ಅದು ಬಡತನದ ಬೆಂಕಿಯಲ್ಲೂ ಪ್ರೀತಿಯಿಂದ ಬಾಳಿದ ಜೋಡಿ. ಮದುವೆಯಾಗಿ 9 ವರ್ಷ ಸುಖ ಸಂಸಾರ ನಡೆಸಿದ್ದಾರೆ. ಒಂದು ಮುದ್ದಾದ ಮಗಳು ಕೂಡ ಇದ್ದಾಳೆ. ಆದ್ರೆ, ನರ್ಸ್ ಆಗಿದ್ದ (Nurse) ಆ ಮನೆಯೊಡತಿ ಖಾಸಗಿ ಆಸ್ಪತ್ರೆಗೆ ಡ್ಯೂಟಿಗೆ ಹೋದವಳು ನಿಗೂಢ ಹತ್ಯೆಯಾಗಿದ್ದರು. ಮಹಿಳೆಯ ಕೊಲೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕತ್ತು ಹಿಸುಕಿ ಕೊಂದ ಹಂತಕನೇ ದೂರು ನೀಡಲು ಠಾಣೆ ಬಂದಿದ್ದ! ಪೊಲೀಸ್ರಿಗೆ ಸಣ್ಣ ಅನುಮಾನ ಬಂದಿದ್ದೇ ತಡ, ಹಂತಕನ ಹೆಡೆಮುರಿ ಕಟ್ಟಿದ್ದಾರೆ. ಅಷ್ಟಕ್ಕೂ ಆ ಹಂತಕ ಯಾರೂ ಅಂತ ಕೇಳಿದ್ರೆ ನೀವು ಬೆಚ್ಚಿ ಹೋಗ್ತೀರಾ… ಅದು ಬಂಡಾಯದ ನಾಡು ಗದಗ ಜಿಲ್ಲೆಯ ನರಗುಂದ (Nargund) ಪಟ್ಟಣ. ಏಪ್ರಿಲ್ 12 ರಂದು ಬೆಳ್ಳಂಬೆಳಗ್ಗೆ ಇಡೀ ಪಟ್ಟಣದ ಜನತೆ ಅಕ್ಷರಶಃ ಬೆಚ್ಚಿಬಿದ್ದಿದ್ರು. ಎಂ ಸ್ಯಾಂಡ್ (M Sand) ನಲ್ಲಿ ಹೂತು ಹೋಗಿದ್ದ ಓರ್ವ ಮಹಿಳೆಯ ಶವ ವಾಸನೆ ಹಬ್ಬುತ್ತಿದ್ದಂತೆ, ಆ ಸುದ್ದಿ ಇಡೀ ಪಟ್ಟಣದಲ್ಲಿ ಹಬ್ಬುತ್ತಾ, ಜನಸಾಗರವೇ ಅಲ್ಲಿ ಸೇರಿತ್ತು. ಖಾಸಗಿ ಆಸ್ಪತ್ರೆ ಡ್ಯೂಟಿಗೆ ನರ್ಸ್ ಮನೆಗೆ ವಾಪಸಾಗುವ ಮುನ್ನವೇ ಭೀಕರವಾಗಿ ಹತ್ಯೆಯಾಗಿದ್ದಾಳೆ (Murder). ಹೆತ್ತ ತಾಯಿಯ ಸಾವು ಕಂಡು ಮುದ್ದಾದ ಮಗಳು ಕಣ್ಣೀರು ಹಾಕುತ್ತಿದ್ದಾಳೆ. ಮಗಳ ಕಳೆದುಕೊಂಡು ಹೆತ್ತವ್ರ ಗೋಳಾಟ, ಆಕ್ರಂದನ ಮುಗಿಲು ಮುಟ್ಟಿದೆ (Gadag News).
