
ಗದಗ, (ಜನವರಿ 14): ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ನಿಧಿ (Lakkundi Gold Treasure) ಈಗ ಭಾರಿ ಚರ್ಚೆ ಹುಟ್ಟುಹಾಕಿದ್ದು, ಈ ಚಿನ್ನದ ಹಿನ್ನೆಲೆಯ ರಹಸ್ಯ ಬಯಲಾಗಿದೆ. ಹೌದು…ಜಿಲ್ಲಾಡಳಿತ ವಶಕ್ಕೆ ಪಡೆದ ಚಿನ್ನವನ್ನು ಪರಿಶೀಲನೆ ನಡೆಸಿದಾಗ ಚಿನ್ನ ಪುರಾತನ ಕಾಲದ್ದು, ಕಲ್ಯಾಣ ಚಾಳುಕ್ಯರು, ಹಾಗೂ ವಿಜಯನಗರದ ಸಾಮ್ರಾಜ್ಯದ ಆಡಳಿತದ ವೇಳೆಯ ಚಿನ್ನ ಎನ್ನುವುದು ಬಹಿರಂಗವಾಗಿದೆ. ಇನ್ನು ಈ ಬಗ್ಗೆ ಟಿವಿ9ಗೆ ಗದಗ (Gadag) ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಮಾಹಿತಿ ನೀಡಿದ್ದು, ಸಿಕ್ಕಿರುವ ನಿಧಿ ವಿಜಯನಗರ ಸಾಮ್ರಾಜ್ಯ ಅಥವಾ ಚಾಲುಕ್ಯರ ಕಾಲದ್ದು. ಬ್ರಿಟಿಷರ ಕಾಲಕ್ಕಿಂತಲೂ ಹಳೆಯದಾದ ನಿಧಿಯಾಗಿದ್ದು, ಮೇಲ್ನೋಟಕ್ಕೆ ಇದು ವಿಜಯನಗರ ಕಾಲದ್ದು ಅನ್ನಿಸ್ತಿದೆ. ಆದ್ರೆ ನಿಖರ ವರದಿ ಬರಲು ಇನ್ನೂ 3 ದಿನಗಳು ಬೇಕಾಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.
ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜನವರಿ 10 ರಂದು ಚಿನ್ನದ ನಿಧಿ ಪತ್ತೆಯಾಗಿತ್ತು. ಕಸ್ತೂರಿ ರಿತ್ತಿ ಅವರ ಮನೆಯ ಪಾಯ ಮುಚ್ಚುವ ವೇಳೆ ಚಿನ್ನದ ನಿಧಿ ಪತ್ತೆಯಾಗಿದ್ದು, ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಕುಟುಂಬಸ್ಥರು ಪ್ರಾಮಾಣಿಕವಾಗಿ ಚಿನ್ನವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದ್ದರು. ಈ ನಾಲ್ಕು ಜನ ರಾಜ್ಯ ಹಾಗೂ ಕೇಂದ್ರದ ಪುರಾತತ್ತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಈ ಚಿನ್ನ 300ಕ್ಕೂ ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರ ಆಳ್ವಿಕೆ ಸಮಯದಲ್ಲಿ ಚಿನ್ನ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ಶರಣು ಗೋಗೇರಿ ಮಾತನಾಡಿ, ಖಜಾನೆಯಲ್ಲಿ ಇಟ್ಟಿದ್ಷ ಚಿನ್ನವನ್ನು ವಿಡಿಯೋ ಚಿತ್ರೀಕರಣ ಮಾಡೋ ಮೂಲಕ ಅದರ ಮೂಲವನ್ನು ಪತ್ತೆ ಮಾಡುವ ಕೆಲಸ ಮಾಡಲಾಗಿದೆ ಎಂದಿದ್ದಾರೆ.
ಇನ್ನೂ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕ ಚಿನ್ನ ಹಳೆ ಕಾಲದ್ದು ಎನ್ನುವ ಸತ್ಯ ಬಹಿರಂಗವಾಗಿದೆ. ಈ ಚಿನ್ನವನ್ನು ನೋಡಿದ್ರೆ ಒಬ್ಬ ಸದೃಢ ಮನುಷ್ಯ ಹಾಕಿಕೊಳ್ಳುವ ಆವರಣಗಳನ್ನು ಎನ್ನುವುದು ಈ ಗಾತ್ರವನ್ನು ನೋಡಿದ್ರೆ ತಿಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿಪತ್ತೆಯಾದ ಬೆನ್ನಲ್ಲೇ ನಿಧಿಗಳ್ಳರ ಹಾವಳಿ ಹೆಚ್ಚಾಗುವ ಆತಂಕ ಎದುರಾಗಿದೆ. ಈ ಹಿಂದೆ ಕೂಡಾ ಲಕ್ಕುಂಡಿ ಗ್ರಾಮದಲ್ಲಿ ಸಾಕಷ್ಟು ನಿಧಿ ಶೋಧ ಮಾಡಿವ ದುಷ್ಕೃತ್ಯಗಳ ನಡೆದಿವೆ. ಗ್ರಾಮದಲ್ಲಿ 101 ದೇವಸ್ಥಾನ ಹಾಗೂ 101 ಬಾವಿಗಳಿದ್ದು, ಕಳೆದ ಎರಡು ವರ್ಷಗಳ ಹಿಂದೆ ಸೋಮೇಶ್ವರ ದೇವಸ್ಥಾನದಲ್ಲಿ ನಿಧಿಗಳ್ಳರು, ಬಸಣ್ಣ ಮೂರ್ತಿಯನ್ನು ತೆಗೆದು, ಆರೇಳು ಆಡಿಯಷ್ಟು ತಗ್ಗು ಅಗೆದು ನಿಧಿ ಶೋಧ ಮಾಡಿದ್ದರು. ಈಗ ಮನೆಯ ಪಾಯ ಹಾಕುವ ವೇಳೆಯಲ್ಲಿ ನಿಧಿ ಸಿಕ್ಕಿದ್ದರಿಂದ ಮತ್ತೆ ನಿಧಿಗಳ್ಳರ ಹಾವಳಿ ಹೆಚ್ಚಾಗಲಿದ್ದು, ಪುರಾತನ ದೇವಸ್ಥಾನಗಳಿಗೆ ಸಿಸಿಟಿವಿ ಹಾಗೂ ಭದ್ರತೆ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ನಿಧಿಯ ನಿಖರ ಕಾಲಮಾನ ತಿಳಿಯಲು ಜಿಲ್ಲಾಡಳಿತ ಮುಂದಾಗಿದೆ. ಆದ್ರೆ ಊರಲ್ಲಿ ನಿಧಿ ಸಿಕ್ಕಿದ್ದೇ ಗ್ರಾಮಸ್ಥರು ನಿದ್ದೆಗೆಡುವಂತೆ ಮಾಡಿದ್ದು, ನಿಧಿಗಳ್ಳರಿಂದಾಗಿ ಆತಂಕದಲ್ಲೇ ಬದುಕುವಂತಾಗಿದೆ.