Gadag: ಐಪಿಎಲ್ ಬೆಟ್ಟಿಂಗ್ ದಂಧೆಕೋರರಿಂದ ಲಂಚ ಪಡೆಯುತ್ತಿದ್ದ ಗಜೇಂದ್ರಗಡ ಠಾಣೆ ಪಿಎಸ್ಐ ಲೋಕಾಯುಕ್ತ ಬಲೆಗೆ
ರಾಜ್ಯದಲ್ಲಿ ಭ್ರಷ್ಟರನ್ನು ಮಟ್ಟಹಾಕುತ್ತಿರುವ ಲೋಕಾಯುಕ್ತ ಪೊಲೀಸರು, ಟ್ರ್ಯಾಪ್ ನಡೆಸಿ ಬಂಧಿಸುತ್ತಿದ್ದಾರೆ. ಇದೀಗ ಗದಗದಲ್ಲಿ ಲಂಚ ಪಡೆಯುತ್ತಿದ್ದ ಪೊಲೀಸರನ್ನೇ ಲೋಕಾಯುಕ್ತ ಬಲಗೆ ಹಾಕಿಕೊಂಡಿದೆ.
ಗದಗ: ರಾಜ್ಯದಲ್ಲಿ ಭ್ರಷ್ಟರನ್ನು ಮಟ್ಟಹಾಕುತ್ತಿರುವ ಲೋಕಾಯುಕ್ತ ಪೊಲೀಸರು (Lokayukta Raid), ಭ್ರಷ್ಟರ ಕಚೇರಿ, ಮನೆಗಳಿಗೆ ನುಗ್ಗಿ ಬಂಧಿಸುತ್ತಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡುತ್ತಿರುವುದು ನಿಲ್ಲುತ್ತಿಲ್ಲ. ಮಾತ್ರವಲ್ಲದೆ, ಅಪರಾಧ ಕೃತ್ಯಗಳನ್ನು ತಡೆದು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಮಾಡುವ ಪೊಲೀಸರೇ ಲಂಚ (Bribe) ಸ್ವೀಕಾರಕ್ಕೆ ಇಳಿದರೆ ಹೇಗೆ? ಗದಗದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಂದ ಲಂಚ ಪಡೆಯುತ್ತಿದ್ದ ಪಿಎಸ್ಐ ಸಹಿತ ಮೂವರು ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆಯ ಪಿಎಸ್ಐ ರಾಘವೇಂದ್ರ ಎಸ್ ಮತ್ತು ಇಬ್ಬರು ಕಾನ್ಸ್‌ಟೇಬಲ್‌ಗಳು ಗಜೇಂದ್ರಗಡ ಪಟ್ಟಣದ ದಾಭಾದಲ್ಲಿ ಬೆಟ್ಟಿಂಗ್ ದಂಧೆಕೋರರಿಂದ 1 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಸದ್ಯ ಮೂವರು ಪೊಲೀಸರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಗಜೇಂದ್ರಗಡದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೊರಾಗಿದೆ. ಅದರಂತೆ ಮೂವರು ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಲು ಪಿಎಸ್ಐ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗಿ ವಿನಾಯಕ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿ ಲಂಚದ ಹಣದ ಪೈಕಿ 1 ಲಕ್ಷ ನೀಡಲು ಪಟ್ಟಣದಲ್ಲಿರುವ ಧಾಬಾಕ್ಕೆ ತೆರಳಿದ್ದಾರೆ.
ಇದನ್ನೂ ಓದಿ: ಕಾಣೆಯಾದ ಮಹಿಳೆ ಪತ್ತೆ ಹಚ್ಚಿ ಮನೆಗೆ ಕಳುಹಿಸಲು 50 ಸಾವಿರ ರೂ. ಲಂಚ ಪಡೆದ ಪಿಎಸ್ಐ ಲೋಕಾಯುಕ್ತ ಬಲೆಗೆ
ವಿನಾಯಕ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಡಿವೈಎಸ್ಪಿ ಶಂಕರ ರಾಗಿ, ಸಿಪಿಐ ಪುರುಷೋತ್ತಮ, ಅಜೀಜ್ ಕಲಾದಾಗಿ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದ್ದಾರೆ. ವಿನಾಯಕ ಅವರಿಂದ ಪಿಎಸ್ಐ ಮತ್ತು ಇಬ್ಬರು ಕಾನ್ಸ್‌ಟೇಬಲ್‌ಗಳು 1 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಪ್ರಕರಣ ಹಿನ್ನೆಲೆ
ಏಪ್ರಿಲ್ 23 ರಂದು ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡೆದ ಐಪಿಎಲ್ ಪಂದ್ಯದಲ್ಲಿ ಒಂದು ಸಾವಿರಕ್ಕೆ ಎರಡು ಸಾವಿರ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಚೀಟಿಯಲ್ಲಿ ಬರೆದುಕೊಟ್ಟ ಹಾಗೂ ತಮ್ಮ ಮೊಬೈಲ್ನಲ್ಲಿ ಆನ್ ಲೈನ್ ಆ್ಯಪ್ನಲ್ಲಿ ಬೆಟ್ಟಿಂಗ್ ಆಡುತ್ತಿದ್ದಾಗ ಹರೀಶ್ ಪರಶುರಾಮ ದಲಬಂಜನ್ ಹಾಗೂ ಸಂತೋಷ ತಂದೆ ವಿರುಪಾಕ್ಷಸಾ ಜರತಾರಿ ಎಂಬಿಬ್ಬರನ್ನು ಗಜೇಂದ್ರಗಡ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ನಗದು 2500ರೂ.ಹಣ ಹಾಗೂ ಮೊಬೈಲ್ ಜಪ್ತಿ ಮಾಡಿದ್ದರು.
ಆ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ 0054/2023 ಕಲಂ-78[1][ಎ][4][6]ಕೆ.ಪಿ ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬೇಲ್ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡುವಾಗ ಪಿಎಸ್ಐ ರಾಘವೇಂದ್ರ, ಪೇದೆಗಳಾದ ಶರಣಪ್ಪ ಭಜಂತ್ರಿ ಹಾಗೂ ಕುರಿ ಎಂಬುವರು ಎರಡು ಲಕ್ಷ ರೂ. ಹಣ ಡೀಮ್ಯಾಂಡ್ ಮಾಡಿದ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ವಿನಾಯಕ ಜರತಾರಿ ಎಂಬುವರು ದೂರು ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 pm, Mon, 1 May 23