ಹಂತಕ ಪತಿ ವಿರುದ್ಧ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಹೆಂಡತಿ ಬೇಡವಾಗಿದ್ರೆ ತವರಿಗೆ ಕಳಿಸಬೇಕಿತ್ತು ಕಿರಾತಕ. ಮುದ್ದಾಗಿ ಗಿಣಿಯಂತೆ ಸಾಕಿದ್ದ ಮಗಳನ್ನು ಕೊಂದು ಹಾಕಿದೆಯಲ್ಲೋ ಪಾಪಿ ಅಂತಾ ಆಕ್ರೋಶ. ಮುದ್ದಿನ ಮಗಳ ಕಳೆದುಕೊಂಡು ಕುಟುಂಬಸ್ಥರ ಗೋಳಾಟ, ಆಕ್ರಂದನ. ಪೊಲೀಸ್ರು ಸ್ಥಳ ಮಹಜರ ಮಾಡೋಕೆ ಹಂತಕ ಪತಿಯನ್ನು ಕರೆತಂದಾಗ ಮೃತಳ ಪೋಷಕರು, ಸಂಬಂಧಿಕರ ಆಕ್ರೋಶದ ಕಟ್ಟೆ ಒಡೆದಿತ್ತು. ಸಾಹೇಬ್ರೆ ಅವನನ್ನ ಬಿಟ್ಟುಬಿಡಿ, ನಾವು ನೋಡ್ಕೋತೀವಿ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಡಬಾರದ್ದು ಮಾಡಿ ಪೊಲೀಸ್ರ ಕೈಗೆ ಸಿಕ್ಕ ಹಂತನನ್ನು ಕೈಗೆ ಸಿಕ್ರೆ ಕೊಂದೆ ಬಿಡುವಷ್ಟು ಸಿಟ್ಟು, ರೋಷ ಸಂಬಂಧಿಕರದ್ದಾಗಿತ್ತು.
ಎಸ್ ಈ ಘಟನೆ ನಡೆದಿದ್ದು, ಗದಗ ಜಿಲ್ಲೆಯ ನರಗುಂದ ಪಟ್ಟಣದ ಸರಸ್ವತಿ ಬಡಾವಣೆಯಲ್ಲಿ. ಏಪ್ರಿಲ್ 10ರಂದು ಆಸ್ಪತ್ರೆ ಡ್ಯೂಟಿಗೆ ಹೋದ ನರ್ಸ್ ಸವಿತಾ ಪಾಟೀಲ್ ರಾತ್ರಿಯಾದ್ರೂ ಮನೆಗೆ ಆಗಮಿಸಿಲ್ಲ. ರಾತ್ರಿಯಿಡೀ ಹುಡುಕಾಡಿದ್ದಾರೆ. ಪತ್ನಿಯನ್ನು ಕೊಂದ ಹಂತಕನೂ ಕೂಡ ಹುಡುಕಾಡಿದ್ದಾನೆ! ಕೊನೆಗೆ ಕುಟುಂಬಸ್ಥರ ಜೊತೆ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸಿದ್ದ! ಯಾವುದೇ ಅನುಮಾನ ಬಾರದಂತೆ ನಾಟಕ ಮಾಡಿದ್ಧ.
ಹೌದು ಅಷ್ಟಕ್ಕೂ ನರ್ಸ್ ಕೊಂದ ಪಾಪಿ ಯಾರೂ ಅಂತ ಕೇಳಿದ್ರೆ ನೀವೂ ಬೆಚ್ಚಿ ಬೀಳ್ತೀರಾ. ನರ್ಸ್ ಸವಿತಾ ಪಾಟೀಲ್ ಳನ್ನು ಕೊಂದವ ಬೇರೆ ಯಾರೂ ಅಲ್ಲ ತಾಳಿ ಕಟ್ಟಿದ ಗಂಡನೇ! ಹೌದು ಏಪ್ರಿಲ್ 10ರಂದು ರಾತ್ರಿ ಡ್ಯೂಟಿ ಮುಗಿಸಿ ಮನೆ ಸಮೀಪವೇ ಬಂದಿದ್ದಾಳೆ. ಅಷ್ಟರಲ್ಲೇ ಎದುರಿಗೆ ಗಂಡ ಈರನಗೌಡ ಬಂದಿದ್ದಾನೆ. ಯಾರ ಜೊತೆ ಬಂದಿ ನೀ ಅಂತ ಪತ್ನಿಗೆ ಪ್ರಶ್ನೆ ಮಾಡಿದ್ಧಾನೆ. ಅನುಮಾನಗೊಂಡ ಪಾಪಿ ಪತಿ, ನಿನ್ನ ಯಾರು ತಂದು ಬಿಟ್ರು ಅಂತ ಪತ್ನಿಯ ಜೊತೆ ಜಗಳ ಮಾಡಿದ್ಧಾನೆ. ಅಷ್ಟೇ… ಕ್ಷಣ ಮಾತ್ರದಲ್ಲಿ ಕಿರಾತಕ ತನ್ನ ಪತ್ನಿಯ ಕತ್ತು ಹಿಸುಕಿ ಕೊಂದೇ ಹಾಕಿದ್ದಾನೆ. ಬಳಿಕ ಮನೆಯ ಸಮೀಪದಲ್ಲೇ ಎಂ ಸ್ಯಾಂಡ್ ಗುಡ್ಡೆಯಲ್ಲಿ ಹೂತು ಹಾಕಿದ್ದಾನೆ. ಮುದ್ದಾದ ಮಗಳು ಇದ್ದಾಳೆ ಅನ್ನೋದನ್ನೂ ಮರೆತವ, ಪತ್ನಿಯನ್ನು ಕೊಂದು ಈಗ ಜೈಲು ಪಾಲಾಗಿದ್ದಾನೆ.
