ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿ ಏನೇನು ಚಿನ್ನಾಭರಣಗಳಿದ್ದವು ಗೊತ್ತೇ? ಕೊನೆಗೂ ಸಿಕ್ತು ಅಧಿಕೃತ ಮಾಹಿತಿ

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ದೊರೆತ ಚಿನ್ನದ ನಿಧಿಯ ಕುರಿತು ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ಅಧಿಕೃತ ಮಾಹಿತಿ ನೀಡಿದ್ದಾರೆ. ಮನೆ ಪಾಯದ ಕೆಲಸದ ವೇಳೆ ಪತ್ತೆಯಾದ 466 ಗ್ರಾಂ ಚಿನ್ನದ ಆಭರಣಗಳು ಮತ್ತು ತಾಮ್ರದ ವಸ್ತುಗಳ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ನಿಧಿಯು ಸದ್ಯ ಜಿಲ್ಲಾ ಖಜಾನೆಯಲ್ಲಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ನಂತರ ರಾಜ್ಯ ಖಜಾನೆಗೆ ಸೇರಲಿದೆ.

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿ ಏನೇನು ಚಿನ್ನಾಭರಣಗಳಿದ್ದವು ಗೊತ್ತೇ? ಕೊನೆಗೂ ಸಿಕ್ತು ಅಧಿಕೃತ ಮಾಹಿತಿ
ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ & ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿದ್ದ ಚಿನ್ನಾಭರಣ
Edited By:

Updated on: Jan 13, 2026 | 8:43 AM

ಗದಗ, ಜನವರಿ 13: ಗದಗ (Gadag) ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯದ ಕೆಲಸದ ವೇಳೆ ಚಿನ್ನದ ನಿಧಿ (Gold Treasure) ಸಿಕ್ಕಿದ ವಿಚಾರ ಹತ್ತಾರು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಈವರೆಗೆ ಅರ್ಧ ಕೆಜಿ ಚಿನ್ನದ ನಿಧಿ ದೊರೆತಿದೆ ಎಂಬ ವರದಿಯಾಗಿತ್ತಷ್ಟೇ ವಿನಃ, ಅದರಲ್ಲಿ ಏನೇನಿದ್ದವು ಎಂಬ ಮಾಹಿತಿ ಇರಲಿಲ್ಲ. ಇದೀಗ ಗದಗ ಜಿಲ್ಲಾಧಿಕಾರಿ ಆ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ನಿಧಿಯಲ್ಲಿ ಏನೇನು ಆಭರಣಗಳಿದ್ದವು ಎಂಬುದನ್ನು ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ಬಹಿರಂಗಪಡಿಸಿದ್ದಾರೆ.

ಚಿನ್ನಾಭರಣಗಳ ಸ್ವರೂಪ ಹಾಗೂ ತೂಕದ ವಿವರ

  • ಕೈ ಕಡಗದ 1 ತುಂಡು – 33 ಗ್ರಾಂ
  • ಕೈ ಕಡಗದ 1 ತುಂಡು – 12 ಗ್ರಾಂ
  • ಕಂಠದ ಹಾರ 1 ತುಂಡು – 44 ಗ್ರಾಂ
  • ಕಂಠದ ಹಾರ 1 ತುಂಡು – 137 ಗ್ರಾಂ
  • ಕುತ್ತಿಗೆ ಚೈನ್ 1 ತುಂಡು – 49 ಗ್ರಾಂ
  • 5 ದೊಡ್ಡ ಗುಂಡಿನ 1 ತೋಡೆ ತುಂಡು – 34 ಗ್ರಾಂ
  • 2 ದೊಡ್ಡ ಗುಂಡಿನ 1 ತೋಡೆ ತುಂಡು – 17 ಗ್ರಾಂ
  • 1 ದೊಡ್ಡ ಗುಂಡು + 1 ಸಣ್ಣ ಗುಂಡಿನ 1 ತುಂಡು – 11 ಗ್ರಾಂ
  • 1 ದೊಡ್ಡ ಗುಂಡು + 1 ಸಣ್ಣ ಗುಂಡಿನ 1 ತುಂಡು – 11 ಗ್ರಾಂ
  • 1 ವಂಕಿ ಉಂಗುರ – 23 ಗ್ರಾಂ
  • ಕಿವಿ ಹ್ಯಾಂಗಿಂಗ್ 1 ತುಂಡು – 03 ಗ್ರಾಂ
  • 1 ನಾಗ ರೂಪದ ಕಿವಿಯೋಲೆ ಬಿಳಿ ಮಣಿ ಸಹಿತ – 07 ಗ್ರಾಂ
  • 1 ನಾಗ ರೂಪದ ಕಿವಿಯೋಲೆ ಕೆಂಪು ಮಣಿ ಸಹಿತ – 07 ಗ್ರಾಂ
  • 1 ಓಲೆ (ನೀಲಿ ಹರಳಿನೊಂದಿಗೆ) – 05 ಗ್ರಾಂ
  • 1 ಓಲೆ (ನೀಲಿ ಹರಳಿನೊಂದಿಗೆ) – 05 ಗ್ರಾಂ
  • 1 ಕೇಸರಿ ಹವಳದ ಓಲೆ – 05 ಗ್ರಾಂ
  • 1 ಉಂಗುರ – 08 ಗ್ರಾಂ
  • 1 ಬಿಳಿ ಹರಳು, 1 ಕೆಂಪು ಹರಳು , 1 ಹಸಿರು ಹರಳು ಅಂಗಿ ಗುಂಡಿ ಮತ್ತು 1 ತುಂಡು ಗೆಜ್ಜೆ ಎಲ್ಲ ಸೇರಿ:- 4 ಗ್ರಾಂ
  • 2 ಕಡ್ಡಿಗಳು – 03 ಗ್ರಾಂ
  • 22 ತೂತು ಬಿಲ್ಲೆಗಳು – 48 ಗ್ರಾಂ
  • ಒಟ್ಟು ಚಿನ್ನ : 466 ಗ್ರಾಂ

