ಮದುವೆಯಾಗಿ 9 ವರ್ಷವಾಗಿ ಸುಂದರವಾಗಿದ್ದ ಸಂಸಾರ; ನರ್ಸ್ ಆಗಿದ್ದ ಮನೆಯೊಡತಿಯ ಭೀಕರ ಹತ್ಯೆ, ಕಾರಣ ನಿಗೂಢ!
ಮೃತಪಟ್ಟ ಸವಿತಾಳನ್ನು ಮೊದಲು ಸೋದರ ಮಾವನಿಗೆ ಮದುವೆ ಮಾಡಿಕೊಡಬೇಕು ಎಂಬುದು ಆಕೆಯ ತಾಯಿಯ ಆಸೆಯಾಗಿತ್ತಂತೆ. ಆದ್ರೆ, ಸವಿತಾ, ಈರನಗೌಡ ಎಂಬಾತನನ್ನು ಮದುವೆಯಾಗಿದ್ದಾಳೆ. ಈಗ ಮಗಳ ಕೊಲೆ ಕಂಡು ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ಅದು ಸುಂದರ ಸಂಸಾರ. ಮದುವೆಯಾಗಿ 9 ವರ್ಷವಾಗಿದೆ. ಒಂದು ಮುದ್ದಾದ ಮಗು ಕೂಡ ಇದೆ. ಆ ಮನೆಯ ಒಡತಿ ಖಾಸಗಿ ಆಸ್ಪತ್ರೆಗೆ ಎಂದಿನಂತೆ ಡ್ಯೂಟಿಗೆ (Nurse) ಹೋಗಿದ್ದರು. ಆದರೆ ಮನೆಗೆ ವಾಪಸ್ ಆಗಿಲ್ಲ. ಅನುಮಾನಗೊಂಡ ಪತಿ, ತನ್ನ ಪತ್ನಿ ಕಾಣೆಯಾಗಿದ್ದಾಳೆ ಅಂತ ದೂರು ನೀಡಿದ್ದಾರೆ. ಆದ್ರೆ, ಇವತ್ತು ಮಹಿಳೆ ಶವ ಪತ್ತೆಯಾಗಿದ್ದು, ಭೀಕರವಾಗಿ ಕೊಲೆಯಾಗಿದ್ದಾಳೆ (Murder). ಹಂತಕರು ಆಕೆಯನ್ನು ಕೊಂದು ಎಂ ಸ್ಯಾಂಡ್ ನಲ್ಲಿ ಹೂತು ಹಾಕಿದ್ದಾರೆ. ಬಡಾವಣೆಯ ತುಂಬೆಲ್ಲಾ ವಾಸನೆ ಹರಡಿದಾಗ ಕೊಲೆಯಾಗಿರುವುದು ಬಯಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಸೇವೆಗೆ ಹೋದ ಆಕೆ ಪತ್ತೆಯಾಗಿದ್ದು ಹೆಣವಾಗಿ. ಇತ್ತೀಚೆಗೆ ಜಾತ್ರೆಗೆ ತವರಿಗೆ ಬಂದಿದ್ದ ಮಗಳು, ಮೊಮ್ಮಗಳಿಗೆ ಹೊಸ ಸೀರೆ, ಬಟ್ಟೆ ಕೊಡಿಸಿದ್ದೇ ಅಂತ ಮೃತಳ ತಂದೆ ಈಗ ಕಣ್ಣೀರು ಹಾಕುತ್ತಿದ್ದಾರೆ. ಪತಿಯ ಕುಟುಂಬಸ್ಥರ ವಿರುದ್ಧ ಮಹಿಳೆ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಮುದ್ದಾದ ಮಗಳನ್ನು ಕಳೆದುಕೊಂಡು ಹೆತ್ತವರು ಆಕ್ರಂದನದಲ್ಲಿದ್ದಾರೆ. ಮುದ್ದಿನ ಮಗಳ ಕಳೆದುಕೊಂಡು ತಂದೆಯ ಗೋಳಾಟ. ತಮ್ಮನ ಮದುವೆ ಮಾಡಿಕೋ ಅಂದ್ರೂ ಮಾಡಿಕೊಳ್ಳಲಿಲ್ಲ. ಈಗ ಹೆಣವಾದೆಯಾ ಮಗಳೇ? ಅಂತ ತಾಯಿಯ ಕಣ್ಣೀರು. ಕೊಂದ ಕಿರಾತರಿಗೆ ಕಠಿಣ ಶಿಕ್ಷೆ ಆಗಬೇಕು ಅಂತ ಕುಟುಂಬಸ್ಥರ ಆಕ್ರೋಶ. ಹೆತ್ತ ತಾಯಿ ಕಳೆದುಕೊಂದು ಮುದ್ದಾದ ಕಂದನ ಕಣ್ಣೀರು. ಎಸ್. ಈ ಎಲ್ಲ ಮಕಲಕುವ ದೃಶ್ಯಗಳು ಕಂಡಿದ್ದು ಗದಗ ಜಿಲ್ಲೆಯ ನರಗುಂದ (Nargund) ಪಟ್ಟಣದಲ್ಲಿ.
