ಗದಗ, ಫೆ.29: ಜಿಲ್ಲೆಯ ಪ್ರತಿಷ್ಟಿತ ಶಿವಾನಂದ ಮಠದ ಉಭಯ ಶ್ರೀಗಳ ಪೀಠ ಗಲಾಟೆ (Shivananda Mutt succession controversy) ಮತ್ತೆ ಜೋರಾಗಿದೆ. ಕಳೆದ ವರ್ಷದಿಂದ ಉಭಯ ಶ್ರೀಗಳ ನಡುವಿನ ಗುದ್ದಾಟ ಬಲು ಜೋರಾಗಿದೆ. ವರ್ಷಗಳು ಕಳೆದರೂ ಇನ್ನೂ ವೈಮನಸ್ಸು ದೂರವಾಗಿಲ್ಲ. ಇನ್ನು ಮಾರ್ಚ್ 8, ಶಿವರಾತ್ರಿ ದಿನದಂದು ಶಿವಾನಂದ ಮಠದ ಜಾತ್ರಾಮಹೋತ್ಸವ ನಡೆಯಲಿದೆ. ಕಿರಿಯ ಶ್ರೀಗಳನ್ನು ಹೊರಗಿಟ್ಟು ಹಿರಿಯ ಶ್ರೀಗಳು ಜಾತ್ರಾಮಹೋತ್ಸವ ನಡೆಸಲು ಸಜ್ಜಾಗಿದ್ದಾರೆ. ಇದು ಕಿರಿಯ ಶ್ರೀಗಳು ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳು ಮಾತನಾಡಿ. ‘ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಗಳು ಮಠದ ಪರಂಪರೆಯಂತೆ ನಡೆದುಕೊಳ್ಳುತ್ತಿಲ್ಲ. ಹೀಗಾಗಿ ಉತ್ತರಾಧಿಕಾರಿ ಪೀಠದಿಂದ ತೆಗೆಯಲಾಗಿದೆ ಎಂದು ಹೇಳಿದರು. ಇನ್ನು ಈ ವಿಷಯ ಕೋರ್ಟ್ ಮೆಟ್ಟಿಲೇರಿತ್ತು. ಈ ಕಿರಿಯ ಶ್ರೀಗಳ ಹಕ್ಕುಗಳ ದಕ್ಕೆಯಾಗದಂತೆ ಮಠದ ಆಡಳಿತ ನಡೆಯಬೇಕು ಎಂದು ಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಹೀಗಾಗಿ ಜಾತ್ರಾಮಹೋತ್ಸವವನ್ನ ಕಿರಿಯ ಶ್ರೀಗಳ ಜೊತೆಗೆ ಮಾಡಬೇಕು ಎಂದು ಶ್ರೀಗಳ ಪರ ಭಕ್ತರು, ಹಿರಿಯ ಶ್ರೀಗಳಿಗೆ ಮನವಿ ಮಾಡಿದ್ಧಾರೆ. ಆದ್ರೆ, ಹಿರಿಯ ಶ್ರೀಗಳು ಮಾತ್ರ ಭಕ್ತರ ಮನವಿಗೆ ಬಗ್ಗುತ್ತಿಲ್ಲ. ಇದು ಭಕ್ತರು ಹಾಗೂ ಕಿರಿಯ ಶ್ರೀಗಳನ್ನು ಕೆರಳುವಂತೆ ಮಾಡಿದೆ.
ಇದನ್ನೂ ಓದಿ:ಗದಗ: ಇಂದು ಕೂಡ ಮುಂದುವರೆದ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ, ಮಠಕ್ಕೆ ಪೊಲೀಸರ ಎಂಟ್ರಿ
ಇಂದು ಮಠದ ಆವರಣದಲ್ಲಿ ಕಿರಿಯ ಶ್ರೀಗಳ ಪರ ನೂರಾರು ಭಕ್ತರು ಜಮಾಯಿಸಿದ್ದರು. ಕಿರಿಯ ಶ್ರೀ ಸದಾಶಿವಾನಂದ ಭಾರತಿ ನೇತೃತ್ವದಲ್ಲಿ ಸಭೆ ಮಾಡಿದ್ದಾರೆ. ಕೋರ್ಟ್ ಆದೇಶದಂತೆ ಕಿರಿಯ ಶ್ರೀಗಳ ಜೊತೆಗೂಡಿಯೇ ಜಾತ್ರಾಮಹೋತ್ಸವ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳಬೇಕು. ಒಂದು ವೇಳೆ ಅವರನ್ನು ಬಿಟ್ಟು ಜಾತ್ರಾಮಹೋತ್ಸವ ಮಾಡಲು ನಿರ್ಧಾರ ಮಾಡಿದ್ರೆ, ಭಕ್ತರು ಮುಂದಿನ ನಿರ್ಧಾರ ಮಾಡ್ತಾರೆ ಎಂದು ಕಿರಿಯ ಶ್ರೀಗಳು ಹೇಳಿದ್ದಾರೆ.
