ಗದಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ದಂಧೆ, ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

| Updated By: ಆಯೇಷಾ ಬಾನು

Updated on: Nov 11, 2021 | 10:56 AM

ರೈತರಿಗಾಗಿ ನಿರ್ಮಾಣ ಮಾಡಿದ ಬ್ಯಾರೇಜ್ ಪಕ್ಕದಲ್ಲೇ ಬೃಹತ್ ಇಟಾಚಿ, ಜೆಸಿಬಿಗಳ ಮೂಲಕ ಮರಳು ಬಗೆಯುತ್ತಿದ್ದಾರೆ. ಇದ್ರಿಂದ ರೈತರ ಬ್ಯಾರೇಜ್ಗೆ ಡ್ಯಾಮೇಜ್ ಆಗ್ತಾಯಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ದಂಧೆ, ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಗದಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ದಂಧೆ, ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
Follow us on

ಗದಗ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರಿಗೆ ಹೇಳೋರು ಕೇಳೋರು ಇಲ್ಲದಂತಾಗಿದೆ. ಅವ್ರು ಆಡಿದ್ದೇ ಆಟವಾಗಿದೆ. ಅನುಮತಿ ಪಡೆದ ಜಾಗದಲ್ಲಿ ಬಿಟ್ಟು ಪಕ್ಕದಲ್ಲೇ ಅಕ್ರಮ ಮರಳು ದಂಧೆ ನಡೆಸಿದ್ದಾರೆ. ಅಕ್ರಮ ಮರಳು ದಂಧೆ ಬಗ್ಗೆ ತಾಲೂಕು ಆಡಳಿತಕ್ಕೆ ಗೊತ್ತಿದ್ರೂ ಗಪ್ ಚುಪ್ ಆಗಿದೆ. ಈ ಅಕ್ರಮ ಮರಳು ದಂಧೆ ರೈತರ ಬ್ಯಾರೇಜ್ ಪಕ್ಕದಲ್ಲೇ ನಡೀತಾಯಿರೋದ್ರಿಂದ ಅಪಾಯ ತಂದೊಡ್ಡಿದೆ. ಹೀಗಾಗಿ ಅಧಿಕಾರಿಗಳ ವಿರುದ್ಧ ರೈತರು ಕಿಡಿಕಾರಿದ್ದಾರೆ.

ರೈತರ ಬ್ಯಾರೇಜ್ ಪಕ್ಕದಲ್ಲಿ ನಿಯಮ ಉಲ್ಲಂಘಿಸಿ ಎಗ್ಗಿಲ್ಲದೇ ಮರಳು ಲೂಟಿ ಮಾಡಿ ಸರ್ಕಾರಕ್ಕೂ ಟೋಪಿ ಹಾಕ್ತಾಯಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳಗೋಡ ಗ್ರಾಮದ ವ್ಯಾಪ್ತಿಯ ಜಮೀನಿನಲ್ಲಿ ರಾಜಶೇಖರ್ ಕಂಪ್ಲಿ ಅನ್ನೋರು ಸರ್ವೇ ನಂಬರ್ 14/6ರ ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆದಿದ್ದಾರೆ. ಆದ್ರೆ, ಅನುಮತಿ ಪಡೆದ ಜಮೀನು ಬಿಟ್ಟು ಪಕ್ಕದ ಜಮೀನಿನಲ್ಲಿ ಅಕ್ರಮವಾಗಿ ಮರಳು ಲೂಟಿ ನಡೆಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ರೈತರಿಗಾಗಿ ನಿರ್ಮಾಣ ಮಾಡಿದ ಬ್ಯಾರೇಜ್ ಪಕ್ಕದಲ್ಲೇ ಬೃಹತ್ ಇಟಾಚಿ, ಜೆಸಿಬಿಗಳ ಮೂಲಕ ಮರಳು ಬಗೆಯುತ್ತಿದ್ದಾರೆ. ಇದ್ರಿಂದ ರೈತರ ಬ್ಯಾರೇಜ್ಗೆ ಡ್ಯಾಮೇಜ್ ಆಗ್ತಾಯಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಜೊತೆಗೆ ಡಿಸೇಲ್ ಇಂಜಿನ್ಗಳು ಬಳಕೆ ಮಾಡೋದ್ರಿಂದ ಇಂಜಿನ್ ಎಲ್ಲ ಡಿಸೇಲ್ ಹಳ್ಳದಲ್ಲಿ ಕೂಡಿ ಕಲುಷಿತವಾಗುತ್ತಿದೆ ಅಂತ ಜನ್ರು ಕಿಡಿಕಾರಿದ್ದಾರೆ. ತಕ್ಷಣ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಅಂತ ಹೋರಾಟಗಾರ ಚಂದ್ರಕಾಂತ ಚವ್ಹಾಣ ಒತ್ತಾಯಿಸಿದ್ದಾರೆ.