ಬಂಡಾಯದ ನಾಡು ಬುಧವಾರ ಬೆಳ್ಳಂಬೆಳಗ್ಗೆ ಅಕ್ಷರಶಃ ಬೆಚ್ಚಿ ಬಿದ್ದಿದೆ. ಸರಸ್ವತಿ ನಗರದಲ್ಲಿ ನಿನ್ನೆ ಬೆಳಗ್ಗೆ ದುರ್ವಾಸನೆ ಬೀರಿತ್ತು. ಏನಾಗಿದೆ ಇಷ್ಟೊಂದು ವಾಸನೆ ಬರ್ತಾಯಿದೆ ಎಂದು ಜನ್ರು ಓಡಾಡಿದ್ದಾರೆ. ಆಗ ಕಂಡಿದ್ದೇ ಎಂ ಸ್ಯಾಂಡ್ ನಲ್ಲಿ ಹೂತು ಹಾಕಿದ್ದ ಮಹಿಳೆಯ ಶವವನ್ನು. ಶವ ನೋಡಿ ಇಡೀ ಬಡಾವಣೆಯ ಜನರು ದಂಗಾಗಿದ್ರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಓಡೋಡಿ ಬಂದ ಸಿಪಿಐ ಮಲ್ಲಯ್ಯ ಮಠಪತಿ ಕೂಡ ಶಾಕ್ ಆಗಿದ್ದಾರೆ. ಮಹಿಳೆಯ ಶವ ಪರಿಶೀಲನೆ ಮಾಡಿದಾಗ ಕಲ್ಲಿನಿಂದ ತಲೆ ಜಜ್ಜಿ ಹತ್ಯೆ ಮಾಡಿದ್ದು, ಕಂಡು ಬಂದಿದೆ.
ಆಗ ಗೊತ್ತಾಗಿದ್ದು ಕೊಲೆಯಾದ ಮಹಿಳೆ ಸವಿತಾ ಪಾಟೀಲ್ ಅನ್ನೋವ್ರು. ಅದೇ ಸರಸ್ವತಿ ಬಡಾವಣೆ ನಿವಾಸಿ. ನರಗುಂದ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಸವಿತಾ ಪಾಟೀಲ್ ನರ್ಸ್ ಆಗಿ ಸೇವೆ ಮಾಡ್ತಾಯಿದ್ದರು. ಏಪ್ರಿಲ್ 10 ಬೆಳಗ್ಗೆ ಸೇವೆಗೆ ಹೋಗಿದ್ದರು. ಆದ್ರೆ, ರಾತ್ರಿಯಾದ್ರೂ ಸವಿತಾ ಮನೆಗೆ ವಾಪಸ್ ಆಗಿಲ್ಲ. ಹೀಗಾಗಿ ಪತಿ ಹಾಗೂ ಮನೆಯವ್ರು ರಾತ್ರಿಯಿಡೀ ಹುಡುಕಾಡಿದ್ದಾರೆ. ಬೆಳಗ್ಗೆ ಪತಿ ಈರಣಗೌಡ ಪಾಟೀಲ್ ನರಗುಂದ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ. ಸ್ಥಳದಲ್ಲಿ ಸಿಕ್ಕಿದ ಹೆಣವನ್ನು ಪರಿಶೀಲನೆ ಮಾಡಿದಾಗ ಅದು ನಾಪತ್ತೆಯಾಗಿದ್ದ ಸವಿತಾ ಮೃತದೇಹ ಅನ್ನೋದು ಗೊತ್ತಾಗಿದೆ. ಹೆತ್ತ ಮಗಳನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಯಾರೂ ವೈರಿಗಳು ಇಲ್ಲ. ಯಾರೊಂದಿಗೆ ಹಗೆತನ, ವ್ಯವಹಾರವಿಲ್ಲ. ಆದ್ರೂ ಮಗಳನ್ನು ಕೊಂದಿದ್ದಾರೆ ಪಾಪಿಗಳು ಅಂಥವ್ರಿಗೆ ಶಿಕ್ಷೆ ಆಗಬೇಕು ಅಂತ ಒತ್ತಾಯಿಸಿದ್ದಾರೆ.
