ಕಾಯಕಲ್ಪಕ್ಕೆ ಕಾದಿದೆ ನಗರೇಶ್ವರ ದೇವಾಲಯ, ಪಾಳುಬಿದ್ದ ಸ್ಥಿತಿಯಲ್ಲಿರುವ ಪುರಾತನ ದೇವಾಲಯಕ್ಕೆ ಬೇಕಿದೆ ಮರುಜೀವ

| Updated By: shruti hegde

Updated on: Nov 15, 2021 | 7:38 AM

2014 ರಲ್ಲಿ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಅವರು ಜೀರ್ಣೋದ್ದಾರ ಕಾಮಗಾರಿ ಕೈಗೊಂಡಿದ್ದರು. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಆಗಲೇ ಇಲ್ಲ. ಮೇಲ್ಚಾವಣಿ ಮಳೆ ಬಂದರೆ ಈಗಲೂ ಸೋರುತ್ತಿದೆ. ಹೊರ ಆವರಣದಲ್ಲಿನ ದೀಪ ಕಂಬದ ಜಾಗದಲ್ಲಿ ಧರ್ಮಶಾಲೆ ಇದ್ದು ಅದು ಸಹ ಜೀರ್ಣೋದ್ದಾರ ಆಗಬೇಕಿದೆ.

ಕಾಯಕಲ್ಪಕ್ಕೆ ಕಾದಿದೆ ನಗರೇಶ್ವರ ದೇವಾಲಯ, ಪಾಳುಬಿದ್ದ ಸ್ಥಿತಿಯಲ್ಲಿರುವ ಪುರಾತನ ದೇವಾಲಯಕ್ಕೆ ಬೇಕಿದೆ ಮರುಜೀವ
ನಗರೇಶ್ವರ ದೇವಾಲಯ
Follow us on

ಗದಗ: ಕಲ್ಯಾಣ ಚಾಲುಕ್ಯರ ಕಾಲದ ಕ್ರಿ.ಶ 1019 ರ ಶಾಸನದಲ್ಲಿ ಉಲ್ಲೇಖವಾಗಿರುವ ಇಲ್ಲಿನ ಪ್ರಾಚೀನ ನಗರೇಶ್ವರ ದೇವಾಲಯ ಜೀರ್ಣೋದ್ದಾರವಾಗದೆ ಇರುವುದರಿಂದ ಪಾಳುಬಿದ್ದ ಸ್ಥಿತಿಯಲ್ಲಿದ್ದು ಕಾಯಕಲ್ಪಕ್ಕೆ ಕಾದಿದೆ. ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ಐತಿಹಾಸಿಕ ದೇವಾಲಯ ಇದೆ. ಈ ನಗರೇಶ್ವರ ದೇವಾಲಯ ಪಟ್ಟಣದ ಅಬ್ಬಿಕೆರೆಯ ದಕ್ಷಿಣ ದಿಕ್ಕಿನಲ್ಲಿ ಪೂರ್ವ ಮುಖವಾಗಿದೆ. 1019 ರಲ್ಲಿ ನಕರರು ಕಟ್ಟಿಸಿದರೂ ಎನ್ನುವ ಪ್ರತೀತಿ ಇದೆ. ಹೀಗಾಗಿ ಇದು ನಗರೇಶ್ವರ ದೇವಾಲಯವಾಗಿದೆ.

