ಗದಗ: ಹೈಟೆಕ್ ಆಸ್ಪತ್ರೆ ಉದ್ಘಾಟನೆಗೂ ಮುನ್ನ ಕೆಟ್ಟು ನಿಂತ ಲಿಫ್ಟ್, ರೋಗಿಗಳ ಪರದಾಟ
ಗದಗ ನಗರದ ಹೊರವಲಯದ ಮಲ್ಲಸಮುದ್ರದಲ್ಲಿರುವ ಜಿಮ್ಸ್ನ ಆಯುಷ್ಯ ಆಸ್ಪತ್ರೆ ಆವರಣದಲ್ಲಿ ಗಲೀಜು ಎಲ್ಲೆಂದರಲ್ಲಿ ಬಿದ್ದಿದೆ. ಗಬ್ಬು ವಾಸನೆಯಿಂದ ರೋಗಿಗಳು ಒದ್ದಾಡುತ್ತಿದ್ದಾರೆ. ಇನ್ನೊಂದೆಡೆ, ಆಸ್ಪತ್ರೆ ಉದ್ಘಾಟನೆಗೂ ಮುನ್ನ ಲಿಫ್ಟ್ಗಳು ಕೆಟ್ಟುನಿಂತಿವೆ. ಇದರಿಂದಾಗಿ ಒಂದನೇ, ಎರಡನೇ ಮಹಡಿ ಏರಲು ರೋಗಿಗಳು ಪರದಾಡುವಂತಾಗಿದೆ. ನಿರ್ದೇಶಕರ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಗದಗ, ಅ.8: ನಗರದ ಹೊರವಲಯದ ಮಲ್ಲಸಮುದ್ರದಲ್ಲಿರುವ ಜಿಮ್ಸ್ನ (GIMS) ಸರ್ಕಾರಿ ಸಂಯುಕ್ತ ಆಯುಷ್ ಆಸ್ಪತ್ರೆ ಆವರಣದಲ್ಲಿ ಗಲೀಜು ಎಲ್ಲೆಂದರಲ್ಲಿ ಬಿದ್ದಿದೆ. ಗಬ್ಬು ವಾಸನೆಯಿಂದ ರೋಗಿಗಳು ಒದ್ದಾಡುತ್ತಿದ್ದಾರೆ. ಆಸ್ಪತ್ರೆ ಬಂದರೆ ರೋಗ ವಾಸಿಯಾಗುತ್ತೆ ಅಂತ ಭಾವಿಸಿದರೆ ಇಲ್ಲಿನ ಅವ್ಯವಸ್ಥೆಯು ರೋಗಗಳನ್ನು ವಕ್ಕರಿಸುವ ಭೀತಿ ಎದುರಾಗಿದೆ.
ಜಿಮ್ಸ್ನ ಆಯುಷ್ಯ ಕಟ್ಟಡದಲ್ಲಿ ಸಾಕಷ್ಟು ರೋಗಿಗಳು ದಾಖಲಾಗಿದ್ದಾರೆ. ಆದರೆ, ಕಟ್ಟಡ ಸುತ್ತಮುತ್ತ ಸಾಕಷ್ಟು ಗಲೀಜು ಎಸೆಯಲಾಗಿದೆ. ಸ್ವಚ್ಛತೆ ಅನ್ನೋದು ಈ ಆಸ್ಪತ್ರೆಯಲ್ಲಿ ಮಾಯವಾಗಿದೆ. ಎಲ್ಲಿ ನೋಡಿದರೂ ಔಷಧಿ, ಇಂಜೆಕ್ಷನ್ ಸಿರಿಂಜ್ ಸೇರಿದಂತೆ ಗಲೀಜು ಬೇಕಾಬಿಟ್ಟಿಯಾಗಿ ಹಾಕಲಾಗಿದೆ. ಇದು ರೋಗಿಗಳ ಆತಂಕಕ್ಕೆ ಕಾರಣವಾಗಿದೆ.
ಆಸ್ಪತ್ರೆ ಆಡಳಿತಕ್ಕೇ ಸರ್ಜರಿ ಮಾಡುವಂತ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಗರ್ಭಿಣಿಯರ ಗೋಳಾಟದ ಬಗ್ಗೆ ಎರಡು ದಿನಗಳ ಹಿಂದೆ ಟಿವಿ9 ವರದಿ ಮಾಡಿತ್ತು. ಆದರೂ ಇಲ್ಲಿನ ಜಿಡ್ಡು ಹಿಡಿದ ಆಡಳಿತಕ್ಕೆ ಬುದ್ಧಿ ಬಂದಿಲ್ಲ. ಈ ಎಲ್ಲ ಅದ್ವಾನಗಳ ಬಗ್ಗೆ ಅಧಿಕಾರಿಗಳಿಗೆ, ಸಿಬ್ಬಂದಿಗಳ ಗಮನಕ್ಕೆ ತಂದರೂ ಯಾರೂ ಕೇರ್ ಮಾಡುತ್ತಿಲ್ಲ ಅಂತ ಜನರು ಕಿಡಿಕಾರಿದ್ದಾರೆ.
ಬಡ ರೋಗಿಗಳಿಗೆ ಅನಕೂಲ ಆಗಲಿ ಅಂತ ಸರ್ಕಾರ ಕೋಟ್ಯಾಂತರ ವೆಚ್ಚ ಮಾಡಿ 450 ಬೆಡ್ಗಳ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಿದೆ. ರೋಗಿಗಳ ಅನುಕೂಲಕ್ಕಾಗಿ ಹೈಟೆಕ್ ಲಿಫ್ಟ್ಗಳ ಸೌಲಭ್ಯ ಕಲ್ಪಿಸಿದೆ. ಆದರೆ ಇವುಗಳು ಕೆಟ್ಟು ನಿಂತಿವೆ.
