ಗದಗ: ಉಚಿತ ವಿದ್ಯುತ್ ಭರವಸೆ ಈಡೇರಿಸುವಂತೆ ನೇಕಾರರಿಂದ ಒತ್ತಾಯ
ನುಡಿದಂತೆ ನಡೆದು ಉಚಿತ ವಿದ್ಯುತ್ ಭರವಸೆ ಈಡೇರಿಸುವಂತೆ ಸಿದ್ದರಾಮಯ್ಯ ಸರ್ಕಾರವನ್ನು ನೇಕಾರರು ಒತ್ತಾಯಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ನೇಕಾರರ ಬೇಡಿಕೆ ಈಡೇರಿಸುತ್ತಿಲ್ಲ ಅಂತ ಕಿಡಿಕಾರಿದ ನೇಕಾರರು, ಭರವಸೆ ಈಡೇರುವವರೆಗೆ ವಿದ್ಯುತ್ ಬಿಲ್ ಕಟ್ಟದಿರಲು ನಿರ್ಧರಿಸಿದ್ದಾರೆ.
ಗದಗ, ಅ.8: ನಮ್ಮದು ನುಡಿದಂತೆ ನಡೆಯುವ ಸರ್ಕಾರ ಅಂತ ಸಿಎಂ ಸಿದ್ದರಾಮಯ್ಯ (Siddaramaiah) ಹೇಳುತ್ತಲೇ ಇದ್ದಾರೆ. ಆದರೆ, ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ನೇಕಾರರಿಗೆ ಕೊಟ್ಟ ಭರವಸೆ ಈಡೇರಿಸುವ ಬಗ್ಗೆ ಮರತಂತೆ ಕಾಣುತ್ತಿದೆ. ಈ ಬಗ್ಗೆ ನೇಕಾರರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ನೀಡಿದ ಭರವಸೆ ಈಡೇರಿಸುವವರೆಗೂ ವಿದ್ಯುತ್ ಬಿಲ್ ಕಟ್ಟಲ್ಲ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಗದಗ ಬೆಟಗೇರಿ ಅವಳಿ ನಗರದಲ್ಲಿ ಸಾವಿರಾರೂ ನೇಕಾರ ಕುಟುಂಬಗಳು ನೇಕಾರಿಕೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನೇಕಾರರು ಫುಲ್ ಖುಷ್ ಆಗಿದ್ದಾರೆ. ಕಾರಣ 20 ಎಚ್.ಪಿ ವರೆಗೂ ನೇಕಾರರಿಗೆ ಉಚಿತ ವಿದ್ಯುತ್ ಸಿಗುತ್ತೆ ಅಂತ ಖುಷಿಯಾಗಿದ್ದರು. ಆದರೆ ಈಗ ಸರ್ಕಾರ ನೇಕಾರರಿಗೆ ವಿದ್ಯುತ್ ಬಿಲ್ ಶಾಕ್ ನೀಡಿದೆ.
ಎರಡು ಪಟ್ಟು ವಿದ್ಯುತ್ ಬಿಲ್ ನೋಡಿ ನೇಕಾರರು ಅಕ್ಷರಶಃ ಕಂಗಾಲಾಗಿದ್ದಾರೆ. ನೇಕಾರಿಕೆ ನೆಚ್ಚಿಕೊಂಡು ಜೀವನ ಮಾಡುವ ಅದೇಷ್ಟೊ ಕುಟುಂಬಗಳು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 20 ಎಚ್.ಪಿ ವರೆಗೆ ನೇಕಾರರಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಇದುವರೆಗೆ ಭರವಸೆ ಈಡೇರಿಸಿಲ್ಲ.