ಏಪ್ರಿಲ್ 10 ರಂದು ರಾತ್ರಿ ಪತ್ನಿಯನ್ನು ಕೊಂದು ಹಾಕಿದವ ಮನೆಗೆ ಬಂದು ನಾಟಕ ಮಾಡಿದ್ಧಾನೆ. ಪತ್ನಿ ಸವಿತಾ ಇನ್ನೂ ಮನೆಗೆ ಬಂದಿಲ್ಲ. ಆಸ್ಪತ್ರೆಯಲ್ಲೂ ಇಲ್ಲ. ಎಲ್ಲಿ ಹೋಗಿದ್ದಾಳೆ ಅಂತ ಡ್ರಾಮಾ ಮಾಡಿದ್ದಾನೆ. ಬಳಿಕ ಹಾವೇರಿ ಜಿಲ್ಲೆಯ ಸವಿತಾಳ ತವರಿಗೆ ಫೋನ್ ಮಾಡಿ ಸವಿತಾ ಡ್ಯೂಟಿಗೆ ಹೋದವಳು ಮನೆಗೆ ವಾಪಸ್ ಬಂದಿಲ್ಲ ಅಂತ ಹೇಳಿದ್ದಾನೆ. ಸವಿತಾಳ ತಂದೆ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳಿದ್ಧಾನೆ. ಏಪ್ರಿಲ್ 11 ರಂದು ಬೆಳಗ್ಗೆ ನರಗುಂದ ಪೊಲೀಸ್ ಠಾಣೆಗೆ ಹೋಗಿ ಕುಟುಂಬಸ್ಥರು ಸವಿತಾ ಕಾಣೆಯಾಗಿದ್ದಾಳೆ ಅಂತ ದೂರು ನೀಡಿದ್ದಾರೆ. ದೂರು ನೀಡುವಾಗ ಪತಿಯೂ ಠಾಣೆಗೆ ಬಂದಿದ್ದಾನೆ. ಪೊಲೀಸ್ರಿಗೆ ಅನುಮಾನ ಬಾರದಂತೆ ಹಂತಕ ನಾಟಕ ಮಾಡಿದ್ಧಾನೆ.
