ನರಗುಂದದ ರೈತ ಹುತಾತ್ಮ ದಿನಾಚರಣೆಯಲ್ಲಿ ಹೈಡ್ರಾಮಾ: ಸಿ.ಸಿ. ಪಾಟೀಲ್ ಬೆಂಬಲಿಗರು, ಕನ್ನಡ ಪರ ಸಂಘಟನೆ ಕಾರ್ಯಕರ್ತರು ಹಾಗೂ ರೈತರ ನಡುವೆ ಬಿಗ್ ಫೈಟ್
ಸಚಿವ ಸಿ.ಸಿ. ಪಾಟೀಲ್ ಬೆಂಬಲಿಗರು, ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ರೈತರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಪರಿಸ್ಥಿತಿ ಕೈ ಮೀರಿ ಕೈ ಕೈ ಮಿಲಾಯಿಸುವ ಸ್ಥಿತಿಗೆ ಹೋಗಿತ್ತು.
ಗದಗ: ಜಿಲ್ಲೆಯಲ್ಲಿ ಇಂದು(ಜುಲೈ 21) ರೈತ ಹುತಾತ್ಮ ದಿನಾಚರಣೆ ಆಚರಣೆ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ರೈತರು ಆಗಮಿಸಿ ಹುತಾತ್ಮ ರೈತರಿಗೆ ನಮನ ಸಲ್ಲಿಸಿದ್ರು. ಆದ್ರೆ ಇಂತಹ ಕಾರ್ಯಕ್ರಮದಲ್ಲಿ ದೊಡ್ಡದೊಂದು ಹೈಡ್ರಾಮಾ ನಡೆದಿದೆ. ಸಚಿವ ಸಿ.ಸಿ. ಪಾಟೀಲ್ ಬೆಂಬಲಿಗರು, ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ರೈತರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಪರಿಸ್ಥಿತಿ ಕೈ ಮೀರಿ ಕೈ ಕೈ ಮಿಲಾಯಿಸುವ ಸ್ಥಿತಿಗೆ ಹೋದಾಗ ಪೊಲೀಸರು ಮದ್ಯ ಪ್ರವೇಶ ಮಾಡಿ ಪರಿಸ್ಥಿತಿ ನಿಯಂತ್ರಣ ಮಾಡಿದ್ರು.
ಬಂಡಾಯದ ನಾಡು ನರಗುಂದ ಪಟ್ಟಣದಲ್ಲಿ ರೈತ ಹುತಾತ್ಮ ದಿನಾಚರಣೆ ನಡೆದಿದೆ. ಹುತಾತ್ಮ ರೈತರ ವೀರಗಲ್ಲು ಬಳಿ ಕನ್ನಡಪರ ಸಂಘಟನೆ ಹಾಗೂ ರೈತರ ಧರಣಿ ನಡೆದಿದ್ದು ತಹಶೀಲ್ದಾರ ನಿರ್ಲಕ್ಷ್ಯದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ರು. ತಹಶೀಲ್ದಾರ ಅಮಾನತು ಮಾಡಬೇಕು ಅಂತ ಪಟ್ಟು ಹಿಡಿದಿದ್ರು. ಈ ವೇಳೆ ಸಚಿವ ಸಿ.ಸಿ. ಪಾಟೀಲ್ ಬೆಂಬಲಿಗರು ಎಂಟ್ರಿ ಆಗಿ ಸಿ.ಸಿ. ಪಾಟೀಲ್ ಪರ ಘೋಷಣೆ ಕೂಗಿದ್ದಾರೆ. ಇದು ರೈತರನ್ನು ರೊಚ್ಚಿಗೆಳುವಂತೆ ಮಾಡಿತ್ತು. ಈ ವೇಳೆ ದೊಡ್ಡ ಹೈಡ್ರಾಮಾ ನಡೆದಿದೆ.
ರಾಜಕೀಯ ನಾಯಕರಿಗೆ ಮಾಲಾರ್ಪಣೆ ಅವಕಾಶ ಮಾಡಿಕೊಡಬಾರದು
ನರಗುಂದ ಪಟ್ಟಣಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. 1980ರಲ್ಲಿ ಸರ್ಕಾರಕ್ಕೆ ಕರ ನೀಡುವುದಿಲ್ಲ ಎಂದು ಹೋರಾಟ ಮಾಡುವಾಗ ಗದಗ ಜಿಲ್ಲೆ ನರಗುಂದ ತಾಲೂಕಿನ ಚಿಕ್ಕ ನರಗುಂದ ಗ್ರಾಮದ ವೀರಪ್ಪ ಕಡ್ಲಿಕೊಪ್ಪ ಹುತಾತ್ಮರಾದ್ರು. ಅಂದಿನಿಂದ ಇಂದು 42ನೇ ರೈತ ಹುತಾತ್ಮ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಆದ್ರೆ ಹುತಾತ್ಮ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲು ಬಳಿ ದೊಡ್ಡದೊಂದು ಹೈಡ್ರಾಮಾ ನಡೆಯಿತು. ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್ ಹಾಗೂ ಅವರ ಬೆಂಬಲಿಗರು ಮಾಲಾರ್ಪಣೆ ಮಾಡಲು ಬಂದಿದ್ದರು. ಈ ವೇಳೆ ಸಚಿವ ಸಿಸಿ ಪಾಟೀಲ್ ಬೆಂಬಲಿಗರು ‘ಪಾಟೀಲ್, ಪಾಟೀಲ್, ಸಿಸಿ ಪಾಟೀಲ್’ ಅಂತಾ ಘೋಷಣೆ ಹಾಕಿದ್ರು. ಈ ವೇಳೆ ರೈತರು ಹಾಗೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ರಾಜಕೀಯ ನಾಯಕರಿಗೆ ಮಾಲಾರ್ಪಣೆ ಅವಕಾಶ ಮಾಡಿಕೊಡಬಾರದು ಎಂದು ಪಟ್ಟು ಹಿಡಿದರು. ಈ ವೇಳೆ ಸಚಿವರ ಬೆಂಬಲಿಗರು, ರೈತರು ಹಾಗೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರ ನಡುವೆ ನುಗ್ಗಾಟ ತಳ್ಳಾಟ ನಡೆಯಿತು.