ಇದನ್ನೂ ಓದಿ: ಇದು ಜಾತಿ ಗಣತಿಯೋ? ಶೈಕ್ಷಣಿಕ ಗಣತಿಯೋ? ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಲಿ: ಮಾಜಿ ಸಿಎಂ ಬೊಮ್ಮಾಯಿ
ಸರ್ಕಾರ ಕೊಟ್ಟ ಮಾತು ಮರೆತು ಬಿಟ್ಟಿದೆಯಾ ಅಂತ ನೇಕಾರರು ಪ್ರಶ್ನೆ ಮಾಡುತ್ತಿದ್ದಾರೆ. ಸರ್ಕಾರ ನುಡಿದಂತೆ ನಡೆಯಬೇಕು. ಹೀಗಾಗಿ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ನೇಕಾರರಿಗೆ ಉಚಿತ್ ವಿದ್ಯುತ್ ಯೋಜನೆ ಜಾರಿ ಮಾಡಬೇಕು. ಇಲ್ಲವೆಂದರೆ ನಾವು ಇವತ್ತಿನಿಂದ ವಿದ್ಯುತ್ ಬಿಲ್ ಪಾವತಿ ಮಾಡುವುದಿಲ್ಲ ಅಂತ ನೇಕಾರ ಮಹಿಳೆ ಗಾಯತ್ರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನೇಕಾರಿಕೆ ಅನ್ನೋದು ನಶಿಸಿಹೋಗುತ್ತಿದೆ. ಈ ನಡುವೆ ಅಷ್ಟೋಇಷ್ಟು ಕುಟುಂಬಗಳು ತಮ್ಮ ವೃತ್ತಿಯನ್ನು ಮುಂದುವರಿಸಿದ್ದಾರೆ. ಈಗಾಗಲೇ ಕಚ್ಚಾವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಸರ್ಕಾರ ಸೌಲಭ್ಯಗಳು ಅಷ್ಟಕ್ಕಷ್ಟೇ ಎಂಬಂತಾಗಿದೆ. ಇದರಿಂದಾಗಿ ನೇಕಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಹೀಗಾಗಿ ಸರ್ಕಾರ ಸಂಕಷ್ಟದಲ್ಲಿ ಇರುವ ನೇಕಾರರ ನೇರವಿಗೆ ಬರಬೇಕು ಅಂತ ಒತ್ತಾಯಿಸಿದ್ದಾರೆ.
ನೇಕಾರರಿಗೆ ನೀಡುತ್ತಿದ್ದ ಐದು ಸಾವಿರ ರೂ.ಗೆ ಕತ್ತರಿ
ಸರ್ಕಾರ ಎಲ್ಲ ಹಂತದಲ್ಲೂ ನೇಕಾರರನ್ನು ಕಡೆಗಣಿಸುತ್ತಿದೆ. ಕಾರ್ಮಿಕರಿಗೆ ಸಿಗುವ ಯೋಜನೆಯಲ್ಲಿ ಎಳ್ಳಷ್ಟೂ ನೇಕಾರರಿಗೆ ಸಿಗುತ್ತಿಲ್ಲ. ನೇಕಾರ ಕುಟುಂಬಗಳಿಗೆ ಈ ಮೊದಲು ಪ್ರತಿ ವರ್ಷ 5 ಸಾವಿರ ನೀಡುತ್ತಿತ್ತು. ಆದರೆ, ಈಗ ಆ 5 ಸಾವಿರ ಕೂಡ ನಿಲ್ಲಿಸಿದೆ. ನೀವೇ ಮಾಡಿದ ಯೋಜನೆ ನೀವೇ ನಿಲ್ಲಿಸುವುದು ಸರಿಯಲ್ಲ. ದಯವಿಟ್ಟು ನೇಕಾರರ ಬಗ್ಗೆ ಕನಿಕರ ಇರಲಿ ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವೃತಿಪರ ನೇಕಾರರು ಅಕ್ಷರಶಃ ಸಂಕಷ್ಟದಲ್ಲಿ ಇದ್ದಾರೆ. ಇವತ್ತಿನಿಂದ ಉಚಿತ ವಿದ್ಯುತ್ ಆಗುವವರೆಗೂ ವಿದ್ಯುತ್ ಬಿಲ್ ಕಟ್ಟುವುದಿಲ್ಲವೆಂದು ಹೆಸ್ಕಾಂಗೆ ಮನವಿ ನೀಡಿದ್ದೇವೆ ಎಂದು ನೇಕಾರ ರಾಜು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ನಮ್ಮದು ನುಡಿದಂತೆ ನಡೆದ ಸರ್ಕಾರ ಅಂತ ಭಾಷಣದಲ್ಲಿ ಹೇಳುತ್ತಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ ನೇಕಾರರಿಗೆ ಉಚಿತ ವಿದ್ಯುತ್ ಸಿಎಂ ಸಿದ್ದಾರಾಮಯ್ಯ ಸರ್ಕಾರ ಮರೆತು ಬಿಟ್ಟಿದೆಯಾ ಅಂತ ನೇಕಾರರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ನೇಕಾರರಿಗೆ ನೀಡಿದ ಭರವಸೆ ಈಡೇರಿಸುವ ಮೂಲಕ ನೇಕಾರಿಕೆ ಉಳಿಸಬೇಕು ಅಂತ ಸಿಎಂ ಅವರಿಗೆ ನೇಕಾರರು ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