ಆದ್ರೆ, ಪೊಲೀಸ್ರು ಮಾತ್ರ ಅಲ್ಲೇ ಈ ಹಂತಕ ಪತಿ ಮೇಲೆ ಕಣ್ಣು ಇಟ್ಟಿದ್ರು. ಪತಿಯೇ ಕೊಂದು ಹೊಂದಿರಬಹುದು ಅಂತ ಅನುಮಾನಗೊಂಡ ಪೊಲೀಸ್ರು ಹಂತಕ ಪತಿ ಈರನಗೌಡನ ಪಾಟೀಲ್ ನ್ನು ಠಾಣೆಗೆ ಕರೆತಂದು ಪೊಲೀಸ್ ಭಾಷೆಯಲ್ಲಿ ವಿಚಾರಣೆ ಮಾಡಿದ್ದಾರೆ. ಅಷ್ಟೇ… ಹಂತಕ ಎಲ್ಲವನ್ನೂ ಕಕ್ಕಿದ್ದಾನೆ. ಪತ್ನಿ ಶೀಲದ ಬಗ್ಗೆ ಅನುಮಾನಗೊಂಡು ಕತ್ತು ಹಿಸುಕಿ ಕೊಂದಿದ್ದೇನೆ ಅಂತ ಒಪ್ಪಿಕೊಂಡಿದ್ಧಾನೆ. ಕೊಲೆಯಾದ ಸವಿತಾಳ ಪೋಷಕರು ಕೂಡ ಪತಿ ಹಾಗೂ ಕುಟುಂಬಸ್ಥ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಬೇಡವಾದ್ರೆ ತವರಿಗೆ ಕಳಿಸಬೇಕಿತ್ತು. ಆದ್ರೆ, ಕೊಂದು ಹಾಕಿದ್ದಾನೆ ಅಂತ ಈಗ ಆಕ್ರೋಶ ಹೊರಹಾಕಿದ್ದಾರೆ. ಹಂತಕನಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ.
ಮೊದಲು ಸವಿತಾಳನ್ನು ತಾಯಿಯ ತಮ್ಮನಾದ ಸೋದರಮಾವನಿಗೆ ಮದುವೆ ಮಾಡಿಕೊಡಲು ತಾಯಿಯ ಆಸೆಯಾಗಿತ್ತಂತೆ. ಆದ್ರೆ, ಸವಿತಾ ಈರನಗೌಡನನ್ನು ಮದುವೆಯಾಗಿದ್ದಾಳೆ. ಈಗ ಮಗಳ ಕೊಲೆ ಕಂಡು ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಸೋದರಮಾನವನ ಜೊತೆ ಮದುವೆಯಾಗಿದ್ದರೆ ಸುಖವಾಗಿ ಇರುತ್ತಿದ್ದೇ ಅಂತ ಕಣ್ಣೀರು ಹಾಕ್ತಾಯಿದ್ದಾರೆ. ಸವಿತಾ ಹಾಗೂ ಈರನಗೌಡ ಮದುವೆಯಾಗಿ ಒಂಬತ್ತು ವರ್ಷಗಳಾಗಿವೆ. ಬಡತನದಲ್ಲೂ ಸುಂದರ ಸಂಸಾರ ಮಾಡಿದ್ದಾರೆ. ಒಬ್ಬಳು 7ವರ್ಷದ ಮುದ್ದಾದ ಮಗು ಕೂಡ ಇದೆ. ಆದ್ರೆ, ಯಾಕೇ ಕೊಲೆ ಆಯ್ತು ಅನ್ನೋದು ನಮಗೆ ಗೋತ್ತಿಲ್ಲ ಅಂತಿದ್ದಾರೆ ಕುಟುಂಬಸ್ಥರು.
ಮುದ್ದಾದ ಮಗಳ ಮುಖವಾದ್ರೂ ನೋಡಿ ಸುಮ್ಮನಿರಬೇಕಿತ್ತು. ಅನುಮಾನದ ಗುಂಗಿನಲ್ಲಿ ಮುಳುಗಿದ ಹಂತಕ ತನ್ನ ಸುಂದರ ಸಂಸಾರವನ್ನೇ ಸರ್ವನಾಶ ಮಾಡಿಕೊಂಡಿದ್ದಾನೆ. ತಾಯಿಯ ಶವ ವಾಹನದಲ್ಲಿ ಹಾಕಿಕೊಂಡು ಹೋಗುವಾಗ ಮುದ್ದಾದ ಕಂದ ಅಮ್ಮನ ತಗೊಂಡು ಹೋಗ್ತಿದ್ದಾರೆ ಅಂತ ಕಣ್ಣೀರು ಹಾಕುವ ದೃಶ್ಯಗಳು ಎಲ್ಲರನ್ನೂ ಕಣ್ಣೀರು ಹಾಕುವಂತೆ ಮಾಡಿದೆ. ತಾಯಿ ಮಸಣ ಸೇರಿದ್ರೆ ತಂದೆ ಜೈಲು ಸೇರಿ, 7 ವರ್ಷದ ಹೆಣ್ಣು ಮಗು ಅನಾಥವಾಗಿರುವುದು ವಿಪರ್ಯಾಸವೇ ಸರಿ.
ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