ಇದನ್ನೂ ಓದಿ: ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ವ್ಹೀಲ್ ಚೇರ್ ಇಲ್ಲದೇ ರೋಗಿಗಳ ನರಳಾಟ, ಅವ್ಯವಸ್ಥೆ ವಿರುದ್ಧ ಗರ್ಭಿಣಿಯರ ಆಕ್ರೋಶ
ಈ ಕಟ್ಟಡ ಅಧಿಕೃತವಾಗಿ ಇನ್ನೂ ಉದ್ಘಾಟನೆ ಆಗಿಲ್ಲ. ಆದರೆ, ರೋಗಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಜಿಮ್ಸ್ ಆಡಳಿತ ಓಪಿಡಿ ಸೇರಿದಂತೆ ಹಲವು ಸೇವೆಗಳು ಹೊಸ ಕಟ್ಟಡದಲ್ಲಿ ಆರಂಭ ಮಾಡಿದೆ. ಹೀಗಾಗಿ ನಿತ್ಯ ಸಾವಿರಾರು ರೋಗಿಗಳು ಈ ಆಸ್ಪತ್ರೆಗೆ ಆಗಮಿಸುತ್ತಾರೆ. ಆದರೆ, ರೋಗಿಗಳಿಗೆ ಮಾತ್ರ ಸರಿಯಾಗಿ ಸೌಲಭ್ಯ ಸಿಗುತ್ತಿಲ್ಲ. ವಿಕಲಚೇತನರು, ವಯಸ್ಸಾದವರು, ಗಂಭೀರ ಸ್ವರೂಪದ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುತ್ತಾರೆ. ಆದರೆ ಒಂದನೇ, ಎರಡನೇ, ಮೂರನೇ ಮಹಡಿಗಳಿಗೆ ಮೆಟ್ಟಿಲು ಹತ್ತಿ ಹೋಗಲು ಆಗಲ್ಲ. ಲಿಫ್ಟ್ನಲ್ಲಿ ಹೋಗಬೇಕಾದರೆ ಹೊಸ ಲಿಫ್ಟ್ಗಳ ಸೇವೆ ಆರಂಭ ಮಾಡಿಲ್ಲ.
ಸಾಕಷ್ಟು ಬಾರಿ ರೋಗಿಗಳಿಂದ ದೂರು ಬಂದರೂ ಲಿಫ್ಟ್ ಸೇವೆ ಆರಂಭ ಮಾಡಿಲ್ಲ. ಹೀಗಾಗಿ ರೋಗಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ. ಈ ಬಗ್ಗೆ ಜಿಮ್ಸ್ ಮೆಡಿಕಲ್ ಸೂಪರಿಡೆಂಟ್ ಡಾ. ರೇಖಾ ಅವರನ್ನು ಕೇಳಿದಾಗ ಪಿಫ್ಟ್ ಸಮಸ್ಯೆ ಆಗಿರುವುದನ್ನು ತಿಳಿಸಿದ್ದಾರೆ. ಅಲ್ಲದೆ, ಈ ಬಗ್ಗೆ ತಾನು ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಳ್ಳಿ ಅವರಿಗೆ ಸಾಕಷ್ಟು ಬಾರಿ ತಿಳಿಸಿದ್ದು, ಲಿಖಿತವಾಗಿಯೂ ತಿಳಿಸಿದ್ದೇನೆ. ಆದರೆ, ಲಿಫ್ಟ್ ಆರಂಭಿಸುತ್ತಿಲ್ಲ. ಇಂಜಿನೀಯರ್ ಜೊತೆ ಕೂಡ ಮಾತನಾಡಿದ್ದೇನೆ. ಅವರು ಕೂಡ ನಿರ್ದೇಶಕರು ಹೇಳಿದರೆ ಆರಂಭ ಮಾಡುವುದಾಗಿ ಹೇಳಿದ್ದಾಗಿ ತಿಳಿದರು.
ಸರ್ಕಾರ ಸೌಲಭ್ಯ ನೀಡಿದರೂ ಜಿಮ್ಸ್ ಆಸ್ಪತ್ರೆಯ ಅದ್ವಾನಕ್ಕೆ ಯಾವುದೇ ಸೌಲಭ್ಯಗಳು ರೋಗಿಗಳಿಗೆ ಸಿಗುತ್ತಿಲ್ಲ. ಸ್ವಚ್ಛತೆ ಬಗ್ಗೆಯೂ ನಿರ್ದೇಶಕರ ಗಮನಕ್ಕೆ ತರಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಆದರೆ, ನಿರ್ದೇಶಕರು ಮಾತ್ರ ಆಸ್ಪತ್ರೆಯಲ್ಲಿ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಅನ್ನೋದ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತೆ.
ಬೇಜವಾಬ್ದಾರಿ ತೋರುತ್ತಿದ್ದಾರೆ ಅನ್ನೋದು ಈ ಎಲ್ಲ ಬೆಳವಣಿಗೆಯಿಂದ ಗೋತ್ತಾಗುತ್ತದೆ. ಇನ್ನಾದರೂ ವೈದ್ಯಕೀಯ ಇಲಾಖೆ, ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ಅವರು ಜಿಮ್ಸ್ ಆಡಳಿತಕ್ಕೆ ಸರ್ಜರಿ ಮಾಡುವ ಮೂಲಕ ರೋಗಿಗಳಿಗೆ ಉತ್ತಮ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