ಅಕ್ರಮ ಮರಳು ದಂಧೆ

ಬ್ಯಾರೇಜ್ ನಿಂದ 200 ಮೀಟರ್ ದೂರವೇ ಮರಳು ತೆಗೆಯಬೇಕು ಅನ್ನೋದು ಕಾನೂನು ಇದೆ. ಆದ್ರೆ, ಸರ್ಕಾರದ ಕಾನೂನುಗಳಿಗೆ ಇಲ್ಲಿನ ದಂಧೆಕೋರರು ಗಾಳಿಗೆ ತೂರಿದ್ದಾರೆ. 200 ಮೀಟರ್ ಅಲ್ಲ 20 ಮೀಟರ್ ಕೂಡ ಬ್ಯಾರೇಜ್ ಗೆ ಅಂತವರಿಲ್ಲ. ಅಷ್ಟೇ ಅಲ್ಲ ಗಣಿ ಇಲಾಖೆಗೂ ಟ್ಯಾಕ್ಸ್ ಟೋಪಿ ಹಾಕ್ತಾಯಿದ್ದಾರೆ. ಅನುಮತಿ ಪಡೆದ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ವೇ ಬ್ರಿಡ್ಜ್ ಇರಬೇಕು ಅಂತ ಹಲವಾರು ನಿಯಮವಿದೆ. ಆದ್ರೆ, ಇಲ್ಲಿ ಅದ್ಯಾವೂದು ಇಲ್ಲ. ಹೀಗಾಗಿ 11ಟನ್ ಗೆ ಪಾಸ್ ಪಡೆದು 20-22 ಟನ್ ಮರಳು ತುಂಬುವ ಮೂಲಕ ಸರ್ಕಾರಕ್ಕೂ ಭಾರಿ ಪ್ರಮಾಣದ ಟ್ಯಾಕ್ಸ್ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ರೋಣ ತಹಶೀಲ್ದಾರ್ ಅವರಿಗೆ ಸ್ಥಳೀಯರು ದೂರು ನೀಡಿದ್ರು ತಹಶೀಲ್ದಾರ್ ಸಾಹೇಬ್ರೂ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಅಧಿಕಾರಿಗಳು ಅಕ್ರಮ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಗದಗ ಡಿಸಿ ಸುಂದರೇಶ್ ಬಾಬು ಅವ್ರನ್ನು ಕೇಳಿದ್ರೆ, ಯಾವುದೇ ಅಕ್ರಮ ಅವಕಾಶವಿಲ್ಲ. ಈ ಬಗ್ಗೆ ನಮಗೂ ದೂರು ಬಂದಿವೆ. ಹೀಗಾಗಿ ಗದಗ ಎಸಿ ರಾಯಪ್ಪ ಹುಣಸಗಿ ಹಾಗೂ ಗಣಿ ಇಲಾಖೆ ಅಧಿಕಾರಿ ನಾಗಭೂಷಣ ಅವರಿಗೆ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳಲು ಸೂಚಿಸಲಾಗುತ್ತೆ ಎಂದಿದ್ದಾರೆ.

ಗದಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ಸಾಗಿದೆ. ಪ್ರಭಾವಿಗಳು ಏನ್ ಬೇಕಾದ್ರೂ ಮಾಡಿದ್ರೂ ಅಧಿಕಾರಿಗಳು ಗಪ್ ಚುಪ್ ಯಾಕೇ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ. ಇನ್ನಾದ್ರೂ ಗದಗ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುತ್ತಾ ಅನ್ನೋದು ಕಾದು ನೋಡಬೇಕಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇದನ್ನೂ ಓದಿ: ಭೀಮಾ ನದಿಯಲ್ಲಿ KRIDL ಹೆಸರಿನಲ್ಲಿ ಅಕ್ರಮ ಮರಳು ದಂಧೆ; ಸ್ಥಳಕ್ಕೆ ಯಾರೂ ತೆರಳದಂತೆ ರಸ್ತೆ ಅಗೆದ ದುಷ್ಕರ್ಮಿಗಳು