ಗೋವಾದಲ್ಲಿ ರಷ್ಯಾ ಬಾಲಕಿಯ ಮೇಲೆ ಅತ್ಯಾಚಾರ: ಗದಗದಲ್ಲಿ ಆರೋಪಿ ಬಂಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 12, 2022 | 12:40 PM

ಮೇ 6ರಂದು ಅತ್ಯಾಚಾರ ನಡೆದಿತ್ತು. ಮೇ 9ರಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಗೋವಾದಲ್ಲಿ ರಷ್ಯಾ ಬಾಲಕಿಯ ಮೇಲೆ ಅತ್ಯಾಚಾರ: ಗದಗದಲ್ಲಿ ಆರೋಪಿ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಪಣಜಿ: ರಷ್ಯಾದಿಂದ ಪ್ರವಾಸಕ್ಕೆ ಬಂದಿದ್ದ (Russian Tourist) 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅತ್ಯಾಚಾರ ಎಸಗಿದ ಆರೋಪಿಯನ್ನು ಕರ್ನಾಟಕದ ಗದಗದಲ್ಲಿ ಗೋವಾ ಪೊಲೀಸರು (Goa Police) ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರ ಗೋವಾದ ಅರಂಬೊಲ್ ರೆಸಾರ್ಟ್​ನಲ್ಲಿ ಆರೋಪಿಯು ಕೊಠಡಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರವಿ ಲಮಾಣಿ ಎಂದು ಗುರುತಿಸಲಾಗಿದೆ. ಪೆರ್​ನೆಮ್ ಪೊಲೀಸರು ಮೇ 10ರಂದು ಗದಗದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಮೇ 6ರಂದು ಅತ್ಯಾಚಾರ ನಡೆದಿತ್ತು. ಮೇ 9ರಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ಪೆರ್​ನೆಮ್ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ವಿಕ್ರಮ್ ನಾಯಕ್, ‘ರೆಸಾರ್ಟ್​ನ ಈಜುಕೊಳದಲ್ಲಿ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ನಂತರ ಹೊಟೆಲ್ ರೂಮ್​ನಲ್ಲಿಯೂ ಕೊಠಡಿ ಸಹಾಯಕನಿಂದ ಅತ್ಯಾಚಾರ ನಡೆದಿದೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದರು. ಘಟನೆ ನಡೆದಾಗ ಮಗಳನ್ನು ಈಜುಕೊಳದ ಬಳಿ ಬಿಟ್ಟು ತಾಯಿ ಕೆಲ ಅತ್ಯಗತ್ಯ ವಸ್ತುಗಳನ್ನು ಖರೀದಿಸಲು ಸಮೀಪದ ಅರಂಬೊಲ್ ಪೇಟೆಗೆ ಹೋಗಿದ್ದರು’ ಎಂದು ಹೇಳಿದರು.

ಘಟನೆಯ ನಂತರ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದ. ಆದರೆ ದೂರು ಸ್ವೀಕರಿಸಿದ 24 ಗಂಟೆಗಳ ಒಳಗೆ ನಾವು ಆರೋಪಿಯನ್ನು ಗದಗದಲ್ಲಿ ಪತ್ತೆ ಮಾಡಿ ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (Indian Penal Code – IPC) 376ನೇ ವಿಧಿ (ಅತ್ಯಾಚಾರ), ಗೋವಾ ಮಕ್ಕಳ ಕಾಯ್ದೆಯ 8ನೇ ವಿಧಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (Protection of Children from Sexual Offences – POCSO) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಅತ್ಯಾಚಾರಕ್ಕೆ ಯತ್ನ; ಇಬ್ಬರು ಆರೋಪಿಗಳ ಬಂಧನ

ತೀರ್ಥಹಳ್ಳಿ (Thirthahalli) ತಾಲೂಕಿನ ಆರಗ ಸಮೀಪ ದಲಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೇ 9 ರ ರಾತ್ರಿ ಆರಗ ಬಳಿ ನಾಲ್ವರು ದುಷ್ಕರ್ಮಿಗಳು ದಲಿತ ಮಹಿಳೆ ಮತ್ತು ಆಕೆಯ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ದಲಿತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳೀಯರು ಬರುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಸದ್ಯ ಹಲ್ಲೆಗೊಳಗಾದ ಮಹಿಳೆ ಮತ್ತು ಆಕೆಯ ಪತಿಗೆ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ನೀಡಲಾಗುತ್ತಿದೆ.

ತೀರ್ಥಹಳ್ಳಿ ಸಿಪಿಐ ಸಂತೋಷ್ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನ ಬಂಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಆದರ್ಶ ಮತ್ತು ಸಂಪತ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಬ್ಬರು ಆರೋಪಿಗಳು ಘಟನೆ ಬಳಿಕ ತಲೆಮರೆಸಿಕೊಂಡಿದ್ದರು. ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.

Published On - 12:40 pm, Thu, 12 May 22