ಗ್ಯಾರಂಟಿಗಳು ಬೇಡ, ಸಾಲ ಮನ್ನಾ ಮಾಡಿ ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಂದೆ ರೈತ ಮಹಿಳೆಯರ ಅಳಲು

| Updated By: ವಿವೇಕ ಬಿರಾದಾರ

Updated on: Oct 06, 2023 | 12:14 PM

ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ಕೇಂದ್ರ ಅಧ್ಯಯನ ತಂಡ ಬರ ಪರಿಶೀಲನೆ ನಡೆಸಿದ ಬಳಿಕ ರೈತ ಮಹಿಳೆಯರು ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು. "ನಮಗೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ, ಗೃಹ‌ಲಕ್ಷ್ಮೀ ಯೋಜನೆ ಇದ್ಯಾವುದು ಬೇಡ". ಸರ್ಕಾರ ನಮ್ಮ ಸಾಲಮನ್ನಾ ಮಾಡಲಿ, ನಮ್ಮನ್ನು ಬದುಕಿಸಬೇಕು" ಎಂದು ಆಗ್ರಹಿಸಿದರು.

ಗ್ಯಾರಂಟಿಗಳು ಬೇಡ, ಸಾಲ ಮನ್ನಾ ಮಾಡಿ ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಂದೆ ರೈತ ಮಹಿಳೆಯರ ಅಳಲು
ಗದಗ ರೈತ ಮಹಿಳೆಯರು
Follow us on

ಗದಗ ಅ.06: ರಾಜ್ಯದ 195 ತಾಲೂಕುಗಳಲ್ಲಿ ಬರ (Drought) ಆವರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬರ ಅಧ್ಯಯನ (Central Drought Study) ತಂಡ ರಾಜ್ಯಕ್ಕೆ ಆಗಮಿಸಿದ್ದು, ಕೇಂದ್ರ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ ನೇತೃತ್ವದಲ್ಲಿ ಅಧ್ಯಯನ ನಡೆಯುತ್ತಿದೆ. ಅಧಿಕಾರಿಗಳು ಶುಕ್ರವಾರ ಲಕ್ಷ್ಮೇಶ್ವರ (Laxmeshwar) ತಾಲೂಕಿನ ಹುಲಗೇರಿ, ಇಟ್ಟಿಗೇರಿ ಕೆರೆ, ದೊಡ್ಡೂರು, ಸೂರಣಗಿ, ಶಿರಹಟ್ಟಿ ತಾಲೂಕಿನ ಚಿಕ್ಕಸವನೂರು, ಬೆಳ್ಳಟ್ಟಿ, ವಡವಿ, ಛಬ್ಬಿ, ದೇವಿಹಾಳ, ಶೆಟ್ಟಿಕೇರಿ ಮತ್ತು ಗದಗ ತಾಲೂಕಿನ ಮುಳಗುಂದದಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸುತ್ತಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ಕೇಂದ್ರ ಅಧ್ಯಯನ ತಂಡ ಬರ ಪರಿಶೀಲನೆ ನಡೆಸಿದ ಬಳಿಕ ರೈತ ಮಹಿಳೆಯರು ಅಧಿಕಾರಿಗಳ ಎದರು ಗೋಳು ತೋಡಿಕೊಂಡರು. “ನಮಗೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ, ಗೃಹ‌ಲಕ್ಷ್ಮೀ ಯೋಜನೆ ಇದ್ಯಾವುದು ಬೇಡ”. ಸರ್ಕಾರ ನಮ್ಮ ಸಾಲ ಮನ್ನಾ ಮಾಡಿ, ನಮ್ಮನ್ನು ಬದುಕಿಸಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: ಜಮೀನಿಗೆ ಬಂದ ಕೇಂದ್ರ ಬರ ತಂಡದ ಅಧಿಕಾರಿಗಳ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ರೈತ

ಮಳೆ ಇಲ್ಲದೆ ಬೆಳೆ ನಾಶವಾಗಿದ್ದು ಭೀಕರ ಬರಗಾಲ ಆರಂಭವಾಗಿದೆ. ಸಾಲ ಮಾಡಿ ಹೆಸರು, ಹತ್ತಿ, ಗೋವಿನ ಜೋಳ ಬಿತ್ತನೆ ಮಾಡಿದ್ದೇವೆ. ಮಳೆ ಇಲ್ಲದೆ ಬೆಳೆಗಳೆಲ್ಲಾ ಹಾಳಾಗಿದ್ದು ತುಂಬಾ ತೊಂದರೆ ಆಗುತ್ತಿದೆ. ಭೀಕರ ಬರಕ್ಕೆ ನಾವು ಕಂಗಾಲಾಗಿದ್ದೇವೆ. ನಮ್ಮ ಬದುಕು ಚಿಂತಾಜನಕವಾಗಿದೆ. ನಾವು ತೀವ್ರ ಸಂಕಷ್ಟದಲ್ಲಿದ್ದೇವೆ ಎಂದು ಅಳಲು ತೋಡಿಕೊಂಡರು.

ಮಕ್ಕಳು ಮದುವೆ ಬಂದಿದ್ದಾರೆ. ಮದುವೆ ಮಾಡಬೇಕು ಅಂದ್ರೆ ಕನ್ಯಾ ಸಿಗುತ್ತಿಲ್ಲ. ಭೀಕರ ಬರ ಇದೆ. ನಿಮ್ಮ ಹೊಲದಲ್ಲಿ ಏನಿದೆ ಅಂತ ಕೇಳುತ್ತಾರೆ. ಹೀಗಾಗಿ ನಮ್ಮ ಬದುಕು ಸಂಕಷ್ಟದಲ್ಲಿದೆ. ರೈತ ಕುಟುಂಬಗಳಿಗೆ ಎಲ್ಲಿ ಪ್ರಯಾಣ‌ ಮಾಡಲು ಆಗುತ್ತೆ? ಎರಡು ಸಾವಿರ ಯಾವುದಕ್ಕೆ ಸಾಲುತ್ತೆ ? ಚೆನ್ನಾಗಿ ಮಳೆ ಬೆಳೆ ಆದರೆ ಮನಗೆ ಏನೂ ಬೇಡ. ಈ ಯೋಜನೆಗಳ ಬದಲು ರೈತರ ಸಾಲ ಮನ್ನಾ ಮಾಡಬೇಕು. ಕೂಡಲೇ ಬರ ಪರಿಹಾರ ನೀಡಿ ನಮ್ಮನ್ನು ಬದುಕಿಸಬೇಕು. ಇಲ್ಲಾಂದ್ರೆ ನೇಣು ಹಾಕಿಕೊಂಡು‌ ಸಾಯುವುದು ಬಾಕಿ ಇದೆ ಅಂತ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