ಕೊಲೆಯಾದ ಸವಿತಾ ಪಾಟೀಲ್ ತವರೂರು ಹಾವೇರಿ ಜಿಲ್ಲೆಯ ಶಿಗ್ಗಾವಿ. ಕಳೆದ ತಿಂಗಳು ತವರಿನಲ್ಲಿ ಜಾತ್ರೆ ಇತ್ತು. ಮಗಳು, ಮೊಮ್ಮಗಳು ಕೂಡ ಜಾತ್ರೆಗೆ ಬಂದಿದ್ರು. ಸವಿತಾ ನನ್ನ ಪ್ರೀತಿಯ ಮಗಳು. ಎಲ್ಲ ಮಕ್ಕಳಿಗೂ ಹೊಸ ಸೀರೆ, ಬಟ್ಟೆ ಮಾಡಿ ಕಳಿಸಿದ್ದೆ. ಆದ್ರೆ, ಈಗ ಮಗಳು ಹೆಣವಾಗಿದ್ದಾಳೆ ಅಂತ ತಂದೆ ಕಣ್ಣೀರು ಹಾಕಿದ್ದಾರೆ. ಮಹಿಳೆಯ ಕೊಲೆಗೆ ಇಡೀ ನರಗುಂದವೇ ಆಕ್ರೋಶ ಹೊರಹಾಕಿದೆ. ಆಸ್ಪತ್ರೆಗೆ ಹೋದ ಮಹಿಳೆ ಮೂರು ದಿನಗಳ ಬಳಿಕ ಹೆಣವಾಗಿ ಪತ್ತೆಯಾಗಿದ್ದಾಳೆ. ಕೊಂದ ಹಂತಕರು ಯಾರು, ಕೊಲೆಗೆ ಕಾರಣ ಏನೂ ಅನ್ನೋದು ಸೇರಿದಂತೆ ಎಲ್ಲ ಆಯಾಮಗಳಲ್ಲಿಯೂ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
ಹೆತ್ತವರಿಗೇ ಶಾಕ್! 7 ಹೆಜ್ಜೆ ಹಾಕಿ ಮದುವೆಯಾಗಿದ್ದ ದುಷ್ಟ 7 ತಿಂಗಳು ಮುಗಿಯುವಷ್ಟರಲ್ಲೆ ಪತ್ನಿಯ ಜೀವಕ್ಕೆ ಕೊಳ್ಳಿಯಿಟ್ಟ
ಮೊದಲು ಸವಿತಾ ಸೋದರ ಮಾವನಿಗೆ ಮದುವೆ ಮಾಡಿಕೊಡಬೇಕು ಎಂಬುದು ತಾಯಿಯ ಆಸೆಯಾಗಿತ್ತಂತೆ. ಆದ್ರೆ, ಸವಿತಾ ಈರನಗೌಡನನ್ನು ಮದುವೆಯಾಗಿದ್ದಾಳೆ. ಈಗ ಮಗಳ ಕೊಲೆ ಕಂಡು ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಸೋದರ ಮಾನವನ ಜೊತೆ ಮದುಯಾಗಿದ್ರೆ ಸುಖವಾಗಿ ಇರ್ತೀದ್ದೇ ಅಂತಾ ಕಣ್ಣೀರು ಹಾಕಿದ್ದಾರೆ. ಸವಿತಾ ಹಾಗೂ ಈರನಗೌಡ ಮದುವೆಯಾಗಿ ಒಂಬತ್ತು ವರ್ಷಗಳಾಗಿವೆ. ಬಡತನದಲ್ಲೂ ಸುಂದರ ಸಂಸಾರ ಮಾಡಿದ್ದಾರೆ. ಒಬ್ಬಳು 7ವರ್ಷದ ಮುದ್ದಾದ ಮಗು ಕೂಡ ಇದೆ. ಆದ್ರೆ, ಯಾಕೆ ಆಕೆಯ ಕೊಲೆ ಆಯ್ತು ಅನ್ನೋದು ನಮಗೂ ಗೊತ್ತಿಲ್ಲ ಅಂತಿದ್ದಾರೆ ಕುಟುಂಬಸ್ಥರು.
ಮಹಿಳೆಯ ಕೊಲೆಗೆ ಇಡೀ ನರಗುಂದವೇ ಬೆಚ್ಚಿಬಿದ್ದಿದೆ. ಇಡೀ ಬಡಾವಣೆ ಜನ್ರೇ ಜಮಾಯಿಸಿದ್ದಾರೆ. ಎಲ್ಲರಲ್ಲೂ ಆತಂಕ, ಭಯ ಆವರಿಸಿತ್ತು. ನಮ್ಮೂರಿನ ಮಹಿಳೆಯ ಭೀಕರ ಕೊಲೆ ಹಂತಕರು ಯಾರು ಅನ್ನೋ ಗುಸುಗುಸು ನಡೆದಿತ್ತು. ಕುಟುಂಬಸ್ಥರು ತಮ್ಮ ಕೆಲಸವಾಯ್ತು, ತಾವಾಯ್ತು ಅಂತಾ ಇದ್ದವ್ರು. ಆದ್ರೆ, ಸವಿತಾಳ ಕೊಲೆ ಮಾಡಿದ್ದು ಯಾರು, ಯಾಕೇ ಅನ್ನೋದು ಎಲ್ಲರಿಗೂ ಕಾಡ್ತಾಯಿದೆ. ಪೊಲೀಸ್ ತನಿಖೆಯಿಂದಲೇ ಮಹಿಳೆಯ ಕೊಲೆ ರಹಸ್ಯ ಬಯಲಾಗಬೇಕಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ
ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Published On - 10:51 am, Thu, 13 April 23