ಇನ್ನು ಭಕ್ತರು ಮಾತನಾಡಿ, ‘ಇಂದು ಗದಗ ಹಾಗೂ ಹಳ್ಳಿಯ ಭಕ್ತರು ಸಭೆ ಮಾಡಲಾಗಿದೆ. ಸಭೆಯಲ್ಲಿ ಉಭಯ ಶ್ರೀಗಳು ಸೇರಿ ಜಾತ್ರಾಮಹೋತ್ಸವ ಮಾಡಬೇಕು. ಕಿರಿಯ ಶ್ರೀಗಳನ್ನು ಬಿಟ್ಟು ಜಾತ್ರೆ ಮಾಡಿದ್ರೆ ತಪ್ಪು ಸಂದೇಶ ಹೋಗುತ್ತದೆ. ಕಿರಿಯ ಶ್ರೀಗಳ ಜೊತೆಗೆ ಹಿರಿಯ ಶ್ರೀಗಳೇ ಧ್ವಜಾರೋಹಣ, ರಥೋತ್ಸವ ಹಾಗು ಜಾತ್ರಾಮಹೋತ್ಸವ ಮಾಡಿ ಎಂದು ಮನವಿ ಮಾಡಿದ್ದೇವೆ. ಆದ್ರೆ, ಹಿರಿಯ ಶ್ರೀಗಳು ಮಾತ್ರ ಸರಿಯಾಗಿ ಸ್ಪಂದಿಸಿಲ್ಲ. ಸರಿಯಾಗಿ ವರ್ತನೆ ತೋರಿಲ್ಲ ಎಂದು ಕಿಡಿಕಾರಿದ್ದಾರೆ. ಮಾರ್ಚ್ 2ರ ವರೆಗೆ ಗಡುವು ನೀಡಲಾಗಿದೆ. ಅಂದು ತಿರ್ಮಾನ ಹೇಳಬೇಕು. ಉಭಯ ಶ್ರೀಗಳು ಜೊತೆಗೂಡಿ ಜಾತ್ರೆ ಮಾಡಿದ್ರೆ ಸರಿ. ಇಲ್ಲಾಂದ್ರೆ ಭಕ್ತರೆಲ್ಲರೂ ಸೇರಿ ಮುಂದೆ ಏನೂ ಎಂದು ನಿರ್ಧಾರ ಮಾಡುತ್ತೆವೆ ಎಂದು ಭಕ್ತರು ಹೇಳಿದ್ದಾರೆ.
ಇದನ್ನೂ ಓದಿ:ಗದಗ: ಅಯೋಧ್ಯೆ ರಾಮ ಮಂದಿರಕ್ಕೂ ಗದಗ ಶಿವಾನಂದ ಮಠಕ್ಕೂ ಇದೆ ನಂಟು!
ಶ್ರೀಗಳು ಹಾಗೂ ಭಕ್ತರ ನಡುವೆ ಗಲಾಟೆ ಶುರುವಾಗುತ್ತಿದ್ದಂತೆ ಗದಗ ಶಹರ ಪೊಲೀಸರು ಮಠದ ಆವರಣಕ್ಕೆ ಎಂಟ್ರಿಕೊಟ್ಟಿದ್ದಾರೆ. ಬಳಿಕ ಶ್ರೀಗಳು ಭಕ್ತರನ್ನು ಸಮಾಧಾನ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆ ಬಗ್ಗೆ ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳನ್ನು ಮಾತನಾಡಿ, ‘ಮಾರ್ಚ್ 2 ರಂದು ಮಠದ ಎಲ್ಲಾ ಶಾಖಾ ಮಠಗಳ ಶ್ರೀಗಳ ಸಭೆ ಕೆರೆದು ಮುಂದಿನ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ ಶಿವಾನಂದ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಠದ ಅಂಗಳದಲ್ಲಿ ಖಾಕಿ ಪಡೆ ಬಿಡುಬಿಟ್ಟಿದೆ. ಉಭಯ ಶ್ರೀಗಳ ಗುದ್ದಾಟ ಪೊಲೀಸರಿಗೂ ತಲೆನೋವಾಗಿದೆ. ಕಳೆದ ವರ್ಷವೂ ಗೊಂದಲದಲ್ಲೇ ಜಾತ್ರಾಮಹೋತ್ಸವ ನಡೆದಿದ್ದು, ಈ ವರ್ಷವೂ ಮತ್ತೆ ಗೊಂದಲ ಸೃಷ್ಠಿಯಾಗಿದೆ. ಇನ್ನಾದರೂ ಉಭಯ ಶ್ರೀಗಳು ಪೀಠ ಗುದ್ದಾಟಕ್ಕೆ ಬ್ರೇಕ್ ಹಾಕಿ ಒಂದಾಗಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