ಗದಗ, ಅ.11: ಗದಗ ನಗರದ ಭೂಮರೆಡ್ಡಿ ಸರ್ಕಲ್ ಬಳಿ ನಿನ್ನೆ(ಅ.10) ಮಧ್ಯಾಹ್ನ 2.30 ರ ಸುಮಾರಿಗೆ ಎಪಿಎಂಸಿಯಿಂದ ಭೂಮರೆಡ್ಡಿ ಸರ್ಕಲ್ ಮೂಲಕ ಮನೆಗೆ ಹೋಗುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಹಾಗೂ ಬಿಜೆಪಿ ಹಿರಿಯ ಮುಖಂಡ ಕಾಂತಿಲಾಲ್ ಬನ್ಸಾಲಿ(Kantilal Bhansali) ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ, ಹಣ ದೋಚಿ ಪರಾರಿಯಾಗಿದ್ದಾರೆ. ಹೌದು, ಬೈಕ್ಗೆ ಡಿಕ್ಕಿ ಹೊಡೆದು ನೆಲಕ್ಕೆ ಕೆಡವಿದ ದುಷ್ಕರ್ಮಿಗಳು, ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲ, ಮೈಮೆಲಿನ ಶರ್ಟ್ ಹರಿದು 50 ಸಾವಿರ ಹಣ ದೋಚಿದ್ದಾರೆ.
ಸಾರ್ವಜನಿಕರು ಓಡಿ ಬರುತ್ತಿದ್ದಂತೆ ದುಷ್ಕರ್ಮಿಗಳು ‘ನಿಂದು ಬಹಳ ಆಗಿದೆ’ ಎಂದು ಅವಾಜ್ ಹಾಕಿ ಎಸ್ಕೇಪ್ ಆಗಿದ್ದಾರೆ. ಇದೆ ಮಾತು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಎರಡು ದಿನಗಳ ಹಿಂದೆ ಗದಗ ಜಿಲ್ಲಾ ನಾಯಕರ ವಿರುದ್ಧ ಕಾಂತಿಲಾಲ್ ಬನ್ಸಾಲಿ ವಾಗ್ದಾಳಿ ಮಾಡಿದ್ದರು. ‘ಮಕ್ಕಳನ್ನು ಬೆಳೆಸಬೇಡಿ, ಕಾರ್ಯಕರ್ತರನ್ನು ಬೆಳೆಸಿ ಎಂದಿದ್ದರು. ಈ ಹೇಳಿಕೆ ನೀಡಿದ ಎರಡನೇ ದಿನದಲ್ಲಿ ಈ ಅಟ್ಯಾಕ್ ನಡೆದಿದ್ದು, ಬಿಜೆಪಿಯಲ್ಲೇ ಯಾರಾದರೂ ಹೆದರಿಸಲು ಈ ಅಟ್ಯಾಕ್ ಮಾಡಿಸಿದ್ದಾರೆ ಎನ್ನುವ ಗುಸುಗುಸು ನಡೆದಿದೆ.
ಇದನ್ನೂ ಓದಿ:ಮಹಿಳಾ PSI ಮೇಲೆ ಹಲ್ಲೆ; ಕಾನ್ಸಸ್ಟೇಬಲ್ ವಿರುದ್ದ ಗಂಭೀರ ಆರೋಪ
ಹಾಡಹಗಲೇ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಗದಗ-ಬೆಟಗೇರಿ ಅವಳಿ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಹಲ್ಲೆಗೊಳಗಾದ ಕಾಂತಿಲಾಲ್ ಬನ್ಸಾಲಿ, ‘ದುಷ್ಕರ್ಮಿಗಳು ನನ್ನ ಬೈಕ್ಗೆ ಡಿಕ್ಕಿ ಹೊಡೆದರು. ಅಷ್ಟೇ, ಏಕಾಏಕಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿ ನನ್ನ ಬಳಿ ಇದ್ದ 50 ಹಣ ದೋಚಿ, ‘ನಿಂದು ಬಹಳ ಆಗಿದೆ ಎಂದು ಹೆದರಿಸಿ ಪರಾರಿಯಾದರು ಎಂದು ಹೇಳಿದ್ದಾರೆ.
