಹ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ನಿಂತಿಲ್ಲ ಎನ್ನುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಎಸ್ಪಿ ಕಚೇರಿ ಮೆಟ್ಟಿಲೇರಿರುವ ಈ ಮಹಿಳೆಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us