ಒಂದು ಹಂತದಲ್ಲಿ ಎರಡು ಗುಂಪುಗಳ ನಡುವೆ ಕೈಕೈ ಮೀಲಾಯಿಸುವ ಸನ್ನಿವೇಶ ನಿರ್ಮಾಣವಾಗಿತ್ತು. ಕೂಡಲೇ ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಿದ್ರು. ಹೀಗಾಗಿ ಸಚಿವರ ವಿರುದ್ಧ ರೈತರ ಮುಖಂಡರು ಆಕ್ರೋಶ ಹೊರ ಹಾಕಿದ್ರು.
ಪಕ್ಕದ ವೇದಿಯಲ್ಲಿ ಮಹದಾಯಿ ಹೋರಾಟಕ್ಕೆ ರೈತರು ಮತ್ತೆ ರಣಕಹಳೆ ಊದಿದ್ದಾರೆ. ನ್ಯಾಯಾಧೀಕರಣದಲ್ಲಿ ರಾಜ್ಯ ಪಾಲಿನ ನೀರು ಬಳಕೆ ಮಾಡಿಕೊಳ್ಳುವಂತೆ ಆದೇಶ ಮಾಡಿದ್ರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಅಂತ ಹೋರಾಟಗಾರರು ಕಿಡಿಕಾರಿದ್ದಾರೆ. ಮಹದಾಯಿ ಹೋರಾಟಕ್ಕೆ ನರಗುಂದ ಪಟ್ಟಣದಲ್ಲಿ ನಡೆಸುತ್ತಿರೋ ಹೋರಾಟ ಇಂದಿಗೆ ಏಳು ವರ್ಷಗಳಾಗಿದೆ. ಆದ್ರೂ ಇನ್ನೂ ಯೋಜನೆ ಜಾರಿಯಾಗಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ. ಮಹದಾಯಿ ಯೋಜನೆ ತಮ್ಮ ರಾಜಕೀಯ ಲಾಭಕ್ಕೆ ಜನಪ್ರತಿನಿಧಿಗಳು ಬಳಸಿಕೊಳ್ತಾಯಿದ್ದಾರೆ ಅಂತ ಆಕ್ರೋಶ ಕೇಳಿಬಂತು. ಸರ್ಕಾರ ಶೀಘ್ರವೇ ಯೋಜನೆ ಕಾಮಗಾರಿ ಆರಂಭ ಮಾಡದಿದ್ರೇ ಮತ್ತೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಮಹದಾಯ ಯೋಜನೆಗೆ ಕೆಲ ಕಾನೂನು ತೊಡಕುಗಳು ಇವೆ.
ಕಾನೂನು ತೊಡಕು ಹೋಗಲಾಡಿಸಿ ಶೀಘ್ರವೇ ಯೋಜನೆ ಜಾರಿ ಮಾಡುವುದಾಗಿ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ ಇನ್ನು ಗಲಾಟೆ ಗದ್ದಲ ಸೃಷ್ಠಿ ಕೆಲವರ ವಿರುದ್ಧ ಸಚಿವರು ಕಿಡಿಕಾರಿದ್ದಾರೆ. ಇನ್ನೂ ರೈತ ಹುತಾತ್ಮ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲು ತಾಲೂಕಾ ಆಡಳಿತ ನಮಗೆ 11.15 ಗಂಟೆಗೆ ಅವಲಾಶ ನೀಡಲಾಗಿತ್ತು. ನಾನು ಹಾಗೂ ನಮ್ಮ ಬೆಂಬಲಿಗರು ಆಗಮಿಸಿದ್ದೇವು, ಈ ವೇಳೆ ಕೆಲವು ಹಸಿರು ಟಾವೇಲ್ ಹಾಕಿಕೊಂಡು ವಿರೋಧ ಮಾಡಿದ್ರು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್ ಹೇಳ್ತಾರೆ. ಹುತಾತ್ಮ ವೀರಗಲ್ಲು ದುರಸ್ತಿ ಮಾಡಬೇಕು ಎಂದು ಏಕಾಏಕಿ ಹೋರಾಟ ಮಾಡಿದ್ರೆ, ಹೇಗೆ ಮೊದಲೆ ಹೇಳಿದ್ರೆ ನಾವು ದುರಸ್ತಿ ಮಾಡ್ತಾಯಿದ್ದೇವು. ಅದು ಕೂಡಾ ಜಾಗದ ಸಮಸ್ಯೆಯಿದೆ. ಅದನ್ನು ಬಿಟ್ಟು ವಿರೋಧ ಮಾಡೋದು ಎಷ್ಟು ಸರಿ ಅಂತಾ ಸಚಿವರು ಹೇಳ್ತಾರೆ. ಮಹದಾಯಿ ಕಳಸಾ ಬಂಡೂರಿ ಹೋರಾಟ ಆರಂಭ ಮಾಡಿದ್ದೇ ನಾವು, ಯೋಜನೆನ್ನು ತಾರ್ಕಿಕ ಅಂತ್ಯ ಕಾಣಿಸಿ ಯೋಜನೆ ಜಾರಿ ಮಾಡುತ್ತೇವೆ ಅಂತಾ ಹೇಳ್ತಾರೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
Published On - 9:47 pm, Thu, 21 July 22