ಹಾಡಹಗಲೇ ಉದ್ಯಮಿಯೂ ಆದ ಬಿಜೆಪಿ ಮುಖಂಡ ಕಾಂತಿಲಾಲ್ ಬನ್ಸಾಲಿ ಮೇಲೆ ಹಲ್ಲೆಯಾಗಿದ್ದು, ಉದ್ಯಮಿಗಳಲ್ಲೂ ಆತಂಕ ಹೆಚ್ಚಿದೆ. ಇದು ಹಣಕ್ಕೆ ಮಾಡಿದ ಹಲ್ಲೆಯೋ, ರಾಜಕೀಯ ದ್ವೇಷದ ಹಲ್ಲೆಯೋ ಎನ್ನುವ ಚರ್ಚೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ನಡೆದಿದೆ. ಅಷ್ಟೇ ಅಲ್ಲ, ಸ್ವಪಕ್ಷದ ರಾಜಕೀಯ ವಿರೋಧಿಗಳು ಮಾಡಿಸಿದ ಹಲ್ಲೆ ಎಂಬ ಗುಮಾನಿಯೂ ಹಬ್ಬಿದೆ. ಇತ್ತೀಚೆಗೆ ಗದಗ ಕ್ಷೇತ್ರದ ಬಿಜೆಪಿ ಬೆಳವಣಿಗೆ ಬಗ್ಗೆ ಬಹಿರಂಗವಾಗಿ ಕಾಂತಿಲಾಲ್ ಮಾತನಾಡಿದ್ದಾರಂತೆ. ಹೀಗಾಗಿ ಯಾರಾದರೂ ಹೆದರಿಸಲು ಹಲ್ಲೆ ಮಾಡಿಸಿದ್ದಾರಾ ಎಂದು ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿದೆ.
ಬಿಜೆಪಿ ಮುಖಂಡನ ಮೇಲಿನ ಹಲ್ಲೆಗೆ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಮಾಜಿ ನಿಗಮ ಮಂಡಳಿ ಅಧ್ಯಕ್ಷರಿಗೆ ರಕ್ಷಣೆ ಇಲ್ಲವೆಂದರೆ, ಸಾಮಾನ್ಯ ಜನರಿಗೆ ರಕ್ಷಣೆ ಎಲ್ಲಿ ಎಂದು ಎಂಎಲ್ಸಿ ಎಸ್ ವಿ ಸಂಕನೂರ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಗದಗನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಿಡಿಕಾರಿದ್ದಾರೆ. ಬಳಿಕ ಕಾಂತಿಲಾಲ್ ಮನೆಗೆ ಎಸ್ ಸಂಕನೂರ ಭೇಟಿ ನೀಡಿ ಬನ್ಸಾಲಿ ಅವರಿಗೆ ಧೈರ್ಯ ತುಂಬಿದ್ದಾರೆ. ಹಾಡಹಗಲೇ ಹಲ್ಲೆಯಿಂದ ಅವಳಿ ನಗರದಲ್ಲಿ ಭಯ ಸೃಷ್ಠಿಯಾಗಿದೆ. ಪೊಲೀಸರು ಏನು ಕೆಲಸ ಮಾಡುತ್ತಿದ್ದಾರೆ. ಹಾಡಹಗಲೇ ಹಲ್ಲೆ ಆಗುತ್ತದೆ ಅಂದರೆ ಯಾರ ಭಯ ಇಲ್ಲವಾ?, ಇದೆಲ್ಲಾ ನೋಡಿದರೆ ಪೊಲೀಸರ ವೈಫಲ್ಯ ಎದ್ದು ಕಾಣುತ್ತದೆ. ಕಳ್ಳರಿಗೆ ಗದಗನಲ್ಲಿ ಭಯ ಇಲ್ಲದಂತ ವಾತಾವರಣ ನಿರ್ಮಾಣವಾಗಿದೆ ಎಂದು ಪೊಲೀಸ್ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