ಚಿನ್ನಾಭರಣ ಮಾತ್ರವಲ್ಲದೆ ತಾಮ್ರದ ಶಿಥಿಲಗೊಂಡ 1 ಮಡಿಕೆ, 1 ಮುಚ್ಚಳ ಹಾಗೂ 3 ಸಣ್ಣ ತುಂಡು ಸಹಿತ 634 ಗ್ರಾಂ ತಾಮ್ರದ ತೆಂಬಿಗೆ ದೊರೆತಿದೆ.

ಯಾರ ಪಾಲಾಗಲಿದೆ ನಿಧಿ? ಡಿಸಿ ಹೇಳಿದ್ದಿಷ್ಟು…

ನಿಧಿಯ ಕುರಿತು ಸಂಪೂರ್ಣ ಪರಿಶೀಲನೆ, ವಿಚಾರಣೆ ಆಗುವ ವರೆಗೂ ಜಿಲ್ಲಾ ಖಜಾನೆಯಲ್ಲಿರುತ್ತದೆ. ಆಮೇಲೆ ನಿಧಿ ರಾಜ್ಯ ಖಜಾನೆಗೆ ಹೋಗುತ್ತದೆ ಎಂದು ಸಿಎನ್ ಶ್ರೀಧರ್ ಹೇಳಿದ್ದಾರೆ. ಪುರಾತತ್ವ ಇಲಾಖೆಯಿಂದ ವಸ್ತುಗಳ ಸಂಗ್ರಹಾಲಯ ಇಡುತ್ತಾರೆ. ಕಾನೂನು ನಿಯಮದಂತೆ ನಡೆದುಕೊಳ್ಳಬೇಕಾಗುತ್ತದೆ. ಕುಟುಂಬಸ್ಥರ ಅಭಿಪ್ರಾಯದಂತೆ ನಡೆದುಕೊಳ್ಳಲು ಆಗುವುದಿಲ್ಲ. ಕ್ಲೇಮ್ ಕೌಂಟರ್ ಕ್ಲೇಮ್ ಆದ ಮೇಲೆ ಬಹುಮಾನದ ವಿಚಾರ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅರ್ಧ ಕೆಜಿ ಚಿನ್ನದ ನಿಧಿ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರನ ಅಳಲು

ಜಾಗ ವಶಕ್ಕೆ ಪಡೆಯುವುದಕ್ಕೂ ಬಿಡುವುದಕ್ಕೂ ಈಗ ಪ್ರಕ್ರಿಯೆ ಇರುವುದಿಲ್ಲ ಇತಿಹಾಸ ತಜ್ಞರು ಪರಿಶೀಲನೆ ಮಾಡಿದ ಮೇಲೆ, ಅಲ್ಲಿ ಯಾವುದೇ ವಸ್ತು ಸಿಗುವುದಿಲ್ಲ ಎಂಬುದು ಗೊತ್ತಾದ ನಂತರ ಅವರು ಮನೆ ಕಟ್ಟಲು ಮುಂದುವರೆಯಲು ಅವಕಾಶ ನೀಡಲಾಗುತ್ತದೆ. ಎಂಟು ದಿನಗಳ ಒಳಗೆ ಅವಕಾಶ ಕೊಡುತ್ತೇವೆ. ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಬಗ್ಗೆ ಅಭಿಪ್ರಾಯ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