ಅಂದಿನ ಕಾಲದಲ್ಲಿ ಪಟ್ಟಣದ ಆಧಿದೈವವಾಗಿತ್ತು. ಈ ದೇವರ ಅನುಗ್ರಹದಿಂದ ಸುಖಸಮೃದ್ದಿಗಳು ಪ್ರಾಪ್ತವಾಗುತ್ತೇಂಬ ಅಂದಿನವರ ನಂಬಿಕೆ ಆಗಿತ್ತು. ನಗರೇಶ್ವರ ದೇವಾಲಯವು ಗರ್ಭಗುಡಿ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ಇಲ್ಲಿರುವ ಗರ್ಭಗುಡಿಯಲ್ಲಿ 3 ಅಡಿ ಎತ್ತರದ ಶಿವಲಿಂಗ ಪ್ರತಿಷ್ಠಾಪಿಸಲಾಗಿದೆ. ಕಂಬಗಳಲ್ಲಿ ಗಜಲಕ್ಷ್ಮೀ ಉಬ್ಬು ಶಿಲ್ಪವಿದ್ದು ದ್ವಾರದ ಎಡ ಭಾಗದಲ್ಲಿ ಸಿಂಹ, ಆನೆ ದೊಡ್ಡ ಶಿಲ್ಪ ಕೆತ್ತಲಾಗಿದೆ. ದೇವಾಲಯಕ್ಕೆ ತಕ್ಕಂತೆ ಕದಂಬ ನಾಗರ ಶೈಲಿಯ ಗೋಪುರವಿದ್ದು ಮೆಟ್ಟಿಲುಗಳ ಆಕಾರದಲ್ಲಿ ನಿರಲಂಕೃತ ಕಪ್ಪು ಕಲ್ಲುಗಳ ಜೋಡನೆಯನ್ನ ಏರಿಕೆ ಕ್ರಮದಲ್ಲಿ ಕಟ್ಟಲಾಗಿದ್ದು ಸುಂದರ ಕಲಾಕುಸುರಿ ಹೊಂದಿದೆ.

ವೈವಿದ್ಯಮಯ ವಿನ್ಯಾಸಲ್ಲಿ ನಿರ್ಮಿಸಲ್ಪಟ್ಟ ನಗರೇಶ್ವರ ದೇವಾಲವು ಇಂದು ಸಂರಕ್ಷಣೆ ಇಲ್ಲದೇ ಪಾಳುಬೀಳುವ ಸ್ಥಿತಿಯಲ್ಲಿದೆ. ಈ ದೇವಾಲಯವನ್ನ ಸ್ಥಳೀಯರು ಸಮಿತಿ ರಚಿಸಿಕೊಂಡು ಸಾಧ್ಯವಿದ್ದಷ್ಟು ರಕ್ಷಣೆ ಮಾಡುತ್ತಿದ್ದು ನಿತ್ಯವು ಪೂಜೆ ಸಲ್ಲಿಸಲಾಗುತ್ತಿದೆ. 2014 ರಲ್ಲಿ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಅವರು ಜೀರ್ಣೋದ್ದಾರ ಕಾಮಗಾರಿ ಕೈಗೊಂಡಿದ್ದರು. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಆಗಲೇ ಇಲ್ಲ. ಮೇಲ್ಚಾವಣಿ ಮಳೆ ಬಂದರೆ ಈಗಲೂ ಸೋರುತ್ತಿದೆ. ಹೊರ ಆವರಣದಲ್ಲಿನ ದೀಪ ಕಂಬದ ಜಾಗದಲ್ಲಿ ಧರ್ಮಶಾಲೆ ಇದ್ದು ಅದು ಸಹ ಜೀರ್ಣೋದ್ದಾರ ಆಗಬೇಕಿದೆ. ಪ್ರಾಚೀನ ದೇವಾಲಯಗಳನ್ನ ಉಳಿಸಿ ಮುಂದಿನ ಜನಾಂಗಕ್ಕೆ ತೋರಿಸುವ ಕೆಲಸ ನಡೆಯಬೇಕು ಎಂದು ಅರ್ಚಕ ಪ್ರಮೋದ ಡಂಬಳ ಹೇಳಿದ್ದಾರೆ.

ಈ ದೇವಾಲಯದ ಪಕ್ಕದಲ್ಲೇ ಈಶ್ವರ, ಶಂಕರಾಚಾರ್ಯರ ಮೂರ್ತಿ ಸ್ಥಾಪಿಸಲ್ಪಟ್ಟ ಚಿಕ್ಕ ದೇವಾಲವುಕೂಡಾ ಇದೆ. ಅಲ್ಲದೇ ಐತಿಹಾಸಿಕ ಅಬ್ಬಿಕೆರೆ ಇದ್ದು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಗಮನಹರಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಸಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇದನ್ನೂ ಓದಿ: Temple Tour: ಶಿಲ್ಪಕಲೆಯಿಂದ ಗಮನ ಸೆಳೆಯುತ್ತಿದೆ ಐತಿಹಾಸಿಕ ದೇವಾಲಯ